Advertisement

ಅಲ್ಪಸಂಖ್ಯಾಕರ ಶೈಕ್ಷಣಿಕ ಪ್ರವೇಶ ನಿಯಮ ರದ್ದು

12:20 AM Mar 20, 2024 | Team Udayavani |

ಬೆಂಗಳೂರು: ಅಲ್ಪಸಂಖ್ಯಾಕರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾಕ ಶಾಲೆಗಳೆಂದು ಘೋಷಿಸಲು ನಿರ್ದಿಷ್ಟ ಶೇಕಡವಾರು ಪ್ರಮಾಣದಲ್ಲಿ ಅಲ್ಪಸಂಖ್ಯಾಕ ವಿದ್ಯಾರ್ಥಿಗಳನ್ನು ಹೊಂದಿರಬೇಕು ಎಂಬ ನಿಯಮವನ್ನು ರಾಜ್ಯ ಸರಕಾರ ಸಡಿಲಿಸಿದೆ.

Advertisement

ತನ್ಮೂಲಕ ಮತೀಯ ಅಲ್ಪಸಂಖ್ಯಾಕರ ಸಂಸ್ಥೆಯಲ್ಲಿ ಆ ಮತೀಯ ಅಲ್ಪಸಂಖ್ಯಾಕ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಲ್ಲದಿದ್ದರೂ ಅದರ ಸ್ಥಾನಮಾನ ಅಬಾಧಿತವಾಗಿರಲಿದೆ. ಸರಕಾರದ ಈ ನಿರ್ಧಾರ ವಿವಾದದ ಸ್ವರೂಪ ಪಡೆಯುವ ಸಾಧ್ಯತೆಯಿದೆ.

ಅಲ್ಪಸಂಖ್ಯಾಕರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾಕ ಶೈಕ್ಷಣಿಕ ಸಂಸ್ಥೆಗಳನ್ನಾಗಿ ಘೋಷಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಯಾ ಶೈಕ್ಷಣಿಕ ವರ್ಷಗಳಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಅಲ್ಪಸಂಖ್ಯಾಕರ ಸಮುದಾಯದ ವಿದ್ಯಾರ್ಥಿಗಳನ್ನು ಹೊಂದಿರಬೇಕೆಂದು ನಿಯಮ ರೂಪಿಸಿತ್ತು. ಆದರೆ ಅಲ್ಪಸಂಖ್ಯಾಕ ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಈ ನಿಯಮ ಪಾಲನೆ ಕಷ್ಟಕರ ಎಂಬ ಕಾರಣ ನೀಡಿ ಸರಕಾರದ ಅಲ್ಪಸಂಖ್ಯಾಕರ ಕಲ್ಯಾಣ, ಹಜ್‌ ಮತ್ತು ವಕ್‌³ ಇಲಾಖೆಯ ಈ ಆದೇಶ ಹೊರಡಿಸಿದೆ.

