Advertisement

ಕ್ರೀಡಾ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಧರಣಿ

07:30 AM Aug 18, 2017 | |

ಬೆಂಗಳೂರು: ನಗರದ ಗುರುನಾನಕ್‌ ಭವನವನ್ನು ಬಾಡಿಗೆಗೆ ಪಡೆದು ಕಾರ್ಯ ನಿರ್ವಹಿಸುತ್ತಿದ್ದ ರಾಷ್ಟ್ರೀಯ ನಾಟಕ ಶಾಲೆ(ಎನ್‌ಎಸ್‌ಡಿ)ಯ ರಂಗ ಪರಿಕರಗಳನ್ನು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಬೀದಿಗೆ ಎಸೆಯುವ
ಮೂಲಕ ಕಲಾಕ್ಷೇತ್ರಕ್ಕೆ ಅಪಮಾನ ಮಾಡಿದ್ದಾರೆ ಎಂದು ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ನಿರ್ದೇಶಕ ಬಸವಲಿಂಗಯ್ಯ ಆರೋಪಿಸಿದ್ದಾರೆ.

Advertisement

ಗುರುವಾರ ಗುರುನಾನಕ್‌ ಭವನದಲ್ಲಿದ್ದ ರಾಷ್ಟ್ರೀಯ ನಾಟಕ ಶಾಲೆಯಲ್ಲಿನ ರಂಗ ಪರಿಕರಗಳನ್ನು ಬೀದಿಗೆ ಎಸೆದ ಕ್ರೀಡಾ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಹಿರಿಯ ಸಾಹಿತಿಗಳು ಹಾಗೂ ರಂಗಕರ್ಮಿಗಳು ನಡೆಸಿದ ಧರಣಿಯಲ್ಲಿ ಮಾತನಾಡಿದ ಅವರು, ಕ್ರೀಡಾ ಇಲಾಖೆಯ ಅಧಿಕಾರಿಗಳು ಕಲಾ ಕ್ಷೇತ್ರಕ್ಕೆ ಮಾಡಿದ ಅಪಮಾನಕ್ಕೆ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ನಾವು ಬಾಡಿಗೆ ಪಾವತಿಸಲು ತಯಾರಾಗಿದ್ದೇವೆ. ಆದರೆ, ಸರ್ಕಾರಕ್ಕೆ 30 ವರ್ಷಗಳಿಗೆ ಭೋಗ್ಯಕ್ಕೆ ನೀಡುವಂತೆ ಮನವಿ ಸಲ್ಲಿಸಿದ್ದರಿಂದ ಬಾಡಿಗೆ ಪಾವತಿಸಿರಲಿಲ್ಲ. ಅಧಿಕಾರಗಳು ಮುನ್ಸೂಚನೆ ನೀಡದೆ ರಂಗ ಪರಿಕರಗಳನ್ನು ಬೀದಿಗೆ ಹಾಕಿದ್ದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಹಲವು ದಿನಗಳ ಕಾಲ ನಡೆದ ಉಪವಾಸ ಸತ್ಯಾಗ್ರಹದ ಫ‌ಲವಾಗಿ ರಾಷ್ಟ್ರಿಯ ನಾಟಕ ಶಾಲೆಯ ಒಂದು ವಿಭಾಗವು ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. ದಕ್ಷಿಣ ಭಾರತಕ್ಕೆ ಇರುವ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರಿನಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಆದರೆ, ಯುವ ಕ್ರೀಡಾ ಇಲಾಖೆ ಅಧಿಕಾರಿಗಳು ಬಾಡಿಗೆ ನೀಡದ ನೆಪದಲ್ಲಿ ಶಾಲೆಗೆ ಸೇರಿದ ಪರಿಕರಗಳನ್ನು ಬೀದಿಗೆ ಎಸೆದಿದ್ದಾರೆ. ಈ ಹಿಂದೆ ಎರಡು ವರ್ಷಗಳ ನಂತರ ಏಕಕಾಲದಲ್ಲಿ ಬಾಡಿಗೆ ಪಾವತಿ ಮಾಡಲಾಗಿತ್ತು. ಆದರೆ, ಈ ಬಾರಿ ಕೆಲವೇ ತಿಂಗಳ ಬಾಡಿಗೆ ಪಾವತಿಸಿಲ್ಲ ಎಂದು ಈ ರೀತಿ ದಬ್ಟಾಳಿಕೆ ಮಾಡಿರುವುದು ಸರಿಯಲ್ಲ ಎಂದರು. 

ಗುರುನಾನಕ್‌ ಭವನಕ್ಕೆ ಬಾಡಿಗೆ ಕಟ್ಟಿಲ್ಲವೆಂದು ಕ್ರೀಡಾ ಇಲಾಖೆ ಆರೋಪಿಸುತ್ತಿದೆ. ಆದರೆ, ಇದು ಬಾಡಿಗೆಯ ಪ್ರಶ್ನೆಯಲ್ಲ. ಗುರುನಾನಕ್‌ ಭವನವನ್ನು 30 ವರ್ಷಕ್ಕೆ ಗುತ್ತಿಗೆಗೆ ಪಡೆಯಲು ಚಿಂತನೆ ನಡೆಸಿದ್ದೆವು. ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಒಪ್ಪಿಗೆ ಸೂಚಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ರಾಷ್ಟ್ರೀಯ ನಾಟಕ ಶಾಲೆಯನ್ನು ತೆರವುಗೊಳಿಸಿದ್ದು ಅನುಮಾನ ಮೂಡಿಸಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು.

