Advertisement

ಸೆಮಿಕಂಡಕ್ಟರ್‌ ಕ್ಷೇತ್ರಕ್ಕೆ ನೆರವು; ಕೇಂದ್ರ ಸರ್ಕಾರದಿಂದ 76 ಸಾವಿರ ಕೋಟಿ ರೂ. ಸಹಾಯ

09:15 PM Dec 15, 2021 | Team Udayavani |

ನವದೆಹಲಿ: ದೇಶದಲ್ಲಿ ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೇ ಉದ್ದಿಮೆ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 76 ಸಾವಿರ ಕೋಟಿ ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ.

Advertisement

ನವದೆಹಲಿಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ರೈಲ್ವೆ ಖಾತೆ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದ್ದಾರೆ.

ಆಧುನಿಕ ಯುಗದಲ್ಲಿ ಎಲೆಕ್ಟ್ರಾನಿಕ್ಸ್‌ ವಸ್ತುಗಳು ಜನರ ಬದುಕಿನ ಮೇಲೆ ಹೆಚ್ಚಿನ ಪ್ರಭಾವ ಬೀಳುತ್ತಿವೆ ಮತ್ತು ಅವುಗಳ ಅಗತ್ಯತೆಯೂ ಹೆಚ್ಚಾಗಿದೆ. ಹೀಗಾಗಿ ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದ ಪರಿಕಲ್ಪನೆಯ ಆಧಾರದಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತದೆ. ಇದರಿಂದಾಗಿ ದೇಶದ ಎಲೆಕ್ಟ್ರಾನಿಕ್‌ ಉತ್ಪಾದನಾ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳು ಆಗಲಿವೆ. ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಅಗತ್ಯವಾಗಿ ಬೇಕಾಗಿರುವ ಸೆಮಿಕಂಡಕ್ಟರ್‌ ಚಿಪ್‌ಗ್ಳನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲೂ ನೆರವಾಗಲಿದೆ ಎಂದು ಸಚಿವ ವೈಷ್ಣವ್‌ ಹೇಳಿದ್ದಾರೆ.

ಜಾರಿ ಹೇಗೆ?:
ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೇ ಫ್ಯಾಬ್‌ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆಯ ಒಟ್ಟು ಮೊತ್ತದ ಶೇ.50ರ ವಿತ್ತೀಯ ನೆರವು ನೀಡಲಿದೆ. ರಾಜ್ಯ ಸರ್ಕಾರಗಳ ಜತೆಗೂಡಿ ಕೇಂದ್ರ ಇದನ್ನು ಜಾರಿಗೊಳಿಸಲು ಶ್ರಮಿಸಲಿದೆ. ಭೂಮಿ, ವಿದ್ಯುತ್‌, ಸಂಶೋಧನೆಗಾಗಿ ಬೇಕಾಗಿರುವ ಅಗತ್ಯ ನೆರವುಗಳ ಬಗ್ಗೆ ಜತೆಗೂಡಿ ಕೆಲಸ ಮಾಡಲಿದೆ. ಎರಡು ಹಸಿರು ವಲಯದ ಸೆಮಿಕಂಡಕ್ಟರ್‌ ಫ್ಯಾಬ್‌ ಮತ್ತು ಎರಡು ಡಿಸ್‌ಪ್ಲೇ ಫ್ಯಾಬ್‌ಗಳ ಸ್ಥಾಪನೆಗೂ ಇದರಿಂದ ನೆರವಾಗಲಿದೆ.

ಸೆಮಿ ಕಂಡಕ್ಟರ್‌ ಲ್ಯಾಬೊರೇಟರಿ (ಎಸ್‌ಸಿಎಲ್‌) ಕ್ಷೇತ್ರವನ್ನು ಆಧುನೀಕರಣಗೊಳಿಸಿ, ವಾಣಿಜ್ಯೀಕರಣಗೊಳಿಸುವ ನಿಟ್ಟಿನಲ್ಲಿ ಇಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೆಜ್ಜೆಯಿಡಲಿದೆ. ಇದಕ್ಕಾಗಿ 2,30,000 ಕೋಟಿ ರೂ. ವಿತ್ತೀಯ ನೆರವು ನೀಡಲೂ ಮುಂದಾಗಿದೆ.

