Advertisement

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

07:54 PM Nov 24, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮಹಾಯುತಿ ನಾಯಕರು, ಬಿಜೆಪಿ ಸಂಸದೀಯ ಮಂಡಳಿಯು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸಲು ಮಹತ್ವದ ಚರ್ಚೆಗಳನ್ನು ನಡೆಸುತ್ತಿದ್ದಾರೆ.

Advertisement

ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಮತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅವರು ಭಾನುವಾರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ನಾಯಕರು ಮತ್ತು ಬಿಜೆಪಿ ನಾಯಕತ್ವ ನಿರ್ಧರಿಸಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಭಾನುವಾರ ಹೇಳಿದ್ದಾರೆ.

ರಾಜ್ಯದ ಮುಂದಿನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯು ಮೈತ್ರಿಕೂಟದ ಆಡಳಿತದ ಯೋಜನೆಗಳಿಗೆ ಅನುಗುಣವಾಗಿರುತ್ತದೆ ಎಂದರು.

ಸೋಲಿನ ಬಗ್ಗೆ ಪಕ್ಷ ತನಿಖೆ ನಡೆಸಲಿದೆ ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರಿಗೆ ತಿರುಗೇಟು ನೀಡಿದ ಬವಾಂಕುಲೆ ‘ಮಹಾರಾಷ್ಟ್ರದ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಮತ್ತು ಪಟೋಲೆ ಅವರು ರಾಜ್ಯ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೇಳುತ್ತಿರುವ ತಮ್ಮದೇ ಕೆಲವು ಸಹೋದ್ಯೋಗಿಗಳತ್ತ ಗಮನ ಕೊಡಬೇಕು ಎಂದರು.

Advertisement

‘ಹೊಸದಾಗಿ ಚುನಾಯಿತ ಮಹಾಯುತಿ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆ ಮತ್ತು ಭಾಷಣಗಳಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವುದನ್ನು ಕಾಂಗ್ರೆಸ್ ಖಚಿತಪಡಿಸುತ್ತದೆ ಎಂದು ನಾನಾ ಪಟೋಲೆ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಜ್ಯ ಚುನಾವಣೆಯಲ್ಲಿ ತನ್ನ ಗೆಲುವಿಗಾಗಿ ಲಡ್ಕಿ ಬಹಿನ್ ಯೋಜನೆ ಮಹಿಳೆಯರಿಗೆ ಮಾಸಿಕ ಭತ್ಯೆಯನ್ನು 1,500 ರಿಂದ 2,100 ಕ್ಕೆ ಹೆಚ್ಚಿಸುವ ಭರವಸೆಯನ್ನು ತತ್ ಕ್ಷಣವೇ ಈಡೇರಿಸಬೇಕು ಎಂದು ಒತ್ತಾಯಿಸಿದರು.

288 ಸ್ಥಾನಗಳ ಪೈಕಿ 230 ಸ್ಥಾನಗಳನ್ನು ಗೆದ್ದು ಮಹಾಯುತಿ ಭರ್ಜರಿ ಜಯ ದಾಖಲಿಸಿದ್ದು, ಬಿಜೆಪಿ 132, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದುಕೊಂಡಿದೆ. ಸದ್ಯ ಬಿಜೆಪಿ ಮುಖ್ಯಮಂತ್ರಿ ಹುದ್ದೆ ತನ್ನ ಪಾಲಿಗೆ ಬರಲು ಕಸರತ್ತು ನಡೆಸುತ್ತಿದೆ.

MVA ಕೇವಲ 46 ಸ್ಥಾನಗಳನ್ನು ಒಟ್ಟಿಗೆ ಗೆಲ್ಲಲಷ್ಟೇ ಶಕ್ತವಾಗಿ ಭಾರೀ ಸೋಲನ್ನು ಅನುಭವಿಸಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಶರದ್ಚಂದ್ರ ಪವಾರ್) 10 ಸ್ಥಾನಗಳನ್ನು, ಕಾಂಗ್ರೆಸ್ 16 ಮತ್ತು ಶಿವಸೇನೆ (ಯುಬಿಟಿ) 20 ಸ್ಥಾನಗಳನ್ನು ಗೆದ್ದಿವೆ.

ಭಂಡಾರಾ ಜಿಲ್ಲೆಯ ಸಾಕೋಲಿ ವಿಧಾನಸಭಾ ಕ್ಷೇತ್ರದಿಂದ ಪಟೋಲೆ ಸ್ವತಃ ಕೇವಲ 208 ಮತಗಳಿಂದ ಗೆದ್ದಿದ್ದಾರೆ, ಇದು ಕಡಿಮೆ ಅಂತರಗಳ ಜಯದಲ್ಲಿ ಒಂದಾಗಿದೆ.

ಪ್ರಸ್ತುತ ರಾಜ್ಯ ವಿಧಾನಸಭೆಯ ಅಧಿಕಾರಾವಧಿಯು ಮಂಗಳವಾರ ಕೊನೆಗೊಳ್ಳಲಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸಲು ಆಡಳಿತಾರೂಢ ಮಿತ್ರಪಕ್ಷಗಳ ನಾಯಕರ ನಡುವೆ ನಾಳೆಯೇ ಸಭೆ ನಡೆಸುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next