ಭವನದಲ್ಲಿಯೇ ವ್ಯಕ್ತಿಗಳು ಉಳಿದುಕೊಂಡಿದ್ದಾರೆ, ಅಡುಗೆ ಮಾಡುತ್ತಿದ್ದಾರೆಂದು ಅಧಿಕಾರಿಗಳು ಆರೋಪಿಸುತ್ತಿದ್ದಾರೆ. ವಿದ್ಯಾರ್ಥಿಗಳು ನಾಟಕಗಳ ಪೂರ್ವಭಾವಿ ಸಿದಟಛಿತೆ ಮಾಡಲು ಇಲ್ಲಿಯೇ ಉಳಿದು ಕೊಳ್ಳಬೇಕಾಗುತ್ತದೆ. ಕಳೆದ 10 ವರ್ಷಗಳಿಂದಲೂ ಹಾಗೆಯೇ ನಡೆದುಕೊಂಡು ಬರುತ್ತಿದೆ. ರಾಷ್ಟ್ರೀಯ ನಾಟಕ ಶಾಲೆಗೆ ಸಂಬಂಧಿಸಿದ ಕಟ್ಟಡವನ್ನು ಬೆಂಗಳೂರು ವಿಶ್ವವಿದ್ಯಾಲಯದ ಸಮೀಪವಿರುವ ಕಲಾಗ್ರಾಮದಲ್ಲಿ ನಿರ್ಮಿಸಲಾಗುತ್ತಿದೆ. ಆದರೆ, ಅಲ್ಲಿ ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿ ಕಾರ್ಯಾಗಾರ ನಡೆಸುವುದು ಹಾಗೂ ಗುರುನಾನಕ್‌ ಭವನದಲ್ಲಿ ನಾಟಕ ಪ್ರದರ್ಶನಕ್ಕೆ ಮೀಸಲಿರಿಸುವುದರ ಮೂಲಕ ಜನತೆಯನ್ನು ನಾಟಕ ಕ್ಷೇತ್ರಕ್ಕೆ ಆಕರ್ಷಿಸುವ ಉದ್ದೇಶವಾಗಿತ್ತೆಂದು ಅವರು ತಿಳಿಸಿದರು.

Advertisement

ಗುರುನಾನಕ್‌ ಭವನವನ್ನು ರಾಷ್ಟ್ರೀಯ ನಾಟಕ ಶಾಲೆಗಾಗಿ 30ವರ್ಷಕ್ಕೆ ಗುತ್ತಿಗೆ ಪಡೆಯುವುದರಿಂದ ಯಾರಿಗೂ ವೈಯಕ್ತಿಕ ಲಾಭವಿಲ್ಲ. ನಾಟಕ ಕ್ಷೇತ್ರವನ್ನು ಮತ್ತಷ್ಟು ಸೃಜನಾತ್ಮಕವಾಗಿ ಕಟ್ಟಲು ನಗರದ ಕೇಂದ್ರ ಭಾಗದಲ್ಲೊಂದು ಸ್ಥಳಾವಕಾಶವಿದ್ದರೆ ಉತ್ತಮವೆಂಬ ಕಾರಣಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ, ನಾಟಕ ಕ್ಷೇತ್ರದ ಕುರಿತು ಹೆಚ್ಚಿನ ಆಸಕ್ತಿ ಇಲ್ಲದ ಅಧಿಕಾರಿಗಳು
ರಾಷ್ಟ್ರೀಯ ನಾಟಕ ಶಾಲೆಯನ್ನು ತೆರವುಗೊಳಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಡಾ.ಮರುಳ ಸಿದ್ದಪ್ಪ ಮಾತನಾಡಿ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಸ್ಥಾಪನೆಗೊಂಡಿರುವುದೇ ನಮಗೆ ಹೆಮ್ಮೆಯ ಸಂಗತಿ. ಇದಕ್ಕೆ ಅಗತ್ಯವಿರುವ ಪ್ರೋತ್ಸಾಹ-ಸೌಲಭ್ಯಗಳನ್ನು ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿತ್ತು. ಅದನ್ನು ರಾಜ್ಯ ಸರ್ಕಾರಗಳು ಮಾಡಿಕೊಳ್ಳುತ್ತಾ ಬಂದಿವೆ. ಆದರೆ, ಅಧಿಕಾರಿಗಳ ಬೇಜಾಬ್ದಾರಿತನದಿಂದಾಗಿ ರಾಷ್ಟ್ರೀಯ ನಾಟಕ ಶಾಲೆಗೆ ಅಪಮಾನ ಮಾಡಲಾಗಿದೆ ಎಂದರು.

ಧರಣಿಯಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್‌, ಹಿರಿಯ ಪತ್ರಕರ್ತೆ ವಿಜಯಮ್ಮ, ವಿಧಾನ ಪರಿಷತ್‌ ಸದಸ್ಯ ಮೋಹನ್‌ ಕೊಂಡಜ್ಜಿ, ಯುವ ನಿರ್ದೇಶಕ ಲೋಕೇಶ್‌ ಹಾಗೂ ರಾಷ್ಟ್ರೀಯ ನಾಟಕ ಶಾಲೆಯ ಶಿಬಿರಾರ್ಥಿಗಳು ಸೇರಿ ಹಲವು ರಂಗಕರ್ಮಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next