ಮಣಿಪಾಲ: ಸ್ವಾತಂತ್ರ್ಯ ಹೋರಾಟಗಾರ, ತುಳು ಹೋರಾಟಗಾರ ಎಸ್.ಯು. ಪಣಿಯಾಡಿ ಅವರ ಪುತ್ರಿ, ಚಲನಚಿತ್ರ ರಂಗದ ಹಿರಿಯ ನಟಿ-ನಿರ್ಮಾಪಕಿ ಹರಿಣಿ ಅವರನ್ನು ಶುಕ್ರವಾರ ಮಣಿಪಾಲದ ಉದಯವಾಣಿ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದಕುಮಾರ್ ಅವರು ಶಾಲು, ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಹರಿಣಿಯವರು ಕನ್ನಡ ಚಲನಚಿತ್ರದ ಯಶಸ್ವೀ ನಟಿಯಾಗಿರುವುದು ಮಾತ್ರವಲ್ಲದೆ, ಮಣಿಪಾಲದ ಪ್ರಸ್ ಸ್ಥಾಪನೆಗೆ ಕಾರಣರಾದ ಎಸ್.ಯು. ಪಣಿಯಾಡಿ ಅವರ ಪುತ್ರಿ ಎನ್ನುವುದು ಉಲ್ಲೇಖನೀಯ. ಪಣಿಯಾಡಿಯವರು ಸ್ವಾತಂತ್ರ್ಯ ಹೋರಾಟ ಮತ್ತು ತುಳು ಭಾಷೆ- ಸಂಸ್ಕೃತಿಗೆ ಕೊಟ್ಟ ಕೊಡುಗೆ ಗಮನಾರ್ಹವಾದುದು. ಹಿರಿಯ ನಟಿ ಹರಿಣಿಯವರನ್ನು ಸಮ್ಮಾನಿಸುವ ಅವಕಾಶ ಬಂದೊದಗಿರುವುದು ಅತೀ ಸಂತಸ ತಂದಿತ್ತಿದೆ ಎಂದು ವಿನೋದಕುಮಾರ್ ಹೇಳಿದರು.
ಉದಯವಾಣಿ ಪತ್ರಿಕೆಯಿಂದ ಸಂದರ್ಶನ ಮಾತ್ರವಲ್ಲದೆ, ಪ್ರೀತಿಯ ಕರೆ ನೀಡಿ ನನ್ನ ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ಒದಗಿಸಿಕೊಟ್ಟಿರುವುದು ಬಹಳ ಸಂತೋಷ ತರುತ್ತಿದೆ. ನಿಮ್ಮೆಲ್ಲರ ನಡುವೆ ತುಸು ಹೊತ್ತು ಕಳೆದಿರುವುದು ನನಗೆ ಸಂತೃಪ್ತಿ ತಂದಿದೆ ಎಂದು ಹರಿಣಿ ಭಾವುಕರಾಗಿ ನುಡಿದರು.
ತುಳುಕೂಟದ ವತಿಯಿಂದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಕಾರ್ಯದರ್ಶಿ ಗಂಗಾಧರ ಕಿದಿಯೂರು ಅವರು ಹರಿಣಿಯವರನ್ನು ಸಮ್ಮಾನಿಸಿದರು. ತುಳು ಸಂಸ್ಕೃತಿಗೂ ಎಸ್.ಯು. ಪಣಿಯಾಡಿ ಅವರಿಗೂ ಅವಿನಾಭಾವ ಸಂಬಂಧವಿದ್ದು ತುಳುಕೂಟದಿಂದ 27 ವರ್ಷಗಳಿಂದ ಪ್ರತೀ ವರ್ಷ ಪಣಿಯಾಡಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಜೀವನದಲ್ಲಿ ಏನಾದರೂ ಒಂದು ಮಹತ್ತರ ಸಾಧನೆ ಮಾಡಬೇಕೆನ್ನುವುದಕ್ಕೆ ಪಣಿಯಾಡಿಯವರ ಜೀವನವೇ ಉದಾಹರಣೆ. ತುಳುಕೂಟದ ದಶಮಾನೋತ್ಸವಕ್ಕೆ ಹರಿಣಿಯವರ ಸಹೋದರ, ಚಲನಚಿತ್ರರಂಗದ ನಟ ವಾದಿರಾಜರು ಬಂದಿದ್ದರು. ಮುಂದಿನ ವರ್ಷ ಹರಿಣಿಯವರೂ ಬರಬೇಕು ಎಂದು ಜಯಕರ ಶೆಟ್ಟಿ ಆಹ್ವಾನಿಸಿದರು.
“ಉದಯವಾಣಿ’ಯ ಸ್ಥಾಪಕ ಸಂಪಾದಕೀಯ ವಿಭಾಗದ ಮುಖ್ಯಸ್ಥ ಬನ್ನಂಜೆ ರಾಮಾಚಾರ್ಯರ ಪುತ್ರ ಸರ್ವಜ್ಞ ಉಪಸ್ಥಿತರಿದ್ದರು. ಉಪಸಂಪಾದಕಿ ರಾಧಿಕಾ ನಿರ್ವಹಿಸಿದರು.