ಬೆಂಗಳೂರು: “ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸಲಾಗುವುದು’ ಎಂದು ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಹೇಳಿದ್ದಾರೆ.
ಬುಧವಾರ ಬಿಜೆಪಿ ಸೇರ್ಪಡೆಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಪಿತೂರಿ ಮಾಡಿ ನನ್ನನ್ನು ಸೋಲಿಸಲಾಯಿತು. ಇದಕ್ಕೆ ಲೋಕಸಭೆ ಚುನಾವಣೆಯಲ್ಲಿ ಪ್ರತ್ಯುತ್ತರ ನೀಡಲಿದ್ದೇನೆ ಎಂದರು.
ನಾನು ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳುತ್ತಲೇ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು. ನಾನು ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಇದನ್ನು ಸಹಿಸದೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಯಿತು. ನನ್ನನ್ನು ಬಿಜೆಪಿ ಅಥವಾ ಜೆಡಿಎಸ್ ಸೋಲಿಸಿಲ್ಲ.
ಕಾಂಗ್ರೆಸ್‌ನವರೇ ಸೋಲಿಸಿದರು ಎಂದರು. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಏಳಿಗೆ ಸಹಿಸದೆ ತುಳಿಯುವ ಕೆಲಸ ಮಾಡಿದರು. ಮೊದಲ ಬಾರಿಗೆ ಗೆದ್ದ ಅವರ ಪುತ್ರನಿಗೆ ಸಚಿವ ಸ್ಥಾನ ಕೊಡಿಸಿ ನಮಗೆ ಆನ್ಯಾಯ ಮಾಡಿದರು ಎಂದು ದೂರಿದರು.
ನಾನು ಹಾಗೂ ಬಾಬೂರಾವ್ ಚಿಂಚನಸೂರ್ ಅವರು ಹೈ-ಕ ಭಾಗದಲ್ಲಿ ನಮ್ಮದೇ ಮತಬ್ಯಾಂಕ್ ಹೊಂದಿದ್ದೇವೆ. ನಮ್ಮ ಶಕ್ತಿ ಪ್ರದರ್ಶನ ಮಾಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳುತ್ತೇವೆ ಎಂದರು.