Advertisement

ಸೀನಿಯರ್‌ ಎಂದರೆ ಸೀ-ನಿಯರ್‌ !

12:30 AM Mar 22, 2019 | |

ಕಾಲೇಜಿನ ಮೊದಲ ದಿನ ಯಾರಿಗೆ ತಾನೇ ನೆನಪಿರಲ್ಲ ಹೇಳಿ. ತಬ್ಬಿಬ್ಟಾಗಿ ಏನೂ ಅರಿಯದೆ ಉಂಟಾಗುವ ಫ‌ಜೀತಿ, ಭಯ, ಆತಂಕ ಇವುಗಳೆಲ್ಲದರ ಸಂಗಮ ಕಾಲೇಜಿನ ಮೊದಲ ದಿನ. ಸೂಚನಾ ಫ‌ಲಕದಲ್ಲಿ ಹಾಕಿರುವ ವೇಳಾಪಟ್ಟಿ ಅರ್ಥವಾಗದೆ, ಕ್ಲಾಸ್‌ ರೂಮ್‌ ಗೊತ್ತಾಗದೆ ಪರದಾಡುತ್ತ ಇರಬೇಕಾದರೆ ಆಪದ್ಭಾಂದವರಂತೆ ಅವತರಿಸುವವರೇ ನಮ್ಮ ಸೀನಿಯರ್‌ಗಳು. ಅಲ್ಲಿಂದ ಶುರುವಾಗುತ್ತದೆ ನೋಡಿ ನಮ್ಮ ಮತ್ತು ಅವರ ನಡುವಿನ ಬಾಂಧವ್ಯ. 

Advertisement

ಅದ್ಯಾವ ಋಣಾನುಬಂಧವೋ ನಾನರಿಯೆ ಮೊದಲು ಪರಿಚಯ ಇಲ್ಲದವರು ಕೂಡ ಉತ್ತಮ ಗೆಳೆಯರಾಗಿಬಿಡುತ್ತಾರೆ. ಸೀನಿಯರ್‌ಗಳೆಂದರೆ ಚಲನಚಿತ್ರದಲ್ಲಿ ತೋರಿಸುವಂತೆ ರ್ಯಾಗಿಂಗ್‌ ಮಾಡುತ್ತ ಚಿತ್ರವಿಚಿತ್ರ ಹಿಂಸೆ ಕೊಡ್ತಾರೆ ಎಂಬುದು ನಮ್ಮೆಲ್ಲರ ಮನದಲ್ಲಿ ಇರುತ್ತದೆ. ಆದರೆ, ಅದೆಲ್ಲ ಕಲ್ಪನೆಗಳನ್ನು ಬುಡಸಮೇತ ಕಿತ್ತುಹಾಕುತ್ತಾರೆ ನಮ್ಮ ಸೀನಿಯರ್‌ಗಳು. ಅವರ ನಗುಮೊಗದ ಸ್ವಾಗತ ಮತ್ತು ಪ್ರೀತಿಯ ನುಡಿಗಳು, ಹಿರಿಯರು ಎಂಬ ಅಹಂ ಇಲ್ಲದೆ ಉತ್ತಮ ಮಾರ್ಗದರ್ಶಕರಾಗಿಯೂ, ಸಹೋದರರಾಗಿಯೂ ಮುಕ್ತವಾಗಿ ಒಡನಾಡುವುದನ್ನು ಕಂಡರೆ ನಿಬ್ಬೆರಗಾಗುತ್ತೇವೆ. ಅವರು ಅಕ್ಕ-ಅಣ್ಣ ಅಂತ ಅವರನ್ನ ಕರೆಯೋದ್ರಲ್ಲಿ ಅದೇನೋ ಅವ್ಯಕ್ತವಾದ ಖುಷಿ. 

