Advertisement

ಸೆಲ್ವ ಕುಮಾರನ ಸಂಸಾರ ಸೂತ್ರ

06:00 AM Jul 01, 2018 | Team Udayavani |

ಮುಂಬೈಗೆ ಹೊರಡೋ ಫ್ಲೈಟ್‌ ಒಂದು ಗಂಟೆ ಡಿಲೇ ಎಂದು ಅದಾಗಲೇ ಮೂವರ ಮೊಬೈಲ್‌ಗ‌ೂ ಮೆಸೇಜ್‌ ಬಂದಿತ್ತು. ಜೊತೆಗೆ ಬಂದಿದ್ದ  ಸುದೇಶ್‌, ಮಧ್ಯಾಹ್ನದ ಸೆಮಿನಾರ್‌ ಕಾರ್ಯಕ್ರಮ ಮುಗಿಸಿ ಕೆಲಸದ ನಿಮಿತ್ತ ಹೊರಗಡೆ ಹೋದವನು, ಸೀದಾ ಏರ್‌ಪೋರ್ಟ್‌ಗೆ ಬರುವೆನೆಂದು ತಿಳಿಸಿದ್ದ. ಶಮಾ ಮತ್ತು ವಿದ್ಯಾ ರಿಕ್ಷಾ ಹುಡುಕಿಕೊಂಡು ಚೆನ್ನೈಯ ಅಪರಿಚಿತ ಬೀದಿಗಿಳಿದಿದ್ದರು.

Advertisement

ಆ  ಎರಡು ದಿನಗಳ ಓಡಾಟದಲ್ಲಿ  ಅವರಿಗೆ ತಮಿಳರು ಬಿಟ್ಟು, ಬೇರೆ ಯಾವ ಭಾಷೆಯನ್ನಾಡುವ ರಿಕ್ಷಾ ಚಾಲಕ ಸಿಕ್ಕಿರಲಿಲ್ಲ. ಒಬ್ಬ ತನ್ನ ರಿಕ್ಷಾದ ಹಿಂದುಗಡೆ “ಮನಿ ಈಸ್‌ ಎವ್ರಿಥಿಂಗ್‌ ಅವರ್‌ ಲೈಫ್’ ಅಂತ ಬರೆದಿದ್ದ. ಮನಸ್ಸಿಗೆ ಬಂದಂತೆ ಬಾಡಿಗೆ ಹೇಳಿಬಿಡುತ್ತಿದ್ದ ರಿಕ್ಷಾದವರ‌ ನಯವಿನಯವಿಲ್ಲದ ಒರಟು ಮಾತುಗಳು, “ಇಲ್ಲಿನವರೆಲ್ಲಾ ಹೀಗೇನಾ’ ಎನ್ನುವಷ್ಟರಮಟ್ಟಿಗೆ ಮನಸ್ಸನ್ನು ರೋಸಿ ಗೊಳಿಸಿತ್ತು.  ಮುಂಬೈಯಿಂದ ಚೆನ್ನೈ ಏರ್‌ಪೋರ್ಟ್‌ಗೆ ಬಂದು, ರಾಜ್‌ಸುಂದರ್‌ ಹೊಟೇಲ್‌ವರೆಗೆ ತಲುಪಿಸಲು ನೆರವಾದ ಓಲಾ ಗಾಡಿಯವನ  ಉದ್ಧಟತನದ ಮಾತು ಇನ್ನೂ ಹಸಿಯಾಗಿತ್ತು.

ರಿಕ್ಷಾದವರು ಹೆಚ್ಚು ದುಡ್ಡು ವಸೂಲಿ ಮಾಡುವರೆಂದು ಗೊತ್ತಾಗಿ, ಶಮಾ ಮೊದಲೇ ಕೆಲವರಲ್ಲಿ ವಿಚಾರಿಸಿಕೊಂಡಿದ್ದಳು. ಅಲ್ಲೇ ಹಾದು ಹೋಗುತ್ತಿದ್ದ ರಿಕ್ಷಾವನ್ನು ನಿಲ್ಲಿಸಿ ಕೇಳಿದಾಗ ಚಾಲಕ, ಮುನ್ನೂರೈವತ್ತು ರೂಪಾಯಿ ಆಗುತ್ತೆ ಅಂದವನು, ಇವರು ಬೇರೆ ರಿಕ್ಷಾದ ಕಡೆ ತಿರುಗಿದಾಗ, ಇನ್ನೂರೈವತ್ತು ಲಾಸ್ಟ್‌ ಅಂದಿºಟ್ಟ. ಇವರು ನೂರೈವತ್ತರ ರೇಂಜಿನ ನಿರೀಕ್ಷೆಯಿಟ್ಟುಕೊಂಡು ಮುಂದಿನವನನ್ನು ಕೇಳಿದಾಗ, ಅವನ ಬಾಡಿಗೆ ನಾಲ್ಕನೂರಕ್ಕೇರಿತ್ತು. ಮತ್ತೂಬ್ಬ ಐನೂರು ಅಂದಾಗ, ಮೊದಲಿನವನೇ ವಾಸಿಯೆನಿಸಿ, ಮರುಮಾತಾಡದೆ ಹಿಂದೆ ಬಂದು, ಇಬ್ಬರೂ ಆ ರಿಕ್ಷಾದಲ್ಲಿಯೇ ಕುಳಿತರು. ಅದಾಗಲೇ ರಾತ್ರಿ 8.30 ದಾಟಿತ್ತು. ಸುದೇಶ್‌ ಏರ್‌ಪೋರ್ಟ್‌ ತಲುಪಿ, “ಎಲ್ಲಿದ್ದೀರಾ?’ ಎಂದು ಎರಡು ಬಾರಿ ಫೋನಾಯಿಸಿದ್ದ.

