Advertisement

ಹಿರಿಯ ನಟಿ ಮಹಾಲಕ್ಷ್ಮೀ ರೀ ಎಂಟ್ರಿ?

10:16 AM Nov 17, 2019 | Lakshmi GovindaRaju |

1980 ಮತ್ತು 90ರ ದಶಕದಲ್ಲಿ ಕನ್ನಡ ಚಿತ್ರಗಳನ್ನು ನೋಡಿದವರಿಗೆ ಮಹಾಲಕ್ಷ್ಮೀ ಎಂಬ ಅಪರೂಪದ ನಾಯಕ ನಟಿಯ ಪರಿಚಯ ಖಂಡಿತ ಇರುತ್ತದೆ. ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವಾಗಲೇ, ದಿಢೀರನೆ ಬಣ್ಣದ ಬದುಕಿನಿಂದ ದೂರವಾಗಿದ್ದ ಮಹಾಲಕ್ಷ್ಮೀ ಅವರ ಹೆಸರು ನಂತರ ಚಿತ್ರರಂಗದ ಅನೇಕ ಅಂತೆ-ಕಂತೆ ಸುದ್ದಿಗಳಿಗೆ ಕಾರಣವಾಗಿದ್ದೇ ಹೆಚ್ಚು.

Advertisement

ಇದರ ನಡುವೆ ಮಹಾಲಕ್ಷ್ಮೀ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗುತ್ತಾರೆ ಎಂಬ ಸುದ್ದಿಗಳು ಆಗಾಗ್ಗೆ ಹರಿದಾಡುತ್ತಿದ್ದರೂ, ಅದ್ಯಾವುದು ನಿಜವಾಗಿರಲಿಲ್ಲ. ಈಗ ನಟಿ ಮಹಾಲಕ್ಷ್ಮೀ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಅಂಥದ್ದೇ ಮತ್ತೂಂದು ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನಿರ್ದೇಶಕ ರವಿ ಶ್ರೀವತ್ಸ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ “ಹುಡುಕುತ್ತಿದ್ದವರಿಗೆ ಸಿಕ್ಕ ಮಹಾಲಕ್ಷ್ಮೀ.

ಬೆಳ್ಳಿತೆರೆಯನ್ನ ತುಂಬಿ ತುಳುಕಿಸುತ್ತಿದ್ದ ಅದ್ಭುತ ನಟಿ ಮಹಾಲಕ್ಷ್ಮೀ ದಿಢೀರನೆ ಒಂದು ದಿನ ಸಿನಿಮಾ ಜಗತ್ತಿನಿಂದ ಕಣ್ಮರೆಯಾದಾಗಿನಿಂದ ಅವರ ಅಡ್ರೆಸ್‌ ಕೇಳಿ ಹುಡುಕಿ ಬಂದವರ ಸಂಖ್ಯೆ ಬಹಳ. ಕಳೆದುಹೋಗಿದ್ದ ನಮ್ಮ “ಚಿನ್ನದ ಮೂಗುತಿ’ ಅದು ಈಗ ಸಿಕ್ಕಿದೆ. ಬೆಳ್ಳಿತೆರೆಯ ನಾಸಿಕಕ್ಕೇರಲು ಮತ್ತೆ ಸಜ್ಜಾಗಿದೆ. ನಿರ್ದೇಶಕ ಮಿತ್ರರೇ, ಅದ್ಭುತ ಕಲಾವಿದೆ ಸದುಪಯೋಗಿಸಿಕೊಳ್ಳಿ.

ಇದೋ ಇವರೇ ನಮ್ಮ, ನಿಮ್ಮ ಮಹಾಲಕ್ಷ್ಮೀ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಹಾಲಕ್ಷ್ಮೀಯವರ ಒಂದಷ್ಟು ಫೋಟೋಗಳನ್ನು ಕೂಡಾ ಹಂಚಿಕೊಂಡಿದ್ದಾರೆ. ಹಾಗಂತ ರವಿ ಶ್ರೀವತ್ಸ ಮುಂದಿನ ಚಿತ್ರದಲ್ಲಿ ಮಹಾಲಕ್ಷ್ಮೀ ಅಭಿನಯಿಸುತ್ತಾರಾ ಎಂಬ ಬಗ್ಗೆಯೂ ಸ್ಪಷ್ಟಪಡಿಸಿಲ್ಲ.

ಇದರಿಂದಾಗಿ ಮತ್ತೆ ಮಹಾಲಕ್ಷ್ಮೀ ಬಗ್ಗೆ ಮಾತುಕತೆ ಶುರುವಾಗಿದೆ. ಒಟ್ಟಾರೆ ಇಲ್ಲಿಯವರೆಗೆ ತೆರೆಮರೆಯಾಗಿದ್ದ ಹಿರಿಯ ನಟಿ ಮಹಾಲಕ್ಷ್ಮೀ ರೀ-ಎಂಟ್ರಿ ಬಗ್ಗೆ ಹೀಗೊಂದಷ್ಟು ಸುದ್ದಿಗಳು ಚಿತ್ರರಂಗದಲ್ಲಿ ಹರಿದಾಡುತ್ತಿದ್ದು, ಸದ್ಯ ಚೆನ್ನೈನಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾದ ನಟಿ ಮಹಾಲಕ್ಷ್ಮೀ ಈ ಬಗ್ಗೆ ಸ್ವತಃ ಖಚಿತಪಡಿಸಿದ ಮೇಲಷ್ಟೇ ಎಲ್ಲದಕ್ಕೂ ತೆರೆಬೀಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next