ಆಗ ತಾನೇ ಕಾಲೇಜಿಗೆ ಕಾಲಿಟ್ಟ ನಮ್ಮನ್ನು ಕುಟುಂಬದ ಸದಸ್ಯರಂತೆ ಕಂಡು ಸ್ವಾಗತಿಸಿದ ನೆನಪು ಮನದಲ್ಲಿ ಸದಾ ಹಸಿರಾಗಿ ಉಳಿಯುತ್ತದೆ. ಎಡವಿದಾಗ ತಮ್ಮ ಬುದ್ಧಿಮಾತುಗಳಿಂದ ತಿದ್ದಿ, ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಹುರಿದುಂಬಿಸಿದ ನನ್ನ ಸೀನಿಯರ್‌ಗಳು ಸದಾ ಸಾಧನೆಗೆ ಬೆನ್ನೆಲುಬಾಗಿ ನಿಂತವರು. ಅಂತ‌ರ್‌ ಕಾಲೇಜುಸ್ಪರ್ಧೆಗಳಿಗೆ ಹೋಗುವಾಗಲೋ ಅಥವಾ ಬೇರೆ ಯಾವುದಾದರೂ ಶೈಕ್ಷಣಿಕ ಪ್ರವಾಸವನ್ನು ಆಯೋಜನೆ ಮಾಡಿದ್ದಾಗಲೋ ನಾವು ಇನ್ನೂ ಹತ್ತಿರವಾಗುತ್ತೇವೆ. ಕಾರ್ಯಕ್ರಮದ ಜವಾಬ್ದಾರಿ ಹಾಗೂ ನಮ್ಮನ್ನೂ ಸಂಭಾಳಿಸಬೇಕಾಗಿರುವುದರಿಂದ ಗಂಭೀರ ಮುಖ ಹೊತ್ತು ತಿರುಗುವ ಅವರನ್ನು ಸ್ವಲ್ಪ ಹೊತ್ತಿನಲ್ಲೇ ನಮ್ಮ ಕೇಕೆ-ತುಂಟಾಟಗಳಿಗೆ ಒಳಪಡಿಸುವುದರಲ್ಲಿ ನಮಗೆಲ್ಲ ಖುಷಿಯೋ ಖುಷಿ. ಅದೆಷ್ಟೇ ಆದರೂ ನಮ್ಮನ್ನು ಬೈಯ್ಯದೆ ತಾಳ್ಮೆಯಿಂದ ಇರುವ ಅವರಿಗೆ ದೊಡ್ಡ ಸಲಾಂ. ನಮ್ಮ ಕಾಲೇಜಿನಲ್ಲಿ ಸ್ಟೂಡೆಂಟ್‌ ಫ್ಯಾಕಲ್ಟಿ ಅನ್ನೋ ಒಂದು ಯೋಜನೆಯಿದೆ. ಈ ಯೋಜನೆಯ ಪ್ರಕಾರ ಆಯ್ಕೆಯಾದ ಅಂತಿಮ ಪದವಿ ವಿದ್ಯಾರ್ಥಿಗಳು ಪ್ರಥಮ ಅಥವಾ ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಈ ಮೂಲಕ ಅವರೊಂದಿಗಿನ ಸಂಬಂಧ ಇನ್ನೂ ವೃದ್ಧಿಯಾಗುತ್ತದೆ. ಇನ್ನು ನಾನು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವುದರಿಂದ ಮೊದಲೇ ನಮ್ಮ ತರಗತಿಯಲ್ಲಿ ಸೀನಿಯರ್‌ ಮತ್ತು ಜೂನಿಯರ್‌ಗಳ ನಡುವೆ ಒಂದು ಉತ್ತಮ ಕೊಂಡಿಯನ್ನು ನಮ್ಮ ಅಧ್ಯಾಪಕರೇ ಸೃಷ್ಟಿಸಿಬಿಟ್ಟಿದ್ದಾರೆ. ಅದಕ್ಕೆ ಪುರಾವೆಯೇ ಸ್ವಾಗತ ಕಾರ್ಯಕ್ರಮ. ಸೀನಿಯರ್‌ಗಳೆಂದರೆ ‌”ಸೀ’ “ನಿಯರ್‌ ಗಳಾಗಬೇಕೆಂಬುದೇ ಇದರ ಉದ್ದೇಶ. 

ಆದರೆ, ಕಾಲ ಓಡುತ್ತಲೇ ಇರುತ್ತದೆ. ಇನ್ನೇನು ಅವರ ಪದವಿ ಬದುಕಿನ ಅಂತಿಮ ಘಟ್ಟದಲ್ಲಿ¨ªಾರೆ. ಅಗಲಿಕೆ ಅನಿವಾರ್ಯವಾಗಿದೆ. ತಮ್ಮ ಮುಂದಿನ ಭವಿಷ್ಯಕ್ಕಾಗಿ ಬೇರೆ ಕಡೆ ವಿದ್ಯಾಭ್ಯಾಸಕ್ಕೋ , ಕೆಲಸಕ್ಕೋ ತೆರಳಬೇಕಾಗಿದೆ. ಸ್ನೇಹದ ಬೀಜ ಮೊಳಕೆಯಾಗಿ ಚಿಗುರೊಡೆದು ಹೆಮ್ಮರವಾಗಿ ಬೆಳೆದಿದೆ. ಅದರ ಒಂದೊಂದು ಕೊಂಬೆಯನ್ನೂ ಬಹಳ ಜತನದಿಂದ ಕಾಪಾಡಬೇಕಾಗುತ್ತದೆ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಬಲು ಸೊಗಸು ಎಂಬಂತೆ. ಸೀನಿಯರ್‌ಗಳು ಬೇರಿನಂತೆ ಇದ್ದವರು. ಅವರು ಹಾಕಿಕೊಟ್ಟ ಹಾದಿಯಿದೆ. ಆದರೆ, ಅದಕ್ಕೆ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುವುದು ನಮ್ಮ ಕರ್ತವ್ಯ. ಪ್ರತಿಯೊಂದು ಹೆಜ್ಜೆಯಲ್ಲೂ ಸಹಾಯಹಸ್ತವನ್ನು ಚಾಚಿದ ನನ್ನ ಸೀನಿಯರ್‌ಗಳು ಸದಾ ಸಂತೋಷದಿಂದಿರಲಿ. ವಿದಾಯ ಅನ್ನೋದು ಕಣ್ಣಿನಿಂದ ಪ್ರೀತಿಸಿದವರಿಗೆ ಮಾತ್ರ. ಹೃದಯದಿಂದ ಪ್ರೀತಿಸಿದವರಿಗಲ್ಲ. ಅದೇನೇ ಆದರೂ ಇಷ್ಟು ದಿನ ಒಟ್ಟಿಗೆ ಕಳೆದ ನೆನಪುಗಳು ಮಾತ್ರ ಶಾಶ್ವತ. ಅವರ ಉಜ್ವಲ ಭವಿಷ್ಯಕ್ಕಾಗಿ ತಂಗಿ- ತಮ್ಮಂದಿರ ಕಡೆಯಿಂದ ಹಾರೈಕೆಗಳು.

– ರಶ್ಮಿ ಯಾದವ್‌
ಎಂಸಿಜೆ, ಮಂಗಳೂರು ವಿ. ವಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next