Advertisement

Yakshagana ರಂಗದಿಂದ ಮರೆಯಾದ ಹಿರಿಯ ವೇಷಧಾರಿ ಪೇತ್ರಿ ಮಾಧವ ನಾಯ್ಕ್

05:20 PM Jun 05, 2024 | Team Udayavani |

ಬ್ರಹ್ಮಾವರ: ಯಕ್ಷಗಾನ ಬಡಗು ತಿಟ್ಟಿನ ಹಿರಿಯ ಕಲಾವಿದರಾದ ಪೇತ್ರಿ ಮಾಧವ್ ನಾಯ್ಕ್ ಅವರು ಬುಧವಾರ ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

Advertisement

ಬ್ರಹ್ಮಾವರ ತಾಲೂಕಿನ ಪೇತ್ರಿ ಸಮೀಪದ ಹಲುವಳ್ಳಿಯ ವಾಮನ ನಾಯ್ಕ್-ಮೈದಾ ಬಾಯಿ ದಂಪತಿಗಳ ಪುತ್ರನಾಗಿ 1940ರಲ್ಲಿ ಜನಿಸಿದ ಮಾಧವ ನಾಯ್ಕ ಅವರಿಗೆ ಯಕ್ಷಗಾನದ ಮದ್ದಳೆಯ ಕ್ರಾಂತಿಕಾರ, ಸೋದರ ಮಾವ ತಿಮ್ಮಪ್ಪ ನಾಯ್ಕರು ಮೊದಲ ಗುರು.

ದಿಗ್ಗಜ ಗುರು ತಿಮ್ಮಪ್ಪ ನಾಯ್ಕರ ಮಾರ್ಗದರ್ಶನದಲ್ಲಿ ಯಕ್ಷರಂಗಕ್ಕೆ ಕಾಲಿಟ್ಟ ಮಾಧವ ನಾಯ್ಕರು ಎಲ್ಲರಿಗೂ ಪ್ರೀತಿಯ ನೆಚ್ಚಿನ ಕಲಾವಿದರಾಗಿದ್ದು ಹಳೆಯ ಅನುಭವಗಳ ಆಗರವಾಗಿದ್ದರು. ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದ ಬಳಿಕ ಆ ಕಾಲದ ಪ್ರಸಿದ್ಧ ಕಲಾವಿದರಾದ ಭಾಗವತ ತೆಂಗಿನಜೆಡ್ಡು ರಾಮಚಂದ್ರ ರಾಯರು, ಗೋರ್ಪಾಡಿ ವಿಟ್ಠಲ ಪಾಟೀಲರು ಇನ್ನಷ್ಟು ಮಾರ್ಗದರ್ಶನ ನೀಡಿದರು.

14ನೇ ವಯಸ್ಸಿನಲ್ಲೆ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿ ಸಾಲಿಗ್ರಾಮ, ಪೆರ್ಡೂರು, ಮೂಲ್ಕಿ, ಅಮೃತೇಶ್ವರಿ ಮೇಳಗಳಲ್ಲಿ 30 ವರ್ಷಗಳ ಕಾಲ ವಿವಿಧ ಪಾತ್ರಗಳಲ್ಲಿ ರಂಜಿಸಿ ಅರ್ಥಪೂರ್ಣ ಕಲಾ ಸೇವೆ ಮಾಡಿದ್ದರು.

ಉಡುಪಿಯ ಯಕ್ಷಗಾನ ಕೇಂದ್ರದ ಮೂಲಕ ಯಕ್ಷರಂಗದ ತಿರುಗಾಟ ನೆಡೆಸಿದರು. ಡಾ| ಶಿವರಾಮ ಕಾರಂತರ ಮೆಚ್ಚುಗೆ ಪಡೆದು ಅವರ ತಂಡಕ್ಕೆ ಆಯ್ಕೆಯಾಗುವ ಮೂಲಕ ದುಬೈ, ಕೆನಡಾ , ಜಪಾನ್, ರಷ್ಯ, ಇಟಲಿ ಸೇರಿ ಹಲವು ಯುರೋಪ್ ದೇಶಗಳಿಗೆ ತೆರಳಿ ಅಲ್ಲಿನ ಜನರನ್ನು ಬೆರಗು ಮೂಡಿಸಿದ್ದರು.

Advertisement

ಬಾಹುಕ, ಘಟೋತ್ಕಚ, ಶೂರ್ಪನಖ ಸೇರಿ ಹಲವು ಬಣ್ಣದ (ರಾಕ್ಷಸ -ರಾಕ್ಷಸಿ) ವೇಷಗಳಲ್ಲಿ ಕಾಣಿಸಿಕೊಂಡು ವಿದೇಶಿಯರನ್ನು ಮೋಡಿ ಮಾಡಿದ್ದರು. ಹಳ್ಳಿಯವನಾದ ನಾನು ಕಾಲೇಜು ಮೆಟ್ಟಿಲು ಹತ್ತದೇ ಹೊದರೂ ವಿದೇಶಗಳಿಗೆ ಪ್ರಯಾಣ ಮಾಡಲು ಯಕ್ಷಗಾನ ಮತ್ತು ಡಾ| ಶಿವರಾಮ ಕಾರಂತರು ಕಾರಣವಾದರು ಎಂದು ಸದಾ ಸ್ಮರಣೆ ಮಾಡಿಕೊಳ್ಳುತ್ತಿದ್ದರು.

