ಮಹಾರಾಷ್ಟ್ರ: ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಪತ್ನಿ ಮತ್ತು ಸೋದರಳಿಯನನ್ನು ತನ್ನ ರಿವಾಲ್ವರ್‌ನಿಂದ ಗುಂಡಿಕ್ಕಿ ಬಳಿಕ ತಾನೂ ಹಣೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಮೃತರನ್ನು ಎಸಿಪಿ ಭರತ್ ಗಾಯಕ್ವಾಡ್, ಅವರ ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಎಂದು ಗುರುತಿಸಲಾಗಿದೆ.
ಬಾನೇರ್ ಪ್ರದೇಶದ ಎಸಿಪಿ ಭರತ್ ಗಾಯಕ್ವಾಡ್ ಅವರ ಬಂಗಲೆಯಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ಚತುರ್ಶೃಂಗಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದು, ಅವರು ಪತ್ನಿ ಮತ್ತು ಸೋದರಳಿಯನೊಂದಿಗೆ ಪುಣೆಯ ಬನೇರ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಸೋಮವಾರ ಬೆಳಗಿನ ಜಾವ 3.30ರ ಸುಮಾರಿಗೆ ಎಸಿಪಿ ಮೊದಲು ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗುಂಡಿನ ಸದ್ದು ಕೇಳಿ ಅವರ ಮಗ ಮತ್ತು ಸೋದರಳಿಯ ಓಡಿ ಬಂದು ಬಾಗಿಲು ತೆರೆದರು. ಅವರು ಬಾಗಿಲು ತೆರೆದ ಕೂಡಲೆ ಸೋದರಳಿಯನ ಮೇಲೆ ಗುಂಡು ಹಾರಿಸಿ ಬಳಿಕ ತಾನು ಗುಂಡು ಹಾರಿಸಿಕೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Gyanvapi survey: ಜ್ಞಾನವಾಸಿ ಮಸೀದಿ ಸರ್ವೆಗೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂ ಕೋರ್ಟ್