Advertisement

ವರಿಷ್ಠರು ಲೆಕ್ಕಾಚಾರ ಮಾಡಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ: ಕಾರಜೋಳ

03:05 PM Nov 12, 2023 | keerthan |

ವಿಜಯಪುರ: ಬಿಜೆಪಿ ಕೇಂದ್ರ ವರಿಷ್ಠರು ಲೆಕ್ಕಾಚಾರ ಮಾಡಿಯೆ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಸಕ್ರಿಯ ರಾಜಕೀಯದಲ್ಲಿರುವ ಆಕಾಂಕ್ಷಿಗಳು ಅವಕಾಶ ತಪ್ಪಿದ್ದಕ್ಕೆ ಸಹಜವಾಗಿ ಅಸಮಾಧಾನ ವ್ಯಕ್ತಪಡಿಸುವುದು ಸಹಜ ಪ್ರಕ್ರಿಯೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.

Advertisement

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ನಮ್ಮ ಪಕ್ಷ ಸರ್ಕಾರವನ್ನು ಕಳೆದುಕೊಂಡಿದೆ. ಹೀಗಾಗಿ ಪಕ್ಷದ ವರಿಷ್ಠರು ಅಳೆದು ತೂಗಿ ಯುವನಾಯಕ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಮನೆಯಲ್ಲಿ ಅನುಭವಿ ತಂದೆ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ವಿಜಯೇಂದ್ರ ಎಲ್ಲ ಸಮುದಾಯದ ನಾಯಕರನ್ನು ಒಗ್ಗೂಡಿಸಿ ಕರೆದೊಯ್ಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2013 ರಲ್ಲಿ ಯಶಸ್ವಿಯಾಗಿದ್ದ ಸಿದ್ದರಾಮಯ್ಯ ತಮ್ಮದೇ ಸರ್ಕಾರವಿದ್ದರೂ 2018ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ಕಾರಜೋಳ, ಆಯಾ ಕಾಲಘಟ್ಟದಲ್ಲಿ ಜನರ ಮನಸ್ಥಿತಿಯೂ ಬದಲಾಗುತ್ತದೆ. ಗ್ಯಾರಂಟಿ ತೋರಿಸಿ ಕಾಂಗ್ರೆಸ್ ಗೆದ್ದಿದೆ. ಹಾಗಂತ ಯಾವುದೂ ಶಾಶ್ವತವಾಗಿ ಇರಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಒಬ್ಬರೇ ಕಾರಣರಲ್ಲ. ಗ್ಯಾರಂಟಿ ಹೆಸರಿನ ಸುಳ್ಳು ಕಾರಣ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಮತ್ತೊಮ್ಮೆ ಚುನಾವಣೆ ಎದುರಿಸಿ ಗೆದ್ದು ಬರಲಿ ಎಂದು ಸವಾಲು ಹಾಕಿದರು.

ಲೋಕಸಭೆ ಚುನಾವಣೆಯಲ್ಲಿ ನಾನು ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಕಾರಜೋಳ, ಯುವಕರಿಗೆ ಅವಕಾಶ ನೀಡಲು ಹಾಲಿ ಸಂಸದ ಸದಾನಂದಗೌಡ ಮರು ಸ್ಪರ್ಧೆ ಇಲ್ಲವೆಂದಿದ್ದಾರೆ. ಸದಾನಂದಗೌಡ ಅವರ ಈ ನಿರ್ಧಾರದ ಹಿಂದೆ ಪಕ್ಷದ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಕಾಂಗ್ರೆಸ್ ನಾಯಕರ ಗ್ಯಾರಂಟಿ ಅಸೆಯ ಮಾತು ಕೇಳಿ ರಾಜ್ಯದ ಮತದಾರ‌ ಮೋಸ ಹೋಗಿದ್ದು, ರಾಜ್ಯ ಸರ್ಕಾರದ ವಿರುದ್ಧ ರೋಷಗೊಂಡಿದ್ದಾನೆ. ರಾಜ್ಯದ ಜನರು ದೀಪಾವಳಿ ಹಬ್ಬದಲ್ಲೂ ಕತ್ತಲಲ್ಲಿ ಕುಳಿತುಕೊಳ್ಳುವಂತೆ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಭಾರಿ ಪ್ರಮಾಣದಲ್ಲಿ ವ್ಯಕ್ತವಾಗಿದೆ ಎಂದರು.

ಇದನ್ನೂ ಓದಿ:World Cup: ಉಪಾಂತ್ಯಕ್ಕೆ ಮೊದಲು ಟೀಂ ಇಂಡಿಯಾಗೆ ಡಚ್ಚರ ಸವಾಲು; ಟಾಸ್ ಗೆದ್ದ ಭಾರತ

ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸರ್ಕಾರ ಅನ್ನದಾತರ ನೆರವಿಗೆ ಧಾವಿಸಿಲ್ಲ. ಪಂಪ್ ಸೆಟ್ ಗಳಿಗೆ ವಿದ್ಯುತ್ ಕೊಡಲಾಗದ ಸುಳ್ಳು ಗ್ಯಾರಂಟಿ ಸರ್ಕಾರ, ರೈತರ ಪಂಪ್ ಸೆಟ್ ವಿದ್ಯುತ್ ಸಂಪರ್ಕ ಪಡೆಯಲು ಲಕ್ಷಾಂತರ ರೂ. ಹೊರೆ ಹೇರಲು ಮುಂದಾಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ ಎಂದು ಹರಿಹಾಯ್ದರು.

ಪಕ್ಷದ ವರಿಷ್ಠರು ಯುವ ನಾಯಕರಿಗೆ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಟ್ಟಲು ಯಡಿಯೂರಪ್ಪ 50 ವರ್ಷ ದುಡಿದಿದ್ದು, ಅವರೊಂದಿಗೆ ದುಡಿದ ನನಗೂ ಉತ್ತಮ ಅವಕಾಶ ಸಿಕ್ಕಿವೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ 25 ಸ್ಥಾನ ಮಾತ್ರವಲ್ಲ 28 ಕ್ಷೇತ್ರಗಳಲ್ಲೂ ವಿಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯೇಂದ್ರ ನೇಮಕದಿಂದ ಕಾಂಗ್ರೆಸ್ ಪಕ್ಷ, ಸರ್ಕಾರದ ಮೇಲೆ ಏನೂ ಪರಿಣಾಮ ಬೀರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರಬಹುದು. ಹಾಗಿದ್ದರೆ ಈ ಹಿಂದೆ ಅವರೇ ಮುಖ್ಯಮಂತ್ರಿ ಆಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಏಕೆ ಸಾಧ್ಯವಾಗಲಿಲ್ಲ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next