Advertisement

ಚಿಂತಿಸುವ ‌ಸಮಯ ಅಲ್ಲ ಮೊದಲು ಜೀವ

10:22 AM Apr 08, 2020 | Suhan S |

ಹಿರಿಯ ನಟ ಅನಂತ್‌ ನಾಗ್‌ ಸಿನಿಮಾ ಚಿತ್ರೀಕರಣ, ಕಾರ್ಯಕ್ರಮದ ಹೊರತು ಸುಖಾಸುಮ್ಮನೆ ಎಲ್ಲೂ ಕಾಣಿಸಕೊಳ್ಳುವುದಿಲ್ಲ. ತಮ್ಮದೇ ಶಿಸ್ತಿನ ಜೀವನ ನಡೆಸಿ ಕೊಂಡಿರುವ ಅನಂತ್‌ ನಾಗ್‌ ಈ ಲಾಕ್‌ಡೌನ್‌ ವೇಳೆಯಲ್ಲಿ ಏನು ಮಾಡುತ್ತಿದ್ದಾರೆ ಅವರ ಈಗಿನ ದಿನಚರಿ ಹೇಗಿದೆ ಎಂಬ ಕುತೂಹಲ ಸಹಜವಾಗಿಯೇ ಇದೆ.

Advertisement

ಅನಂತ್‌ ನಾಗ್‌ ಅವರಿಗೆ ಲಾಕ್‌ ಡೌನ್‌ನಿಂದ ಕಷ್ಟವಾಯಿಯೇ ಎಂದರೆ, ನಗುತ್ತಾ ಹೀಗೆ ಉತ್ತರಿಸುತ್ತಾರೆ. ಬಹುಶಃ ನನಗೆ ಈಗ 17 ವರ್ಷವಾಗಿದ್ದರೆ ಮನೆಯಲ್ಲೇ ಕೂರಲು ಕಷ್ಟವಾಗುತ್ತಿತೇನೋ. ಆದರೆ ನನಗೀಗ 71. ಈ ಲಾಕ್‌ ಡೌನ್‌ ನನಗೇನೂ ತೊಂದರೆ ಕೊಟ್ಟಿಲ್ಲ. ಏಕೆಂದರೆ ಇದು ಜನರ ಒಳ್ಳೆಯದಕ್ಕಾಗಿ ಮಾಡಿರೋದು. ಈ ಹಿಂದೆಯೂ ಮಹಾಮಾರಿ ರೋಗಗಳು ಬಂದು ಲಕ್ಷಾಂತರ ಜನ ಸಾವನ್ನಪ್ಪಿದ್ದರು ಎಂಬುದನ್ನು ಓದುತ್ತಿದ್ದೆ. ಈಗ ಮತ್ತೆ ಅಂತಹ ಪರಿಸ್ಥಿತಿ ಬಂದಿದೆ. ಈ ಸಂದರ್ಭದಲ್ಲಿ ನಾವೆಲ್ಲ ಎಚ್ಚರದಿಂದ ಇದ್ದು, ಸರ್ಕಾರದ ಆದೇಶಗಳನ್ನು ಪಾಲಿಸಬೇಕು’ ಎನ್ನುವ ಅನಂತ್‌ ನಾಗ್‌ ಅವರು ತಮ್ಮ ದಿನಚರಿಯ ಬಗ್ಗೆಯೂ ಹೇಳುತ್ತಾರೆ.

ನನ್ನ ದಿನಚರಿಯಲ್ಲಿ ಹೆಚ್ಚೇನು ಬದಲಾವಣೆಯಾಗಿಲ್ಲ. ಸಾಮಾನ್ಯವಾಗಿ ನಾನು ಆರು ತಿಂಗಳು ಚಿತ್ರೀಕರಣ ಮಾಡಿ, ಮಿಕ್ಕ ಆರು ತಿಂಗಳು ಮನೆಯಲ್ಲಿಯೇ ಇರುತ್ತೇನೆ. ಈ ವೇಳೆ ಪ್ರಾರ್ಥನೆ, ಧ್ಯಾನ, ಓದು, ಯೋಗ, ವ್ಯಾಯಾಮ ಮಾಡುತ್ತಿರುತ್ತೇನೆ. ಅದು ಈಗಲೂ ಮುಂದುವರೆದಿದೆ. ಊರು, ಆಶ್ರಮ ಎಂದೆಲ್ಲಾ ಹೋಗುತ್ತಿದ್ದೆ. ಆದರೆ ಸದ್ಯಕ್ಕೆ ಅದು ಸಾಧ್ಯವಾಗುತ್ತಿಲ್ಲ. ಇನ್ನು, ನಾವು ವರ್ಷಕ್ಕೊಂದು ಬಾರಿ ವಿದೇಶ ಟ್ರಿಪ್‌ ಪ್ಲ್ಯಾನ್‌ ಮಾಡುತ್ತಿದ್ದೆವು. ಪ್ರತಿ ಬಾರಿ ಪ್ಲ್ಯಾನ್‌ ಮಾಡುವಾಗಲೂ ಚೈನಾವನ್ನು ಬಿಡುತ್ತಿದ್ದೆವು. ಇನ್ನು ಫಾರಿನ್‌ ಇರಲ್ಲ’ ಎನ್ನುವುದು ಅನಂತ್‌ ನಾಗ್‌ ಅವರ ಮಾತು.

ಕೋವಿಡ್ 19 ದಿಂದ ಎಲ್ಲಾ ಕ್ಷೇತ್ರಗಳು ನೆಲ ಕಚ್ಚಿವೆ. ದೊಡ್ಡ ಮಟ್ಟದಲ್ಲಿ ಆರ್ಥಿಕ ಹೊಡೆತ ಬಿದ್ದಿದೆ. ಈ ಬಗ್ಗೆ ಮಾತನಾಡುವ ಅನಂತ್‌ ನಾಗ್‌ ಅವರು, ಸಿನಿಮಾ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಕೊರೊನಾ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ಆದರೆ ಈಗ ಆ ಬಗ್ಗೆ ಚಿಂತಿಸಿ ಕೂರಲು ಸಮಯವಿಲ್ಲ. ಮೊದಲು ಜೀವ, ಆ ನಂತರ ಜೀವನ. ಕೊರೊನಾ ಎಂಬ ಮಹಾಮಾರಿಯಿಂದ ಎಲ್ಲರೂ ದೂರವಿರಬೇಕು. ಅದ ರಿಂದ ಮುಕ್ತವಾದ ಬಳಿಕ ಮಿಕ್ಕ ಯೋಚನೆಗಳು ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next