Advertisement

ಇದನ್ನೂ ಓದಿ:ನಿಮ್ಮಲ್ಲಿ ಐಫೋನ್‌,ಮ್ಯಾಕ್‌ಬುಕ್‌,ಆ್ಯಪಲ್‌ ವಾಚ್‌ಗಳಿದ್ದರೆ ಬೇಗನೆ ಅಪ್‌ಡೇಟ್‌ ಮಾಡಿಕೊಳ್ಳಿ

ಪ್ರೋತ್ಸಾಹಕ ನಿಧಿಗೆ ಒಪ್ಪಿಗೆ:
ರುಪೇ ಡೆಬಿಟ್‌ ಕಾರ್ಡ್‌, ಯುಪಿಐ ಮೂಲಕ ನಡೆಸಲಾದ ಡಿಜಿಟಲ್‌ ವಹಿವಾಟಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 1,300 ಕೋಟಿ ರೂ. ಮೌಲ್ಯದ ಉತ್ತೇಜನ ಪ್ಯಾಕೇಜ್‌ ನೀಡಲು ಕೇಂದ್ರ ಸಂಪುಟ ನಿರ್ಧರಿಸಿದೆ. ಸಭೆ ಬಳಿಕ ಮಾತನಾಡಿದ ಸಚಿವ ಅಶ್ವಿ‌ನಿ ವೈಷ್ಣವ್‌, ವಿಶೇಷವಾಗಿ ವ್ಯಾಪಾರಿಗಳಿಗೆ ಡಿಜಿಟಲ್‌ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಪಾವತಿ ಸ್ವೀಕರಿಸಲು ಉತ್ತೇಜನ ನೀಡಲಾಗುತ್ತದೆ. ಅದಕ್ಕಾಗಿ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (ಎಂಡಿಆರ್‌) ಮೂಲಕ ವ್ಯಾಪಾರಿಗಳಿಗೆ ಮತ್ತು ಡಿಜಿಟಲ್‌ ಮಾಧ್ಯಮದ ಮೂಲಕ ಪಾವತಿ ಸ್ವೀಕರಿಸುವವರಿಗಾಗಿ ಮುಂದಿನ ಒಂದು ವರ್ಷದ ಅವಧಿಯಲ್ಲಿ 1,300 ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಸಚಿವ ವೈಷ್ಣವ್‌ ಹೇಳಿದ್ದಾರೆ. 2 ಸಾವಿರ ರೂ.ಗಳಿಗಿಂತ ಹೆಚ್ಚಿನ ವಹಿವಾಟು ನಡೆಸಿದ್ದಕ್ಕೆ ಈ ಮರು ಪಾವತಿ ಲಭ್ಯವಾಗಲಿದೆ. ಕಳೆದ ತಿಂಗಳೊಂದರಲ್ಲಿಯೇ 7.56 ಲಕ್ಷ ಕೋಟಿ ರೂ. ಮೌಲ್ಯದ 423 ಕೋಟಿ ಡಿಜಿಟಲ್‌ ವಹಿವಾಟುಗಳು ನಡೆದಿವೆ ಎಂದೂ ಅವರು ತಿಳಿಸಿದ್ದಾರೆ.

22 ಲಕ್ಷ ರೈತರಿಗೆ ಅನುಕೂಲ
ಪ್ರಧಾನಮಂತ್ರಿ ಕೃಷಿ ಸಿಂಚಾಯೀ ಯೋಜನೆಯನ್ನು ಪ್ರಸಕ್ತ ವರ್ಷದಿಂದ 2026ರ ವರೆಗೆ ಜಾರಿಗೊಳಿಸಲು ಆರ್ಥಿಕ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ. ಇದರಿಂದ 2.5 ಲಕ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದ ರೈತರು ಸೇರಿದಂತೆ ಒಟ್ಟು 22 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಹಿಮಾಚಲ ಪ್ರದೇಶದ ರೇಣುಕಾಜಿ ಅಣೆಕಟ್ಟು ಯೋಜನೆ, ಉತ್ತರಾಖಂಡದ ಲಖ್ವಾರ್‌ ವಿವಿಧೋದ್ದೇಶ ಯೋಜನೆಗೆ ಕೇಂದ್ರ ಸರ್ಕಾರದ ವತಿಯಿಂದ ಶೇ.90ರಷ್ಟು ಮೊತ್ತದ ವಿತ್ತೀಯ ನೆರವು ನೀಡಲಾಗುತ್ತದೆ. ಈ ಎರಡೂ ಯೋಜನೆಗಳಿಂದಾಗಿ ಯಮುನಾ ನದಿಯ ಮೇಲ್ಭಾಗದ ರಾಜ್ಯಗಳಾಗಿರುವ ದೆಹಲಿ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನಗಳಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 93,068 ಕೋಟಿ ರೂ. ವೆಚ್ಚ ಮಾಡಲಿದೆ. ಎಲ್ಲಾ ಕೃಷಿ ಜಮೀನುಗಳಿಗೆ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ 4.5 ಲಕ್ಷ ಹೆಕ್ಟೇರ್‌ಗಳಿಗೆ ಸಣ್ಣ ಪ್ರಮಾಣ ನೀರಾವರಿ ಒದಗಿಸಲೂ ಇದರಿಂದ ನೆರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next