ಹೈದರಾಬಾದ್: ಟಾಲಿವುಡ್ ಸಿನಿರಂಗದ ಹಿರಿಯ ನಟ ಚಂದ್ರ ಮೋಹನ್(82) ಶನಿವಾರ ಮುಂಜಾನೆ(ನ.11 ರಂದು) ನಿಧನರಾಗಿದ್ದಾರೆ.
ಶನಿವಾರ ಬೆಳಗ್ಗೆ 9.45ಕ್ಕೆ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಹೃದಯ ಸ್ತಂಭನದಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.
ಸಿನಿರಂಗದಲ್ಲಿ ಅಪಾರ ಸಾಧನೆ: 1966 ರಲ್ಲಿ ʼರಂಗುಲ ರತ್ನಂʼ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಅವರು, ಶ್ರೀದೇವಿ, ಜಯಪ್ರದಾ, ಜಯಸುಧಾ ಮುಂತಾದ ನಟಿಯರ ಜೊತೆ ತೆರೆಯನ್ನು ಹಂಚಿಕೊಂಡಿದ್ದರು.
‘ಪದಹಾರೆಲ್ಲ ವಯಸ್ಸು’, ʼಸಿರಿ ಸಿರಿ ಮುವ್ವʼ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಇವರ ಸಾಧನೆಗಾಗಿ ಎರಡು ಬಾರಿ ನಂದಿ ಪ್ರಶಸ್ತಿಯ ಗೌರವ ಸಿಕ್ಕಿದೆ.
ʼಮಾನಸಂತ ನುವ್ವೆʼ, ʼಶಂಕರಬರಣಂʼ, ʼನಿನ್ನೇ ಪಲ್ಲದತಾʼ, ʼಪ್ರೇಮಂತೆ ಇದೆರʼ, ʼನೀನು ನಾಕು ನಾಚಾವ್ʼ, ʼತಮ್ಮುಡುʼ, ʼದೂಕುಡುʼ, ʼವಸಂತಂʼ, ʼಡಾರ್ಲಿಂಗ್ʼ, ʼ7ಜಿ ಬೃಂದಾವನ ಕಾಲೋನಿʼ, ʼದೇಸಮುದೂರುʼ, ʼಧೀʼ ಅನೇಕ ಸಿನಿಮಾದಲ್ಲಿ ನಟಿಸುವುದರ ಜೊತೆ ಕೆ ತಮಿಳು ಸಿನಿಮಾದಲ್ಲೂ ಅವರು ಕಾಣಿಸಿಕೊಂಡಿದ್ದರು.
ಹಿರಿಯ ನಟ ಅಗಲಿಕೆಗೆ ಜೂ.ಎನ್.ಟಿಆರ್ ಸೇರಿದಂತೆ ಟಾಲಿವುಡ್ ಸಿನಿಮಾರಂಗ ಕಂಬನಿ ಮಿಡಿದಿದೆ.
ಮೃತರು ಪತ್ನಿ ಜಲಂಧರ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅಂತಿಮ ವಿಧಿವಿಧಾನ ಸೋಮವಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ವರದಿ ತಿಳಿಸಿದೆ.