Advertisement

ಕೋವಿಡ್ ನೆಪ : 9 ತಿಂಗಳಿನಿಂದ ನಿರ್ಗತಿಕ ಹಿರಿಯ ನಾಗರಿಕರಿಗೆ ಸಿಗದ ಬಿಸಿಯೂಟ ಭಾಗ್ಯ

11:53 AM Jan 05, 2022 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ ಸಿಗುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಕಳೆದ ಒಂಬತ್ತು ತಿಂಗಳಿನಿಂದ ಸ್ಥಗಿತಗೊಂಡಿದೆ.
ಕೊರೊನಾ ನೆಪವೊಡ್ಡಿ ಮಧ್ಯಾಹ್ನದ ಬಿಸಿಯೂಟ ನಿಲ್ಲಿಸಲಾಗಿದ್ದು, ಇಂದಿರಾ ಕ್ಯಾಂಟೀನ್‌ನಲ್ಲಿ ಹಣ ಪಡೆದು ತಿನ್ನಿ ಎಂಬ ಪುಕ್ಕಟೆ ಸಲಹೆ ನೀಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ.
ಕೊಳೆಗೇರಿ ಹಾಗೂ ಇತರೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಹುತೇಕ ನಿರ್ಗತಿಕರು ಹಾಗೂ ಅಸಂಘಟಿತ ವಲಯದ ನಿವೃತ್ತ ಕಾರ್ಮಿಕರೂ ಆಗಿರುವ 2.87 ಲಕ್ಷ ಮಂದಿ ಮಧ್ಯಾಹ್ನದ ಬಿಸಿ
ಯೂಟದಿಂದ ವಂಚಿತರಾಗಿದ್ದು, ಸಾಕಷ್ಟು ಹೋರಾಟಗಳು ನಡೆಸಿದರೂ ಪ್ರಯೋಜನವಾಗುತ್ತಿಲ್ಲ.

Advertisement

ಅತ್ತ ಮನೆಯಲ್ಲೂ ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳಲು ಶಕ್ತಿ ಇಲ್ಲದೆ ಇತ್ತ ಇಂದಿರಾ ಕ್ಯಾಂಟೀನ್‌ವರೆಗೂ ಹೋಗಿ ಹಣ ಕೊಟ್ಟು ಊಟ ಮಾಡುವಷ್ಟು ಸ್ಥಿತಿವಂತರಲ್ಲದ ಈ ಹಿರಿಯ ನಾಗರಿಕರು ಏನೂ ಮಾಡಲಾಗದ ಸ್ಥಿತಿಯಿಂದ ಮಾನಸಿಕ ವೇದನೆಯಲ್ಲೇ ಕಾಲ ಕಳೆಯುವಂತಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2008-09ರಲ್ಲಿ ನಿರ್ಗತಿಕ ಹಿರಿಯ ನಾಗರಿಕರಿಗಾಗಿ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಆರಂಭಿಸಲಾ ಗಿತ್ತು. ಆದರೆ, ಈ ಯೋಜನೆಗೆ ಆಗಾಗ ವಿಘ್ನಗಳು ಕಾಡುತ್ತಲೇ ಇದೆ. 2009 ರಲ್ಲಿ ಯೋಜನೆ ಪ್ರಾರಂಭವಾದರೂ 2012ರ
ಅಂತ್ಯದಲ್ಲಿ ಯೋಜನೆ ಸ್ಥಗಿತಗೊಂಡಿತ್ತು. ಅನಂತರ 2013ರಿಂದ 2019ರ ವರೆಗೆ ಮುಂದುವರಿದರೂ ಕಳೆದ 9 ತಿಂಗಳಿನಿಂದ ಕೊರೊನಾ ನೆಪದಲ್ಲಿ ನಿಂತುಹೋಗಿದೆ.

ಮಧ್ಯಾಹ್ನದ ಬಿಸಿಯೂಟ ನಿಲ್ಲಿಸಿರುವುದರಿಂದ ಸಾಕಷ್ಟು ತೊಂದರೆಯುಂಟಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಒಂದೆಡೆ ಮಕ್ಕಳು ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ, ಮತ್ತೂಂದೆಡೆ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟು, ಒಂದು ಹೊತ್ತಿನ ಊಟಕ್ಕೆ ಅಕ್ಕ-ಪಕ್ಕದ ಮನೆಯಲ್ಲಿ ಭಿಕ್ಷೆ ಬೇಡಿ ತಿನ್ನುವಂತಾಗಿದೆ ಎಂದು ಹಿರಿಯ ನಾಗರಿಕರು ಅಳಲು ತೋಡಿಕೊಳ್ಳುತ್ತಾರೆ.

