ಬಳ್ಳಾರಿ: ದೇಶದ್ರೋಹಿ ಹೇಳಿಕೆ ಕೊಡುವವರನ್ನೆಲ್ಲ ವಿಮಾನದಲ್ಲಿ ಕೂರಿಸಿಕೊಂಡು ಪಾಕಿಸ್ತಾನದ ಕರಾಚಿಯಲ್ಲಿ ಬಿಟ್ಟು ಬರಬೇಕು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹದ ಹೇಳಿಕೆ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಇಂತವರನ್ನೆಲ್ಲ ಕರಾಚಿಗೆ ಬಿಟ್ಟು ಬರಬೇಕು. ಆಗ ಪಾಕಿಸ್ತಾನದ ಮೇಲಿನ ಪ್ರೇಮ ಎಂಥಹುದು ಎಂಬುದು ಗೊತ್ತಾಗಲಿದೆ ಎಂದರು.
ಪಾಕಿಸ್ತಾನ ಪರ ಪ್ರೇಮ ಇರುವವರನ್ನೆಲ್ಲ ಅಲ್ಲಿಗೇ ಕಳುಹಿಸಲು ಕೇಂದ್ರ-ರಾಜ್ಯ ಸರ್ಕಾರಗಳು ಮುಂದಾಗಬೇಕು. ಭಾರತವನ್ನು ಪ್ರೀತಿಸುವ ದೇಶಪ್ರೇಮಿಗಳಿಗೆ ಮಾತ್ರ ಇಲ್ಲಿರಲು ಅವಕಾಶ. ದೇಶದ್ರೋಹಿಗಳಿಗೆ ಅವಕಾಶ ಇಲ್ಲ. ಈ ಬಗ್ಗೆ ಸರ್ಕಾರವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ದೇಶದ್ರೋಹದ ಹೇಳಿಕೆ ಕೇಳಿ ಬಂದಿದ್ದು, ಆ ಕಾರ್ಯಕ್ರಮದಲ್ಲಿ ಓವೈಸಿಯವರೂ ಇದ್ದರು. ಓವೈಸಿ ಏನು ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿದೆ. “15 ನಿಮಿಷ ಸಿಕ್ಕರೆ ಸಾಕು, ಹಿಂದೂಗಳನ್ನು ಮುಗಿಸುತ್ತೇವೆ’ ಎಂದು ಪ್ರಚೋದನಕಾರಿಯಾಗಿ ಮಾತನಾಡಿ ದ್ದರು. ಆದರೆ, ನಮಗೆ ಐದೇ ನಿಮಿಷ ಸಾಕು ಎಂದರು.
ಸಚಿವ ಸಂಪುಟ ವಿಸ್ತರಣೆ ಮುಗಿದ ವಿಷಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕು ಎಂಬುದೇ ನಮ್ಮ ಆಶಯ. ಯಡಿಯೂರಪ್ಪ ನವರು ಒತ್ತಡ ದಲ್ಲಿ ಇದ್ದಾರೆ. ನನಗೆ ಯಾವ ಆಕಾಂಕ್ಷೆ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಈಚೆಗೆ ಕಲ್ಯಾಣ ಕರ್ನಾಟಕದ ಶಾಸಕರು ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ನಾನು ಇರಲಿಲ್ಲ. ಅಂತಹ ಸಭೆಗಳಿಗೆ ನಾನು ಹೋಗಲ್ಲ.
-ಸೋಮಶೇಖರ ರೆಡ್ಡಿ, ಶಾಸಕ