ಉಡುಪಿ: ಆಂಧ್ರ ಬ್ಯಾಂಕಿನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿದ್ದ ತೆಂಕನಿಡಿಯೂರು ಜನಾರ್ದನ ಅನಂತ ಗಾಣಿಗ (84) ಜು. 10ರಂದು ಕಿನಿಮೂಲ್ಕಿಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.
ಟಿಜೆಎ ಗಾಣಿಗ ಎಂದು ಪ್ರಸಿದ್ಧರಾದ ಅವರು ಪತ್ನಿ, ಅಮೆರಿಕದಲ್ಲಿರುವ ಪುತ್ರಿ ಸಂಧ್ಯಾ ಅವರನ್ನು ಅಗಲಿದ್ದಾರೆ.
ಸಿಂಡಿಕೇಟ್ ಬ್ಯಾಂಕಿನಲ್ಲಿ ವರಿಷ್ಠರಾಗಿದ್ದ ಟಿಎಪೈ ಅವರ ಮೂಲಕ ಸಿಂಡಿಕೇಟ್ ಬ್ಯಾಂಕಿಗೆ ಉದ್ಯೋಗಿಯಾಗಿ ಸೇರಿದ ಟಿಜೆಎ ಗಾಣಿಗ ಅವರು ವಿವಿಧ ಸ್ತರಗಳಲ್ಲಿ ಸುಮಾರು 35 ವರ್ಷ ಕಾಲ ಸೇವೆ ಸಲ್ಲಿಸಿದರು. ಹೊಸದಿಲ್ಲಿ ಶಾಖೆಯಲ್ಲಿ ಯಶಸ್ವಿ ಬ್ಯಾಂಕರ್ ಆಗಿ ಹೊರಹೊಮ್ಮಿದ ಗಾಣಿಗರು ಮಣಿಪಾಲ ಪ್ರಧಾನ ಕಚೇರಿಯಲ್ಲಿ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಡುಪಿ ಮತ್ತು ಮಣಿಪಾಲದ ಬಹುತೇಕ ಎಲ್ಲ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
ಆಂಧ್ರ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಪದೋನ್ನತಿ ಹೊಂದಿದ ಗಾಣಿಗರು ಬಳಿಕ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದರು. ಈ ಸಂದರ್ಭದಲ್ಲಿ ಆಂಧ್ರ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತರಾದರು. ಅಲ್ಲಿ ನಿವೃತ್ತರಾದ ಬಳಿಕ ಬಿಎಸ್ಆರ್ಬಿ ದಕ್ಷಿಣ ವಲಯದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನಿವೃತ್ತಿ ಬಳಿಕ ಕಿನ್ನಿಮೂಲ್ಕಿಯಲ್ಲಿ ವಿಶ್ರಾಂತ ಜೀವನ ನಡೆಸಿದ್ದರು.