Advertisement

Sagara; ಹಿರಿಯ ರಾಜಕಾರಣಿ, ಮಾಜಿ ಸಚಿವ ಕೆ.ಹೆಚ್.ಶ್ರೀನಿವಾಸ್ ನಿಧನ

05:50 PM Aug 30, 2024 | Shreeram Nayak |

ಸಾಗರ: ಮಾಜಿ ಸಚಿವ ಹಾಗೂ ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ ನಿಕಟಪೂರ್ವ ಅಧ್ಯಕ್ಷ ಕೆ.ಎಚ್.ಶ್ರೀನಿವಾಸ್ (85) ಶುಕ್ರವಾರ ಬೆಂಗಳೂರಿನಲ್ಲಿ ವಯೋಸಹಜ ಕಾರಣಗಳಿಂದಾಗಿ ನಿಧನ ಹೊಂದಿದರು.

Advertisement

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೈಸೂರು ಪ್ರಜಾಪ್ರತಿನಿಧಿ ಸಭಾದ ಸದಸ್ಯರಾಗಿದ್ದ ಕಾನುಗೋಡು ಹರಿಯಪ್ಪನವರ ಮೂರನೇ ಪುತ್ರ ಕೆ.ಹೆಚ್. ಶ್ರೀನಿವಾಸ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದು, ಮೈಸೂರು ಶಾರದಾ ಕಾಲೇನಿನಲ್ಲಿ ಕಾನೂನು ಪದವಿಯನ್ನು ಪಡೆದ ನಂತರ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಅಲ್ಪಕಾಲದ ಸೇವೆ ಸಲ್ಲಿಸಿದ್ದರು. ನಂತರ ವಕೀಲ ವೃತ್ತಿಯನ್ನು ಕೈಗೊಂಡಿದ್ದರು.

ಮಲೆನಾಡು ಪ್ರದೇಶದ ಜನರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಸಿವನ್ನು ನೀಗಿಸುವ ಉದ್ದೇಶ ಹೊತ್ತು ಸಾಗರ ಪ್ರಾಂತ್ಯ ವಿದ್ಯಾವರ್ಧಕ ಸಂಘದಲ್ಲಿ ಪ್ರಥಮ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ನಂತರ ಬದಲಾದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ರಿ. ಸಂಸ್ಥೆಯ ಅಧ್ಯಕ್ಷರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಸಾಗರದ ಪ್ರತಿಷ್ಠಿತ ಲಾಲ್‌ಬಹದ್ದೂರ್ ಕಾಲೇಜಿನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಒಬ್ಬರು. ಅನೇಕ ವರ್ಷಗಳ ಕಾಲ ಅಧ್ಯಕ್ಷರಾಗಿ ಗುಣಮಟ್ಟದ ವಿದ್ಯಾಭ್ಯಾಸ ನೀಡುವ ಜೊತೆಗೆ ಅಂಗಸಂಸ್ಥೆಗಳಾಗಿ ವಿವಿಧ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗಳಿಗೂ ಕಾರಣರಾದವರು.

1967 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಪ್ರಬಲ ಪ್ರತಿಸ್ಪರ್ಧಿ ಕಾಗೋಡು ತಿಮ್ಮಪ್ಪನವರನ್ನು 700 ಮತಗಳ ಅಂತರದಲ್ಲಿ ಪರಾಭಗೊಳಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1974ರಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.

Advertisement

1978ರಲ್ಲಿ ಶಿವಮೊಗ್ಗ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡು ದೇವರಾಜ ಅರಸು ಸಂಪುಟದಲ್ಲಿ ವಾರ್ತಾ ಮತ್ತು ಇಂಧನ ಖಾತೆ ಸಚಿವರಾಗಿ ಪ್ರಸಿದ್ಧರಾದರು. ನಂತರ 1985ರಲ್ಲಿ ಪುನಾ ಶಿವಮೊಗ್ಗ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡರು. 1996-2002ರವರೆಗೆ ವಿಧಾನಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿ ವಿಧಾನಪರಿಷತ್ತಿನಲ್ಲಿ ವಿಪಕ್ಷನಾಯಕರಾಗಿ ಕಾರ್ಯನಿರ್ವಹಿಸಿದರು.

ಉತ್ತಮ ಸಾಹಿತಿಯೂ, ಬರಹಗಾರ, ಸಂಗೀತ ಪ್ರೇಮಿ, ಓದುಗ, ವಿಶೇಷ ಜ್ಯಾನಿಯೂ, ವಾಗ್ಮಿಯೂ ಆದ ಶ್ರೀನಿವಾಸ್ ಅವರ ಕಾನುಗೋಡು ಮನೆ, ಕವನ ಸಂಕಲನಗಳನ್ನೊಳಗೊಂಡ ಐದು ಪುಸ್ತಕಗಳು ಬಿಡುಗಡೆಗೊಂಡಿವೆ.

ಬಹುಮುಖ ಪ್ರತಿಭೆಯ ಶ್ರೀನಿವಾಸ್‌ ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಯಾಗಿಯೂ ಗುರುತಿಸಿಕೊಂಡವರು. ಶ್ರೀನಿವಾಸ್‌ರವರ ಪತ್ನಿ ಶಾಲಿನಿ ಶ್ರೀನಿವಾಸ್ ಸಹ ಕವಯಿತ್ರಿ, ಬರಹಗಾರ್ತಿಯಾಗಿ ಹೆಸರು ಮಾಡಿದವರು.

ಸಂತಾಪ: ಅವರ ನಿಧನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ, ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ. ಹರನಾಥರಾವ್, ಬಿ.ಆರ್. ಜಯಂತ್, ರವಿಕುಮಾರ್, ಎಚ್.ಎಂ. ಶಿವಕುಮಾರ್, ಕವಲಕೋಡು ವೆಂಕಟೇಶ್, ಎಂ.ಆರ್. ಸತ್ಯನಾರಾಯಣ, ಶರಾವತಿ ಸಿ.ರಾವ್ ಸಂತಾಪ ಸೂಚಿಸಿದ್ದಾರೆ. ಎಂಡಿಎಫ್ ಸಂಸ್ಥೆಯ ಎಲ್ಲ ವಿದ್ಯಾಸಂಸ್ಥೆಗಳಿಗೆ ಶನಿವಾರ ಶ್ರೀಯುತರ ಗೌರವಾರ್ಥ ರಜೆಯನ್ನು ಘೋಷಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next