ಮುಂಬಯಿ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದ ಶಿವಸೇನಾ ಶಾಸಕರ ಬಂಡಾಯದಿಂದ ಬಿಕ್ಕಟ್ಟು ಎದುರಿಸುತ್ತಿರುವ ಬೆನ್ನಲ್ಲೇ ತಮಗೆ 46 ಶಾಸಕರ ಬೆಂಬಲ ಇರುವುದಾಗಿ ಶಿವಸೇನಾದ ಬಂಡಾಯ ಮುಖಂಡ ಏಕನಾಥ ಶಿಂಧೆ ತಿಳಿಸಿದ್ದಾರೆ.
ಇದನ್ನೂ ಓದಿ:ಭದ್ರಾವತಿ ವಿಐಎಸ್ಎಲ್ ಕ್ವಾರ್ಟರ್ಸ್ ಬಳಿ ಚಿರತೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
ಬುಧವಾರ (ಜೂನ್ 22) ಬಿಜೆಪಿ ಆಡಳಿತದ ಅಸ್ಸಾಂಗೆ ಆಗಮಿಸಿರುವ ಶಿಂಧೆ, ಶಿವಸೇನಾದ 40 ಹಾಗೂ ಪಕ್ಷೇತರ 6 ಮಂದಿ ಶಾಸಕರ ಬೆಂಬಲ ತನಗೆ ಇರುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿಕೂಟದ ಸರ್ಕಾರ ಪತನದ ಅಂಚಿನಲ್ಲಿದೆ ಎಂದು ವರದಿ ಹೇಳಿದೆ.
ಪಕ್ಷವನ್ನು ಬದಲಾಯಿಸುವ ಯಾವುದೇ ಯೋಚನೆ ಇಲ್ಲ ಎಂದಿರುವ ಏಕನಾಥ ಶಿಂಧೆ, ನಾನು ಶಿವಸೇನೆಯಿಂದ ಪ್ರತ್ಯೇಕಗೊಳ್ಳಲು ಬಯಸುತ್ತಿಲ್ಲ. ಬಾಳಾ ಸಾಹೇಬ್ ಠಾಕ್ರೆ ಅವರ ಸಿದ್ಧಾಂತದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.
ನಾವು ಬಾಳಾಸಾಹೇಬ್ ಠಾಕ್ರೆಯವರ ಶಿವಸೇನಾದಿಂದ ಬೇರ್ಪಟ್ಟಿಲ್ಲ, ನಮಗೆ ಹಿಂದುತ್ವದಲ್ಲಿ ನಂಬಿಕೆ ಇದೆ ಎಂದು ಶಿಂಧೆ ತಿಳಿಸಿದ್ದಾರೆ. ಗುಹಾಹಟಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಮುಖಂಡರಾದ ಪಲ್ಲಬ್ ಲೋಚನ್ ದಾಸ್ ಮತ್ತು ಸುಶಾಂತ್ ಬೋರ್ಗಾಹೈನ್ ಶಿಂಧೆ ಬಂಡಾಯ ಶಾಸಕರನ್ನು ಬರಮಾಡಿಕೊಂಡಿದ್ದಾರೆ. ಶಾಸಕರು ವಾಸ್ತವ್ಯ ಹೂಡಲು ನಿಗದಿಪಡಿಸಿದ ಪಂಚತಾರಾ ಹೋಟೆಲ್ ನಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಕಾಣಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಶಿವಸೇನಾದ 22 ಶಾಸಕರು ಇದಕ್ಕೂ ಮೊದಲು ಗುಜರಾತ್ ನ ಸೂರತ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ದೂರವಾಣಿ ಸಂಭಾಷಣೆ ನಡೆದ ನಂತರ ಶಿಂಧೆ ಮತ್ತು ಉಳಿದ ಶಾಸಕರು ಗುಹಾಹಟಿಗೆ ತೆರಳಿರುವುದಾಗಿ ವರದಿ ತಿಳಿಸಿದೆ.