Advertisement
ನೀವು ಬಹುಕಾಲ ಅಮೆರಿಕದಲ್ಲಿದ್ದವರು. ಅಲ್ಲಿನ ಐಶಾರಾಮಿ ಆಕರ್ಷಣೆಯನ್ನು ಬಿಟ್ಟು ಭಾರತಕ್ಕೇಕೆ ಬಂದಿರಿ?
Related Articles
Advertisement
ತ್ಯಾಗರಾಜರ ಕೃತಿಗಳಿಗೂ, ದಾಸರ ಕೃತಿಗಳಿಗೂ ಏನು ವ್ಯತ್ಯಾಸ ಕಾಣುತ್ತೀರಿ? ದಾಸರ ಕೃತಿಗಳಲ್ಲಿ ಸಂಗೀತಕ್ಕಿಂತ ಸಾಹಿತ್ಯ ಪ್ರಾಧಾನ್ಯವೆ?
ತ್ಯಾಗರಾಜರೇ ಮೊದಲಾದ ಸಂಗೀತ ತ್ರಿಮೂರ್ತಿಗಳ ಕೃತಿಗಳಲ್ಲಿ ಭಕ್ತಿ ಪ್ರಧಾನವಾಗಿ ಕಂಡುಬಂದರೆ ದಾಸರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ದಾಸರ ಹಾಡುಗಳು ಸಾಹಿತ್ಯದ ಮೂಲಕ ಜನರಿಗೆ ಮುಟ್ಟುತ್ತಿತ್ತು. ಹೀಗಾಗಿ ಅವರು ಸಂಗೀತಕ್ಕೆ ಹೆಚ್ಚು ಗಮನ ಹರಿಸದೆಯೂ ಇದ್ದಿರಬಹುದು. ಒಂದೇ ಹಾಡುಗಳನ್ನು ಬೇರೆ ಬೇರೆ ರಾಗಗಳಲ್ಲಿ ಹಾಡಲು ಇದೂ ಕಾರಣವಾಗಿರಬಹುದು. ಶಾಸ್ತ್ರೀಯ ಸಂಗೀತದಲ್ಲಿ ಹೀಗಲ್ಲ, ರಾಗ ಬದಲಾಗದು. “ದಾಸನ ಮಾಡಿಕೋ ನೀ ಎನ್ನ…’, “ಓಡಿ ಬಾರಯ್ಯ ವೈಕುಂಠ ಪತಿದೇವ…’ ಮೊದಲಾದ ದಾಸರ ಕೃತಿಗಳಲ್ಲಿಯೂ ನಿರ್ದಿಷ್ಟ ರಾಗಗಳ ಸಂಯೋಜನೆ ಕಂಡುಬರುತ್ತದೆ.
ದಾಸರ ಹಾಡುಗಳಂತೆ ವಚನ ಸಾಹಿತ್ಯವನ್ನು ಕಛೇರಿಗಳಲ್ಲಿ ಹಾಡುತ್ತೀರಾ? ದಾಸರ ಹಾಡುಗಳಿಗೂ ಶರಣರ ಹಾಡುಗಳಿಗೂ ಏನು ವ್ಯತ್ಯಾಸ ಕಂಡಿದ್ದೀರಿ?
ಖಂಡಿತವಾಗಿ. “ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂಬಂತಹ ವಚನಗಳನ್ನು ಕಛೇರಿಗಳಲ್ಲಿ ಹಾಡುತ್ತೇನೆ. ಇನ್ನೂ ಕಲಿಯುತ್ತಿದ್ದೇನೆ. ವಚನ ಸಾಹಿತ್ಯದಲ್ಲಿ ಚಿಕ್ಕ ಚಿಕ್ಕ ಹಾಡುಗಳಿವೆ. ಇದು ಕೂಡಲೇ ಮುಗಿದು ಹೋಗುತ್ತದೆ. ವಚನ ಸಾಹಿತ್ಯಗಳಲ್ಲಿ ಶಾಸ್ತ್ರೀಯತೆಗಿಂತ ಜನಪದ ಧಾಟಿ ಕಂಡುಬರುತ್ತದೆ. ಇಲ್ಲಿ ಶಾಸ್ತ್ರೀಯತೆಯನ್ನು ತುಂಬುವುದು ಕಷ್ಟ. ಕೆಲವರು ಶಾಸ್ತ್ರೀಯತೆಯನ್ನು ಟ್ಯೂನ್ ಮಾಡಲು ಪ್ರಯತ್ನಿಸಿದ್ದಾರೆ. ಜನಸಾಮಾನ್ಯರನ್ನು ತಲುಪುವ ದೃಷ್ಟಿಯಿಂದ ವಚನ ಸಾಹಿತ್ಯ ಪ್ರಮುಖವಾಗಿದೆ.
