ಬಳ್ಳಾರಿ: ರಂಗಭೂಮಿ ಹಿರಿಯ ಕಲಾವಿದೆ, ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಅವರು ಬುಧವಾರ ರಾತ್ರಿ ವಿಧಿವಶರಾಗಿದ್ದಾನೆ.
ಸತತ 50 ವರ್ಷಗಳ ಕಾಲ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ 81 ವರ್ಷದ ಸುಭದ್ರಮ್ಮ ಅವರು ಉಸಿರಾಟ ಸಮಸ್ಯೆಯಿಂದಾಗಿ ಬಳ್ಳಾರಿಯ ನಗರದ ತನ್ನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
50 ವರ್ಷಗಳ ಕಾಲ ರಂಗಭೂಮಿಯಲ್ಲಿ ಮಿಂಚಿದ ಗಣಿನಾಡಿನ ಪ್ರತಿಭೆಯಾಗಿದ್ದಾರೆ. ತಮ್ಮ 27ನೇ ವಯಸ್ಸಿಗೆ ರಂಗಭೂಮಿ ಪ್ರವೇಶಿಸಿದ ಸುಭದ್ರಮ್ಮ, ಕುಂತಿ, ಗಾಂಧಾರಿ, ದ್ರೌಪದಿ, ಉತ್ತರೆ, ಸೀತೆ ಪಾತ್ರಗಳ ಮೂಲಕ ಕಲಾಸಕ್ತ ಜನಮಾನಸದಲ್ಲಿ ಅಚ್ಚೊತ್ತಿದ್ದರು.
ಬಳ್ಳಾರಿ ಸುಭದ್ರಮ್ಮ ಅಂತಲೇ ಖ್ಯಾತಿ ಗಳಿಸಿದ್ದ ಇವರು ಎರಡು ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಿಗೆ ಬಣ್ಣ ಹಚ್ಚಿದ್ದಾರೆ. ಇವರ ರಂಗಭೂಮಿ ಸೇವೆಯನ್ನು ಗುರುತಿಸಿದ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಬಳ್ಳಾರಿ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ನಾಟಕ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಹಂಪಿ ವಿವಿ ಕೊಡಮಾಡುವ ನಾಡೋಜ ಸೇರಿ ಹಲವಾರು ಗೌರವ ಪುರಸ್ಕಾರಗಳು ಅವರಿಗೆ ಸಂದಿವೆ.