ಮುಂಬಯಿ : ಆರ್ಥಿಕ ಪ್ರಗತಿಯ ಸೂಚ್ಯಂಕಗಳು ನಿರಾಶಾದಾಯಕವಾಗಿರುವ ಹೊರತಾಗಿಯೂ ಮತ್ತು ವಿದೇಶಿ ಬಂಡವಾಳದ ಹೊರ ಹರಿವು ನಿರಂತರವಾಗಿ ಸಾಗುತ್ತಿರುವ ಹೊರತಾಗಿಯೂ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 131.52 ಅಂಕಗಳ ಏರಿಕೆಯೊಂದಿಗೆ 34,865.10 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 40 ಅಂಕಗಳ ಜಿಗಿತವನ್ನು ಸಾಧಿಸಿ 10,512.50 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿ ಇಂದು ಮತ್ತೆ 74 ರೂ. ಗಡಿಯನ್ನು ದಾಟಿ 74.05 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,785 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,637 ಶೇರುಗಳು ಮುನ್ನಡೆ ಸಾಧಿಸಿದವು; 967 ಶೇರುಗಳು ಹಿನ್ನಡೆಗೆ ಗುರಿಯಾದವು; 181 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದು ಪ್ರಕಟಗೊಂಡಂತೆ ಕೈಗಾರಿಕಾ ಉತ್ಪಾದನೆ ಕಳೆದ ಆಗಸ್ಟ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾಗಿ ಶೇ.4.3ಕ್ಕೆ ಕುಸಿಯಿತು. ಚಿಲ್ಲರೆ ಹಣದುಬ್ಬರ ಸ್ವಲ್ಪ ಮಟ್ಟಿನ ಏರಿಕೆಯೊಂದಿಗೆ ಶೇ.3.77ಕ್ಕೆ ಏರಿರುವುದು ಕಂಡು ಬಂತು.