ಧಾರವಾಡ: ಇಂದು ಜಾನಪದವನ್ನೂ ಆಧುನಿಕತೆಗೆ ಒಳಗೂಂಡು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ| ಡಿ.ಬಿ. ನಾಯಕ ಹೇಳಿದರು.
ನಗರದ ಕರ್ನಾಟಕ ಬಿಬಿಎ ಅಡಿಟೋರಿಯಂನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕನ್ನಡ ಅಧ್ಯಾಪಕರ ಪರಿಷತ್ ಮತ್ತು ಕರ್ನಾಟಕ ಕಲಾ ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಮತ್ತು ಆಧುನಿಕತೆ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಅಂದಿನ ಜನಪದದಲ್ಲಿ ಕುಟುಂಬ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಶಿಸ್ತುಬದ್ಧ ರೀತಿಯಲ್ಲಿ ನೋಡಬಹುದಾಗಿದೆ. ಅದರಲ್ಲೂ ಪ್ರದೇಶದಿಂದ ಪ್ರದೇಶಕ್ಕೆ ನಮ್ಮ ಸಂಪ್ರದಾಯ ಪದ್ಧತಿಗಳು ಮತ್ತು ಮೌಲ್ಯಗಳಲ್ಲಿ ವಿವಿಧತೆಯನ್ನು ಕಾಣುತ್ತಿದ್ದೇವೆ. ಆದರೆ ಇಂದು ಆಧುನಿಕತೆಯ ಪ್ರಭಾವದಿಂದ ಮನುಷ್ಯನು ಎಲ್ಲವನ್ನು ವ್ಯವಹಾರಿಕ ದೃಷ್ಟಿಕೋನದಿಂದ ನೋಡುತ್ತಿದ್ದಾನೆ. ಇದು ಮುಂದೆ ಸಾಮಾಜಿಕವಾಗಿ ಪರಿಣಾಮ ಬೀರಬಹುದು ಎಂದರು.
ವಿಚಾರ ಸಂಕಿರಣ ಉದ್ಘಾಟಿಸಿದ ಕವಿವಿ ಕುಲಪತಿ ಪ್ರೊ | ಪ್ರಮೋದ ಗಾಯಿ ಮಾತನಾಡಿ, ಸಂಸ್ಕೃತಿ, ಸಂಪ್ರದಾಯಗಳು ಆಧುನಿಕತೆಯ ಮೂಲವಾಗಿವೆ. ಆಧುನಿಕತೆಯ ಹುಟ್ಟು ಜಾನಪದದಲ್ಲಿ ಇದೆ. ಜಾನಪದ ಮತ್ತು ಆಧುನಿಕತೆ ಒಂದಕ್ಕೊಂದು ತದ್ವಿರುದ್ಧವಾದರೂ ಆಧುನಿಕತೆಯು ಜನಪದದ ಹುಟ್ಟಿನಿಂದ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ವಿವಿಧ ರೀತಿಯಲ್ಲಿ ಭಿನ್ನ ರೂಪಗಳನ್ನು ಪಡೆದುಕೊಂಡಿವೆ. ಇದನ್ನು ನಾವು ಆಧುನಿಕತೆ ಎಂದು ಕರೆಯುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿ, ಇಂದಿನ ಶಿಕ್ಷಕರು ಜನಪದದ ಕುರಿತು ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಕನ್ನಡ ಅಧ್ಯಾಪಕರ ಪರಿಷತ್ತಿನಿಂದ ವಿಶೇಷ ವಲಯದಲ್ಲಿ ಸಾಧನೆ ಮಾಡಿದ ಕನ್ನಡ ಭಾಷಾ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು.
ಗೊಟಗೋಡಿಯ ಜಾನಪದ ಕಲಾವಿದರು ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಡಾ| ಜೀನದತ್ತ ಹಡಗಲಿ ಮಾತನಾಡಿದರು. ಡಾ| ಬಿ.ಪಿ. ಮಠದ, ಪ್ರೊ | ಎಸ್.ಎಸ್. ಕಾಡಮ್ಮನವರ್, ಡಾ| ಬಿ.ಎಸ್.ಭಜಂತ್ರಿ, ಡಾ| ಶ್ರೀಶೈಲ್ ಹುದ್ದಾರ, ಕೋರಿಶೇಟ್ಟರ್ ಸೇರಿದಂತೆ ಹಲವರು ಇದ್ದರು. ಡಾ| ಆರ್.ಎಸ್. ದಾನರೆಡ್ಡಿ ನಿರೂಪಿಸಿದರು. ಡಾ| ವೈ.ಎಂ. ಭಜಂತ್ರಿ ವಂದಿಸಿದರು.
ಜಾನಪದದಂತಹ ವಿಷಯಗಳು ನಮ್ಮಿಂದ ದೂರವಾಗುತ್ತಿವೆ. ಜಾನಪದ ಶೈಲಿಯಲ್ಲಿ ತಲೆಗೆ ರುಮಾಲು ಕಟ್ಟಲು ಇಂದು ಯಾರಿಗೂ ಬರುತ್ತಿಲ್ಲ. ಇಂದು ರುಮಾಲು ಕಟ್ಟಲು ತರಬೇತಿ ಕೊಡುವ ಪರಿಸ್ಥಿತಿ ಬಂದಿದೆ. ಇದು ಜಾನಪದದ ಶಿಥಿಲತೆಗೆ ಹಿಡಿದ ಕನ್ನಡಿ.
ಡಾ| ಡಿ.ಬಿ. ನಾಯಕ,
ಕುಲಪತಿ, ಕಜಾವಿವಿ, ಹಾವೇರಿ