ನಗರದ ರಾಮಮೂರ್ತಿ ನಗರ, ಕೋರಮಂಗಲ, ಬೈಯ್ಯಪ್ಪನಹಳ್ಳಿ, ಲಿಂಗರಾಜಪುರಂ, ದೊಮ್ಮಲೂರು ಸೇರಿದಂತೆ ಎಲ್ಲೆಡೆ ಮಧ್ಯಾಹ್ನದ ಬಿಸಿಯೂಟ ನೆಚ್ಚಿಕೊಂಡ ಹಿರಿಯ ನಾಗರಿಕರು ವಾಸಿಸುತ್ತಿದ್ದಾರೆ. ಯೋಜನೆ ಸ್ಥಗಿತ ಹಿನ್ನೆಲೆಯಲ್ಲಿ ತೊಂದರೆಗೊಳಗಾಗಿದ್ದಾರೆ.

ನಿರಂತರ ಹೋರಾಟ: ಒಮ್ಮೆ ಸ್ಥಗಿತಗೊಂಡಿದ್ದ ಮಧ್ಯಾಹ್ನ ಬಿಸಿಯೂಟ ಯೋಜನೆ ಪ್ರಾರಂಭಗೊಳ್ಳಲು ಸತತ ಆರು ವರ್ಷ ಅಖೀಲ ಕರ್ನಾಟಕ ವಯೋವೃದ್ಧರ ಒಕ್ಕೂಟ (ಐಕ್ಯತಾ) ಹೋರಾಟ ನಡೆಸಿತ್ತು. ಇದರ ಫ‌ಲವಾಗಿ ಯೋಜನೆ ಜಾರಿಗೆ ಬಂದಿತ್ತು. ಹಿರಿಯ ನಾಯಕರಿಗೆ ನೀಡುವ ಮಧ್ಯಾಹ್ನದ ಬಿಸಿ ಯೂಟ ಪುನರಾರಂಭಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಹಲವು ಬಾರಿ ಲಿಖೀತ ಮನವಿ ಸಲ್ಲಿಸಲಾಯಿತು.

Advertisement

ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಇತ್ತಿಚೆಗೆ ಕಚೇರಿ ಮುಂದೆ ಸುಮಾರು 400 ವಯೋವೃದ್ಧರು ಸೇರಿ ಪ್ರತಿಭಟನೆ ಮಾಡಿದರು. ಆಯುಕ್ತರು ಒಂದು ವಾರದ ಕಾಲಾವಧಿಯಲ್ಲಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಇನ್ನೂ ಈಡೇರಲಿಲ್ಲ ಎಂದು ತಿಳಿಸುತ್ತಾರೆ.

ಅಸಂಘಟಿತ ನಿವೃತ್ತ ಕಾರ್ಮಿಕರಿಗೆ ನೀಡುತ್ತಿರುವ ಬಿಸಿಯೂಟ ನಿಲುಗಡೆಯಾಗಿರುವ ಬಗ್ಗೆ ಇತ್ತೀಚೆಗೆ ಗಮನಕ್ಕೆ ಬಂದಿದೆ. ಮುಂದಿನ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಮಾಹಿತಿಯ ಪಡೆಯುತ್ತೇನೆ.
– ಗೌರವ ಗುಪ್ತಾ, ಪಾಲಿಕೆ ಆಯುಕ

ಸುಮಾರು ವರ್ಷಗಳಿಂದ ನಾಡಿಗಾಗಿ ಶ್ರಮವಹಿಸಿದ ವಯೋವೃದ್ಧರಿಗೆ ಒಂದು ಹೊತ್ತಿನ ಊಟ ಕೊಡಲು ಈ ಸರ್ಕಾರ ಹಿಂದೇಟಾಕುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಒಂದು ವಾರ ಕಾಲಾವಧಿ ತೆಗದುಕೊಂಡಿದ್ದಾರೆ. ಆ ನಂತರವು ಯೋಜನೆ ಅನುಷ್ಠಾನಕ್ಕೆ ಬರದಿದ್ದರೆ, ಮತ್ತೆ ಹೋರಾಟ ನಡೆಸುತ್ತೇವೆ.
– ಎಸ್‌.ಲತಾ, ದೊಮ್ಮಲೂರು , ಐಕ್ಯತಾ ಶಾಖೆಯ ಅಧ್ಯಕ್ಷೆ

– ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next