ಹಿಂದೂಸ್ಥಾನೀ ಸಂಗೀತದಂತೆ ಕರ್ನಾಟಕ ಸಂಗೀತದಲ್ಲಿ ಶೃಂಗಾರ ರಸ ಕಡಿಮೆಯೆ?
ಸಾಮಾನ್ಯವಾಗಿ ಕರ್ನಾಟಕ ಸಂಗೀತದಲ್ಲಿ ಭಕ್ತಿ ಪ್ರಾಧಾನ್ಯ, ಹಿಂದೂಸ್ಥಾನೀ ಸಂಗೀತದಲ್ಲಿ ಶೃಂಗಾರ ಪ್ರಾಧಾನ್ಯವಾಗಿದೆ. ಕರ್ನಾಟಕ ಸಂಗೀತದಲ್ಲಿಯೂ ಕೆಲವು ವರ್ಣ, ಕೃತಿಗಳಲ್ಲಿ ಪದಂ, ಜಾವಳಿಗಳಿಗೆ (ಶೃಂಗಾರಕ್ಕೆ) ಅವಕಾಶಗಳಿವೆ. ಕರ್ನಾಟಕ ಸಂಗೀತದಲ್ಲಿ ಭಕ್ತಿಯಲ್ಲದೆ ವ್ಯಾಕರಣ, ಶ್ರೀಚಕ್ರ, ದೇವಿ ಆರಾಧನೆಯ ಕೃತಿಗಳಿವೆ.
ಅಮೆರಿಕದಲ್ಲಿ ನೀವು ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿ ಕಂಡುಕೊಂಡ ಅನುಭವವೇನು?
ಎಲ್ಲಿ ಅಭಾವವಿರುತ್ತದೋ ಅಲ್ಲಿ ಆಸಕ್ತಿಯೂ ಹೆಚ್ಚಾಗಿರುತ್ತದೆ. ಅಮೆರಿಕದಲ್ಲಿ ಭಾರತೀಯ ಯಾವುದೇ ಕಲೆಗಳಿದ್ದರೂ ಅವುಗಳಿಗೆ ಭಾರತೀಯರು ವಿಶೇಷ ಮನ್ನಣೆ ಕೊಡುತ್ತಾರೆ. ಭಾರತದಿಂದ ಹೋದವರಿಗೆ ನಮ್ಮ ಸಂಸ್ಕೃತಿಯ ಕೊಂಡಿಯನ್ನು ಕಳೆದುಕೊಂಡಿದ್ದೇವೆ ಎಂಬ ಭಾವ ಇರುತ್ತದೆ. ಹೀಗಾಗಿ ಮಕ್ಕಳಲ್ಲಿ ನಮ್ಮ ಸಂಸ್ಕಾರ ಮುಂದುವರಿಯಬೇಕೆಂಬ ತುಡಿತ ಪೋಷಕರಲ್ಲಿರುತ್ತದೆ. ನಾನು ಸಂಗೀತ ಪಾಠ ಮಾಡುವಾಗ ಅದರ ಹಿನ್ನೆಲೆ ಅಂದರೆ ದ್ರೌಪದಿ ಹಾಡು ಬರುವಾಗ ದ್ರೌಪದಿ ಯಾರು? ಜಾಂಬವನ ಹಾಡು ಬರುವಾಗ ಜಂಬೂದ್ವೀಪ, ಜಾಂಬವನ ಕುರಿತು ಕಥೆ ಹೇಳುತ್ತಿದ್ದೆ. ಹೀಗೆ 15 ವರ್ಷ ಅಮೆರಿಕದಲ್ಲಿ ಸಂಗೀತ ಪಾಠ ಮಾಡಿದ್ದೇನೆ.
