Advertisement

ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಸಚಿವ ಜಾಲಪ್ಪ ನಿಧನ

06:44 PM Dec 17, 2021 | Team Udayavani |

ಚಿಕ್ಕಬಳ್ಳಾಪುರ : ಮಾಜಿ ಕೇಂದ್ರ ಸಚಿವ,ಹಿರಿಯ ಕಾಂಗ್ರೆಸ್ ನಾಯಕ ಆರ್.ಎಲ್.ಜಾಲಪ್ಪ ಅವರು ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 96 ವರ್ಷ ಪ್ರಾಯವಾಗಿತ್ತು.

Advertisement

ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಾಲಪ್ಪ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ದೊಡ್ಡಬಳ್ಳಾಪುರದ ತೂಬಗೆರೆ ನಿವಾಸದಲ್ಲಿ ಪಾರ್ಶುವಾಯುವಿಗೆ ತುತ್ತಾಗಿದ್ದ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು, ಕೋಲಾರದ ಆರ್. ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಜಾಲಪ್ಪ ಅವರು 1979 ರವರೆಗೆ ಕಾಂಗ್ರೆಸ್ ಸದಸ್ಯರಾಗಿದ್ದರು, ಡಿ. ದೇವರಾಜ್ ಅರಸ್ ಅವರೊಂದಿಗೆ ಕರ್ನಾಟಕ ಕ್ರಾಂತಿ ರಂಗವನ್ನು ರಚಿಸಲು ಪಕ್ಷವನ್ನು ತೊರೆದರು, ಆ ಪಕ್ಷ ಮರುವರ್ಷ ಜನತಾ ಪಕ್ಷದೊಂದಿಗೆ ವಿಲೀನಗೊಂಡಿತು. ಹತ್ತು ವರ್ಷಗಳ ನಂತರ, ಅವರು ಜನತಾ ದಳಕ್ಕೆ ಸೇರಿದರು. 1996 ರಲ್ಲಿ ಚಿಕ್ಕಬಳ್ಳಾಪುರದಿಂದ ಲೋಕಸಭೆಗೆ ಆಯ್ಕೆಯಾದ ಅವರು 1996 ರಿಂದ ಜನವರಿ 1998 ರವರೆಗೆ ಕೇಂದ್ರ ಜವಳಿ ಸಚಿವರಾಗಿ ಸೇವೆ ಸಲ್ಲಿಸಿದರು, ಜನತಾ ದಳ ಪಕ್ಷವನ್ನು ತೊರೆದು ಮತ್ತೆ ಕಾಂಗ್ರೆಸ್ ಸೇರಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮತ್ತೊಮ್ಮೆ ಲೋಕಸಭೆಗೆ ಚುನಾಯಿತರಾದ ಅವರು 2009 ರವರೆಗೆ ಸದಸ್ಯರಾಗಿದ್ದರು.

ಕೋಲಾರದಲ್ಲಿರುವ ಶ್ರೀ ದೇವರಾಜ್ ಅರಸ್ ವೈದ್ಯಕೀಯ ಕಾಲೇಜಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

Advertisement

ನಿಧನಕ್ಕೆ ಗಣ್ಯರ ಸಂತಾಪ

ಜಾಲಪ್ಪ ಅವರ ನಿಧಾನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದು, ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರು, ಬಿಜೆಪಿ ನಾಯಕರು , ಸಚಿವರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆರ್ ಎಲ್ ಜಾಲಪ್ಪ ಅವರು ರಾಜ್ಯ ರಾಜಕಾರಣದ ಹಿರಿಯ ಮುಖಂಡರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಮುಖಿ ಕೆಲಸ ಮಾಡಿದ್ದರು. ಜಾಲಪ್ಪ ಅವರ ನಿಧನದಿಂದ ರಾಜ್ಯದ ಸಾತ್ವಿಕ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ಕರುಣಿಸಲಿ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಮುಖ್ಯಮಂತ್ರಿಗಳು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next