ಮರವಂತೆ ನರಸಿಂಹ ದಾಸ್, ಜಾನುವಾರುಕಟ್ಟೆ ಗೋಪಾಲ ಕೃಷ್ಣ ಕಾಮತ್ , ನಾರ್ಣಪ್ಪ‌ ಉಪ್ಪೂರ್ , ಗುಂಡ್ಮಿ ರಾಮಚಂದ್ರ ನಾವಡ, ಕಾಳಿಂಗ ನಾವಡ, ಮರಿಯಪ್ಪಾಚಾರ್, ಮತ್ಯಾಡಿ ನರಸಿಂಹ ಶೆಟ್ಟಿ, ನೀಲಾವರ ರಾಮಕೃಷ್ಣಯ್ಯ ಸೇರಿ ಅನೇಕ ಪ್ರಖ್ಯಾತ ಭಾಗವತರ ಪದ್ಯಗಳಿಗೆ ಹೆಜ್ಜೆ ಹಾಕಿದ್ದರು.

ದಿಗ್ಗಜ ಕಲಾವಿದರಾದ ರಾಷ್ಟ್ರ ಪ್ರಶಸ್ತಿ ವಿಜೇತ ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ವೀರಭದ್ರ ನಾಯ್ಕ್, ಮಹಾಬಲ ಗಾಣಿಗ, ಉಡುಪಿ ಬಸವ, ಮಾರ್ಗೋಳಿ ಗೋವಿಂದ ಸೇರೆಗಾರ್, ಹೆರಂಜಾಲು ಸಹೋದರರು, ಮೊಳಹಳ್ಳಿ ಹೆರಿಯ, ಅರಾಟೆ ಮಂಜುನಾಥ, ಹಳ್ಳಾಡಿ ಮಂಜಯ್ಯ ಶೆಟ್ಟಿ, ನಗರ ಜಗನ್ನಾಥ ಶೆಟ್ಟಿ, ಶಿರಿಯಾರ ಮಂಜುನಾಯ್ಕ, ಕೆರೆಮನೆ ಮಹಾಬಲ ಹೆಗಡೆ , ಚಿಟ್ಟಾಣಿ ರಾಮಚಂದ್ರ ಹೆಗಡೆ, ಕುಮಟಾ ಗೋವಿಂದ ನಾಯ್ಕ್ ಅವರ ಒಡನಾಟ ಹೊಂದಿ ಸಹಕಲಾವಿದರಾಗಿ ಅನೇಕ ಪಾತ್ರಗಳಿಗೆ ಪರಂಪರೆಯ ಚೌಕಟ್ಟಿನಲ್ಲಿ ಜೀವ ತುಂಬಿದ್ದರು.

ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಅವರ ಶಿಷ್ಯನಾಗಿ ಬಣ್ಣದ ವೇಷಧಾರಿಯಾಗಿ ರಂಗದಲ್ಲಿ ಅಬ್ಬರಿಸಿ ವೀರಭದ್ರ, ಮೈರಾವಣ, ಕಾಲಜಂಘ, ತಾರಕಾಸುರ, ಹಿಡಿಂಬಾಸುರ, ಹಿಡಿಂಬೆ ಮುಂತಾದ ಪಾತ್ರಗಳು ಜನಮನ್ನಣೆ ಪಡಿದಿವೆ. ಹಾರಾಡಿ ಮಹಾಬಲ ಗಾಣಿಗರ ನಂತರ ಕಿರಾತನ ಪಾತ್ರದಲ್ಲಿ ವಿಭಿನ್ನ ಯಕ್ಷಗಾನೀಯ ಜೋಡಿ ಕೋರೆ ಮುಂಡಾಸಿನ ಪಾತ್ರವನ್ನು ರಂಗದಲ್ಲಿ ಮಾಧವ ನಾಯ್ಕ್ ಮೆರೆಸಿದ್ದರು.

ರಾಕ್ಷಸ ಪಾತ್ರಗಳ ಈಗ ಮರೆಯಾಗಿರುವ ಸಂಪ್ರದಾಯಿಕ ಚಿಟ್ಟೆ ಮುಖವರ್ಣಿಕೆ ಬರೆಯುವ ವಿಭಿನ್ನ ಕಲೆ ಮಾಧವ ನಾಯ್ಕ ಅವರಿಗೆ ಸಿದ್ಧಿಸಿತ್ತು. ಈಗ ಮರೆಯಾದ ಅನೇಕ ವೇಷಗಳ ಕುರಿತು ವೈಶಿಷ್ಟ್ಯದ ಕುರಿತು ಅನುಭವ ಹೊಂದಿದ್ದರು. ಸಕ್ಕಟ್ಟು ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದನ್ನು ಹಿರಿಯ ಕಲಾಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ನೂರಾರು ಸಮ್ಮಾನಗಳಿಗೆ ಭಾಜನರಾಗಿದ್ದಾರೆ. ವಾರದ ಹಿಂದಷ್ಟೇ ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ಕೀರ್ತಿಶೇಷ ಹಾರಾಡಿ ರಾಮ ಗಾಣಿಗ ಪ್ರಶಸ್ತಿಯನ್ನು ಅರ್ಹವಾಗಿ ಪಡೆದು ಕಲಾ ಲೋಕದಿಂದ ಮರೆಯಾಗಿದ್ದಾರೆ. ಇದರಿಂದ ಪರಂಪರೆಯ ಹಿರಿಯ ಅನುಭವದ ಕೊಂಡಿಯೊಂದು ಬಡಾ ಬಡಗು ಮತ್ತು ಯಕ್ಷಗಾನ ರಂಗದಿಂದ ಮರೆಯಾಗಿದೆ.

ಅಪಾರ ಯಕ್ಷಗಾನ ಅಭಿಮಾನಿಗಳು ಮತ್ತು ಗಣ್ಯರು ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next