ಹಿಂದಿನ ನಿಯಮ ಏನಿತ್ತು?
ಈ ಹಿಂದಿನ ನಿಯಮದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯಲ್ಲಿ ಅಲ್ಪಸಂಖ್ಯಾಕ ಸಂಸ್ಥೆ ಶಾಲೆಗಳೆಂದು ಘೋಷಿಸಲು ಆ ಶಾಲೆಗಳಲ್ಲಿ ಆಯಾ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಶೇ. 25ರಷ್ಟು ಆಯಾ ಭಾಷಾ/ಆಯಾ ಮತೀಯ ಅಲ್ಪಸಂಖ್ಯಾಕ ಸಮುದಾಯದ ವಿದ್ಯಾರ್ಥಿಯನ್ನು ಹೊಂದಿರಬೇಕು. ಅದೇ ಉನ್ನತ ಶಿಕ್ಷಣ ಇಲಾಖೆಯಡಿ ಒಟ್ಟು ಪ್ರವೇಶದಲ್ಲಿ ಆಯಾ ಅಲ್ಪಸಂಖ್ಯಾಕ ಸಮುದಾಯದ ಕರ್ನಾಟಕಕ್ಕೆ ಸೇರಿದ ವಿದ್ಯಾರ್ಥಿಗಳ ಸಂಖ್ಯೆ ಶೇ. 50ಕ್ಕಿಂತ ಕಡಿಮೆ ಇರಬಾರದು. ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಕೌಶಲಾಭಿವೃದ್ಧದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವ್ಯಾಪ್ತಿಯ ಸಂಸ್ಥೆಗಳಲ್ಲಿ ಆಯಾ ಅಲ್ಪಸಂಖ್ಯಾಕ ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ ಶೇ. 50ಕ್ಕಿಂತ ಕಡಿಮೆ ಇರಬಾರದು. ಈ ಪೈಕಿ ಕನಿಷ್ಠ ಪಕ್ಷ ಶೇ.75ರಷ್ಟು ವಿದ್ಯಾರ್ಥಿಗಳು ಕರ್ನಾಟಕದವರಾಗಿರಬೇಕೆಂಬ ನಿಯಮ ಚಾಲ್ತಿಯಲ್ಲಿತ್ತು. ಇದರಿಂದ ಅಲ್ಪಸಂಖ್ಯಾಕ ಸಮುದಾಯದ ವಿದ್ಯಾರ್ಥಿಗಳಿಗೆ ತಮ್ಮ ಸಮುದಾಯದ ಮಾಲಕತ್ವದ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಸುಲಭವಾಗುತ್ತಿತ್ತು.

ಮಾನದಂಡವೇ ರದ್ದು
ಆದರೆ ಸರಕಾರವು ಮುಸ್ಲಿಂ, ಕ್ರೈಸ್ತ, ಸಿಖ್‌, ಜೈನ್‌, ಬೌದ್ಧ ಮತ್ತು ಪಾರ್ಸಿ ಜನಸಂಖ್ಯೆ ಕಡಿಮೆ ಇರುವುದರಿಂದ ಅಲ್ಪಸಂಖ್ಯಾಕರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾಕ ಸಂಸ್ಥೆಗಳೆಂದು ಘೋಷಿಸಲು ಆ ಸಮುದಾಯಗಳ ವಿದ್ಯಾರ್ಥಿಗಳ ಪ್ರವೇಶದ ಮಾನದಂಡವನ್ನೇ ರದ್ದುಪಡಿಸಿದೆ. 2011ರ ಜನಗಣತಿಯ ಆಧಾರದಲ್ಲಿ ರಾಜ್ಯದಲ್ಲಿ ಒಟ್ಟು 96.01 ಲಕ್ಷ (ಶೇ. 16.28) ಅಲ್ಪಸಂಖ್ಯಾಕರಿದ್ದು ಈ ಪೈಕಿ ಮುಸಲ್ಮಾನರು 78.94 ಲಕ್ಷ (ಶೇ.82.25), ಕ್ರಿಶ್ಚಿಯನ್ನರು 11.43 ಲಕ್ಷ (11.92), ಜೈನರು 4.40 ಲಕ್ಷ (ಶೇ.4.60), ಬೌದ್ಧರು 0.95 ಲಕ್ಷ (ಶೇ.0.98), ಸಿಖ್‌ 0.28 ಲಕ್ಷ (ಶೇ.0.24) ಮತ್ತು ಪಾರ್ಸಿಗಳು 0.011 ಲಕ್ಷ (ಶೇ.0.01) ಇದ್ದಾರೆ. ಅದ್ದರಿಂದ ಈ ನಿಯಮವನ್ನೇ ಕೈಬಿಡಲಾಗಿದೆ.

