Advertisement
ನಾಣಿ ಹಾಸ್ಯಗಾರರೆಂದೇ ಯಕ್ಷ ವಲಯದಲ್ಲಿ ಪರಿಚಿತರಾಗಿದ್ದ ರಂಗಸ್ಥಳದ ಮೇಲೆ ಕೃಷ್ಣನ ಪಾತ್ರಕ್ಕೆ ಪರಮಾದ್ಭುತವಾಗಿ ಜೀವ ತುಂಬುತ್ತಿದ್ದ ನಾರಾಯಣ ಹಾಸ್ಯಗಾರ ಅವರು ತಮ್ಮದೇ ವಿಶಿಷ್ಟ ಶೈಲಿಯ ಪಾತ್ರ ನಿರ್ವಹಣೆಯಿಂದ ಮನೆಮಾತಾಗಿದ್ದರು.
1931 ಫೆಬ್ರವರಿ 2ರಂದು ಜನಿಸಿದ್ದ ನಾರಾಯಣ ಹಾಸ್ಯಗಾರ ಅವರು ಎಳವೆಯಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. ಅವರ ಮನೆಯಲ್ಲೇ ಯಕ್ಷಗಾನದ ವಾತಾರವಣ ಇದ್ದುದ್ದೇ ಇದಕ್ಕೆ ಪ್ರಮುಖ ಕಾರಣವಾಗಿತ್ತು.
Related Articles
Advertisement
ಬಳಿಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿದ್ದ ತಮ್ಮದೇ ಆದ ಕರ್ಕಿ ಹಾಸ್ಯಗಾರರ ಮೇಳದಲ್ಲಿ ತಂದೆ ಪರಮಯ್ಯ ಹಾಸ್ಯಗಾರ ಹಾಗೂ ಸಹೋದರರು ಮತ್ತು ಅಣ್ಣನ ಮಗನಾದ ಪಿ.ವಿ. ಹಾಸ್ಯಗಾರ ಜೊತೆ ಸೇರಿ ಸುಪ್ರಸಿದ್ಧ ಕಲಾವಿದರಾಗಿ ಹೊರಹೊಮ್ಮಿದರು.
ಬಭ್ರುವಾಹನ, ಅಭಿಮನ್ಯ, ಅರ್ಜುನ, ಸುಧನ್ವ, ಕೀಚಕ. ಶಿವ, ರಾಮ, ಕೃಷ್ಣ, ಲಕ್ಷ್ಮಣ, ವಾಲಿ, ಶಲ್ಯ, ಶಬರ ಮೊದಲಾದ ಪಾತ್ರಗಳಲ್ಲಿ ಇವರ ನಿರ್ವಹಣೆ ಅದ್ಭುತವಾಗಿತ್ತು. ಅಪರೂಪದ ಸನ್ನಿವೇಶಗಳಲ್ಲಿ ನಾರಾಯಣ ಹಾಸ್ಯಗಾರರು ಸ್ತ್ರೀ ಪಾತ್ರಗಳನ್ನು ಹಾಗೂ ಬಣ್ಣದ ವೇಷಗಳನ್ನು ಮಾಡಿರುವ ಉದಾಹರಣೆಯೂ ಇದೆ.
ಆದರೆ, ರಂಗದಲ್ಲಿ ನಾರಾಯಣ ಹಾಸ್ಯಗಾರರನ್ನು ಕಲಾವಿದನನ್ನಾಗಿ ಮೆರೆಯಿಸಿದ ಪಾತ್ರವೆಂದರೆ ಅದು ಕೃಷ್ಣನ ಪಾತ್ರ. ಕೃಷ್ಣಾರ್ಜುನ, ಚಂದ್ರಾವಳಿ ವಿಳಾಸ, ಸ್ಯಮಂತಕ ರತ್ನ, ಶ್ರೀ ಕೃಷ್ಣ ಪಾರಿಜಾತ ಮುಂತಾದ ಪ್ರಸಂಗಗಳಲ್ಲಿ ಕೃಷ್ಣನ ಪಾತ್ರಕ್ಕೆ ನಾಣಿ ಹಾಸ್ಯಗಾರರು ಅದ್ಭುತವಾಗ ಜೀವ ತುಂಬುತ್ತಿದ್ದರು ಎಂಬುದನ್ನು ಹಳೆಯ ತಲೆಮಾರಿನ ಪ್ರೇಕ್ಷಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.