ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಸೋಮವಾರ ನಡೆಯುವ ವಾರ ಸಂತೆ, ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಚಿಂತೆಯಾಗಿದ್ದು, ಪುರಸಭೆ ಸಾಮಾನ್ಯ ಸಭೆಯಲ್ಲಿ ಸಂತೆ ಸ್ಥಳಾಂತರವಾಗಬೇಕು ಎಂಬ ನಿರ್ಣಯವಾಗಿದ್ದರೂ ಸ್ಥಳಾಂತರವಾಗದೆ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜು, ಕೌಸಲ್ಯ ಶಾಲೆ ಹಾಗೂ ಎಸ್‌ಎಂಎಸ್ ಕಾಲೇಜುಗಳು ಸೇರಿ ದಂತೆ ಇತರ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ದಿನನಿತ್ಯ ಓಡಾಡುವ ದಾರಿಗೆ ಅಡ್ಡವಾಗಿ ಸೋಮ ವಾರದ ವಾರದ ಸಂತೆ ನಡೆಯುತ್ತಿದ್ದು, ಸಂತೆಯ ದಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಅಪಘಾತ ಸರ್ವೇ ಸಾಮಾನ್ಯ: ಬಿಎಚ್ ರಸ್ತೆಯ ಪಕ್ಕದಿಂದ ಸಂತೆ ಪ್ರಾರಂಭವಾಗಿದ್ದು, ಸಾರ್ವ ಜನಿಕರು ವಸ್ತುಗಳನ್ನು ಕೊಂಡುಕೊಳ್ಳುವ ಭರದಲ್ಲಿ ಬಿಎಚ್ ರಸ್ತೆಯ ವಾಹನಗಳ ಓಡಾಟ ಗಮನಿಸದೆ ಅನೇಕ ಅಪಘಾತಗಳು ನಡೆದಿವೆ. ವಾಹನ ಸವಾರರು ವೇಗವಾಗಿ ಬರುವುದರಿಂದ ವಾಹನಗಳ ಮುಖಾಮುಖೀ ಡಿಕ್ಕಿ ಹೊಡೆದುಕೊಂಡು ಅಪ ಘಾತಗಳು ನಡೆಯುತ್ತಿದೆ. ಸಂತೆ ಮಾಡಿಕೊಂಡು ಬರುವುದಾಗಿ ಮನೆಯವರಿಗೆ ಹೇಳಿ ಹೊದವರು ಅಪಘಾತವಾಗಿ ಆಸ್ಪತ್ರೆ ಸೇರಿರುವ ಅನೇಕ ಪ್ರಕರಣ ಗಳು ಸಂತೆಯ ಸ್ಥಳದಿಂದ ನಡೆಯುತ್ತಿದೆ.
ಚಿಕ್ಕದಾದ ಸಂತೆ ನಡೆಯುವ ಸ್ಥಳ: ಸಂತೆ ನಡೆಯುವ ಸ್ಥಳ ಅತೀ ಚಿಕ್ಕದಾಗಿದ್ದು, ರಸ್ತೆಗಳ ಅಕ್ಕ ಪಕ್ಕದಲ್ಲಿಯೇ ವಸ್ತುಗಳನ್ನು ಮಾರಾಟ ಮಾಡಲು ಮಾರಾಟಗಾರರು ಕುಳಿತುಕೊಂಡಿರುತ್ತಾರೆ.
ಪುರಸಭೆಯಲ್ಲಿ ಸಂತೆ ಸ್ಥಳಾಂತರಕ್ಕೆ ನಿರ್ಣಯ ಪಾಸ್: ಶಾಸಕ ಜೆ.ಸಿ.ಮಾಧುಸ್ವಾಮಿಯವರು 2018ರಲ್ಲಿ ಮಹಮ್ಮದ್ ಖಲಂದಾರ್ ಅಧ್ಯಕ್ಷತೆ ಯಲ್ಲಿ ನಡೆದಿದ್ದ ಪುರಸಭಾ ಸಮಾನ್ಯ ಸಭೆಯಲ್ಲಿ ಸೋಮವಾರದ ವಾರದ ಸಂತೆಯನ್ನು ಪಟ್ಟಣದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಪ್ರಕಾರ ಅಂದಿನ ಬಹುತೇಕ ಪುರಸಭಾ ಸದಸ್ಯರು ಒಪ್ಪಿಗೆ ನೀಡಿದ್ದರು. ಆದರೆ, ಸಂತೆ ಸ್ಥಳಾಂತರಿಸುವ ವಿಷಯ ಪುರಸಭೆ ಮರೆತಿದ್ದು, ಸಂತೆ ಸ್ಥಳಾಂತರಕ್ಕೆ ನಿರ್ಣಯ ಪಾಸ್ ಆಗಿದ್ದರೂ ಸ್ಥಳಾಂತರ ಫೇಲ್ ಆಗಿದೆ.
ತರಕಾರಿಗಳ ಗಬ್ಬು ವಾಸನೆ: ನಮಗೆ ಸೋಮವಾರ ಕಾಲೇಜಿಗೆ ಹೊಗಲು ತೊಂದರೆಯಾಗುತ್ತಿದೆ. ಸಾವಿ ರಾರು ಜನರ ಮಧ್ಯೆ ನುಗ್ಗಿಕೊಂಡು ತೆರಳಬೇಕು. ಸಂತೆ ಕಳೆದ ಮರುದಿನ ಕೊಳೆತ ತರಕಾರಿಗಳ ಗಬ್ಬು ವಾಸನೆ ಬರುತ್ತದೆ. ಸಂತೆ ಸ್ಥಳಾಂತರಿಸಿದರೆ ಎಲ್ಲಾರಿಗೂ ಅನುಕೂಲವಾಗುತ್ತದೆ ಎಂದು ಕಾಲೇಜು ವಿದ್ಯಾರ್ಥಿ ಪ್ರಕಾಶ್ ಹೇಳುತ್ತಾರೆ.
ಸಂತೆ ಮಾಡಲು ಬರುವವರು ಪ್ರಾಣ ಭಯದಲ್ಲಿ ಬರುತ್ತಿದ್ದಾರೆ. ಬಿಎಚ್ ರಸ್ತೆಯಲ್ಲಿನ ವಾಹನಗಳ ಸೋಮವಾರ ಹೆಚ್ಚಾಗಿದ್ದು, ಶಾಲೆ-ಕಾಲೇಜು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಬರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಅಪಘಾತಗಳು ಕಟ್ಟಿಟ್ಟ ಬುತ್ತಿ ಎಂದು ಸಾರ್ವಜನಿಕ ಕಿರಣ್ ಹೇಳುತ್ತಾರೆ.
* ಚೇತನ್