Advertisement

ಸರಕಾರ ತನ್ನ ಆದೇಶದಲ್ಲಿ ರಾಜ್ಯದಲ್ಲಿ ಅಲ್ಪಸಂಖ್ಯಾಕ ಸಮುದಾಯದವರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಮತೀಯ ಅಲ್ಪಸಂಖ್ಯಾಕರ ಶೈಕ್ಷಣಿಕ ಸಂಸ್ಥೆಯೆಂದು ಘೋಷಿಸಲು ಇರುವ ನಿಯಮ/ಆದೇಶಗಳಲ್ಲಿ ಅಲ್ಪಸಂಖ್ಯಾಕರ ಶೈಕ್ಷಣಿಕ ಸಂಸ್ಥೆಗಳ ರಾಷ್ಟ್ರೀಯ ಆಯೋಗದ ಮಾರ್ಗಸೂಚಿಗೊಳಪಟ್ಟು ಆ ಶೈಕ್ಷಣಿಕ ಸಂಸ್ಥೆಗಳು ಆಯಾ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ ಶೇಕಡ ಇಂತಿಷ್ಟು ಅಲ್ಪಸಂಖ್ಯಾಕ ಸಮುದಾಯದ ವಿದ್ಯಾರ್ಥಿಗಳನ್ನು ಹೊಂದಿರತಕ್ಕದ್ದು ಎಂಬ ಷರತ್ತನ್ನು ರದ್ದುಪಡಿಸುತ್ತಿರುವುದಾಗಿ ಹೇಳಿದೆ.

ರಾಷ್ಟ್ರೀಯ ಆಯೋಗದ ಮಾರ್ಗಸೂಚಿ ಏನು ಹೇಳುತ್ತದೆ?
ಅಲ್ಪಸಂಖ್ಯಾಕರ ಶೈಕ್ಷಣಿಕ ಸಂಸ್ಥೆಗೆ ಅದು ಇರುವ ಪ್ರದೇಶದ ಜನಸಂಖ್ಯೆ ಮತ್ತು ಶೈಕ್ಷಣಿಕ ಅಗತ್ಯವನ್ನು ಪರಿಗಣಿಸಿ ಅಲ್ಪಸಂಖ್ಯಾಕ ವಿದ್ಯಾರ್ಥಿಗಳ ಪ್ರವೇಶದ ಶೇಕಡಾವಾರು ಪ್ರಮಾಣ ಎಷ್ಟಿರಬೇಕು ಎಂದು ನಿರ್ಧರಿಸುವ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ಅಲ್ಪಸಂಖ್ಯಾಕರ ಶೈಕ್ಷಣಿಕ ಸಂಸ್ಥೆಗಳ ರಾಷ್ಟ್ರೀಯ ಆಯೋಗ ನೀಡಿದೆ. ಆದರೆ ಆ ಅಲ್ಪಸಂಖ್ಯಾಕ ಸಮುದಾಯಕ್ಕೆ ಸೇರದ ವಿದ್ಯಾರ್ಥಿಗಳ ಪ್ರವೇಶದಿಂದ ಸಂಸ್ಥೆಯ ಅಲ್ಪಸಂಖ್ಯಾಕ ಸಂಸ್ಥೆ ಸ್ಥಾನಮಾನಕ್ಕೆ ಹಾನಿ ಆಗಬಾರದು ಎಂದು ಮಾರ್ಗಸೂಚಿ ಹೇಳುತ್ತದೆ. ಆದರೆ ರಾಜ್ಯ ಸರಕಾರ ಅಲ್ಪಸಂಖ್ಯಾಕರ ಪ್ರವೇಶದ ಶೇಕಡವಾರು ಪ್ರಮಾಣವನ್ನೇ ರದ್ದುಪಡಿಸುವ ತೀರ್ಮಾನ ಕೈಗೊಂಡಿರುವುದು ಶಿಕ್ಷಣ ತಜ್ಞರಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿದೆ.

ಆದೇಶದಲ್ಲಿ ಎಡವಟ್ಟು!
ಸರಕಾರವು ಈ ಆದೇಶವನ್ನು ಮಾರ್ಚ್‌ 16ರಂದು ಅಂದರೆ ಲೋಕಸಭಾ ಚುನಾವಣೆ ಘೋಷಣೆಯಾದ ದಿನ ಮಾಡಿದೆ. ಆದರೆ ಈ ಆದೇಶವನ್ನು ಮೇ 5, 2024ರಂದು ನಡೆದ ಸಚಿವ ಸಂಪುಟದಲ್ಲಿ ನೀಡಿರುವ ಅನುಮೋದನೆಯಂತೆ ಹೊರಡಿಸಲಾಗಿದೆ ಎಂದು ಎಡವಟ್ಟು ಮಾಡಿಕೊಂಡಿದೆ. ಎಡವಟ್ಟು ಬಹಿರಂಗಗೊಂಡ ಬಳಿಕ ಮರು ಆದೇಶ ಹೊರಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next