ನಿಮ್ಮ ಮನೆಯೆ ಸಂಗೀತ ಲೋಕ…
ನನ್ನ ಪತಿ ಮೈಸೂರು ಸತೀಶ್ ಇನ್ಫೋಸಿಸ್ ಅಂಗಸಂಸ್ಥೆಯಲ್ಲಿ ಉನ್ನತಾಧಿಕಾರಿಯಾದರೂ ಸ್ವತಃ ಪಿಟೀಲುವಾದಕರು. ಮಗಳು ಗೌರಿ ಸತೀಶ್ ವೈದ್ಯೆಯಾಗಿದ್ದಾಳೆ. ಮಗ ಶ್ಯಾಮಕೃಷ್ಣ ಎಂಜಿನಿಯರಿಂಗ್ ಓದುತ್ತಿದ್ದಾನೆ. ಇಬ್ಬರೂ ಹಾಡುತ್ತಾರೆ. ನಾವೆಲ್ಲರೂ ಸೇರಿ ನೂರಾರು ಕಛೇರಿಗಳನ್ನು ಕೊಟ್ಟಿದ್ದೇವೆ.
ಕರ್ನಾಟಕ ಸಂಗೀತದ ಬಾನಿ (ಶೈಲಿ) ಕುರಿತು ಕಟ್ಟರ್‌ತನ ಕಡಿಮೆಯೆ?
ಹಿಂದೂಸ್ಥಾನೀ ಸಂಗೀತದಲ್ಲಿ ಘರಾನೆ (ಶೈಲಿ) ಇದ್ದಂತೆ ಕರ್ನಾಟಕ ಸಂಗೀತದ ಬಾನಿಯ ಪರಂಪರೆ ಇದೆ. ಶಮ್ಮಂಗುಡಿ ಬಾನಿ, ಪಾಲೆತ್ತೂರು ಬಾನಿ, ಮಧುರೆ ಮಣಿ ಅಯ್ಯರ್ ಬಾನಿ, ಸಂತಾನಂ ಬಾನಿ ಹೀಗೆ ಹಿರಿಯ ಸಂಗೀತ ದಿಗ್ಗಜರ ಹಾಡಿನ ಶೈಲಿಯೇ ಬಾನಿಯಾಗಿದೆ. ನಮ್ಮಲ್ಲಿ ಸಾಮಾನ್ಯವಾಗಿ ಇತರ ಶೈಲಿಗಳಿಗೂ ಮಾನ್ಯತೆ ಇದೆ. ಶಾಸ್ತ್ರೀಯವಲ್ಲದ್ದಕ್ಕೂ ಪ್ರೋತ್ಸಾಹವಿದೆ. ಉದಾಹರಣೆಗೆ ಪಂಢರೀಬಾಯಿ ಅಣ್ಣ ಪ್ರಭಾಕರ್ ಭಾವಗೀತೆಯನ್ನು ಹಾಡುತ್ತಿದ್ದರು. ಅವರಿಂದಲೂ ನನಗೆ ಪಾಠ ಆಗಿದೆ. ನನ್ನ ತಾಯಿ ಹಿಂದೂಸ್ಥಾನೀ ಸಂಗೀತವನ್ನು ಆಲಿಸುತ್ತಿದ್ದರು. ಅಂತಹ ನಿರ್ಬಂಧಗಳಿಲ್ಲ.
ಸಂಗೀತ ಅಭ್ಯಾಸದಿಂದ ಜನರಿಗೆ ಆಗುವ ಆನುಕೂಲಗಳೇನು?
ಸಂಗೀತವನ್ನು ಅಭ್ಯಸಿಸುವುದರಿಂದ ಮನುಷ್ಯನಲ್ಲಿ ಉತ್ತಮತೆ, ಉತ್ತಮ ನಡತೆ ಅಭಿವೃದ್ಧಿಗೊಳ್ಳುತ್ತದೆ. ನನ್ನ ಮತ್ತು ಪತಿಯ ಜೀವನದಲ್ಲಿಯೂ ಇದು ಸಹಾಯವಾಗಿದೆ. ಯಾವುದೇ ಕಲೆಯಾಗಲಿ ನಮ್ಮ ಆಸಕ್ತಿಯಂತೆ ಅದನ್ನು ಮೈಗೂಡಿಸಿಕೊಳ್ಳುವುದು ಕರ್ತವ್ಯ ಎಂದೆನಿಸುತ್ತದೆ.
-ಮಟಪಾಡಿ ಕುಮಾರಸ್ವಾಮಿ