“ಏರ್‌ಪೋರ್ಟ್‌ಗೆ ಇಲ್ಲಿಂದ ಎಷ್ಟು ಹೊತ್ತು ಬೇಕು?’ ಎಂದು ವಿದ್ಯಾ ಆಟೋಚಾಲಕನಲ್ಲಿ ವಿಚಾರಿಸಿದಾಗ, “ಸುಮಾರು ಒಂದೂವರೆ ಗಂಟೆಯಾದರೂ ಬೇಕು, ತುಂಬಾನೇ ಟ್ರಾಫಿಕ್‌ ಇದೆ; ಲೇಟಾಗುತ್ತೆ’ ಎಂದು ಹಿಂದಿ ಭಾಷೆಯಲ್ಲಿಯೇ ಉತ್ತರಿಸಿದ.

“ಹಾಗಾದರೆ ನಮ್ಗೆ ಫ್ಲೈಟ್‌ ಮಿಸ್ಸ್ ಆದ್ರೆ ಏನ್ಮಾಡೋದು’ ಶಮಾ ಆತಂಕ ವ್ಯಕ್ತಪಡಿಸಿದಾಗ, ವಿದ್ಯಾ, “ಸುದೇಶ್‌ ಹೇಗೂ ಏರ್‌ಪೋರ್ಟ್‌ನಲ್ಲಿ ಇದ್ದಾನಲ್ಲ ಹಾಗೇನಾದರೂ ಆದ್ರೆ ಬೋರ್ಡಿಂಗ್‌ ಪಾಸ್‌ ತೆಗೆದಿಡೋಕೆ ಹೇಳಿದ್ರಾಯ್ತು’ ಅಂದಾಗ, ಶಮಾಳಿಗೆ ತುಸು ಸಮಾಧಾನವೆನಿಸಿತು. “ನೀವೇನೂ ವರಿ ಮಾಡ್ಕೊಬೇಡಿ ಸಮಯಕ್ಕೆ ಸರಿಯಾಗಿ ನಿಮ್ಮನ್ನು ತಲುಪಿಸ್ತೀನಿ. ನನ್ನ 35 ವರ್ಷದ ಸರ್ವಿಸ್‌ನಲ್ಲಿ  ಯಾರಿಗೂ ನನ್ನ ಕಡೆಯಿಂದ ಲೇಟ್‌ ಆಗಿಲ್ಲಮ್ಮಾ’ ಎಂದು ಚಾಲಕ ಇವರಲ್ಲಿ ಭರವಸೆ ಹುಟ್ಟಿಸುವ ಮಾತುಗಳನ್ನಾಡುತ್ತಿದ್ದ. ಇವರಾಡುವ ಭಾಷೆಯನ್ನು ಗಮನಿಸಿ, “ನೀವು ಕರ್ನಾಟಕದವರಾ?’ ಎಂದು ಕನ್ನಡದಲ್ಲಿ ಮಾತಾಡಿದಾಗ, ಇಬ್ಬರ ಗಮನವೂ ಚಾಲಕನತ್ತ ಹರಿಯಿತು. “ಹೌದು, ನಿಮಗೆ ಕನ್ನಡ ಭಾಷೆ ಬರುತ್ತಾ?’ ಶಮಾ ಉದ್ಗರಿಸಿದಳು.    

Advertisement

“ಹೌದಮ್ಮ, ನನಗೆ ಒಟ್ಟು ಐದು ಭಾಷೆ ಬರುತ್ತೆ. ಹೇಗಿದೆಯಮ್ಮಾ ನನ್ನ ಕನ್ನಡ? ಚೆನ್ನಾಗಿ ಮಾತಾಡ್ತೀನಾ?’
“ಎಸ್‌. ಅಂಕಲ್‌  ಮುಂಬೈಯವರಿಗಿಂತ ಚೆನ್ನಾಗಿ ಕನ್ನಡ ಮಾತಾಡ್ತೀರಿ. ನೀವೂ ನಮ್ಮೂರಿನವರಾ?’ ಶಮಾ ಉತ್ಸುಕಳಾಗಿ ಕೇಳಿದಳು.

“ಇಲ್ಲಮ್ಮ, ನಾನು ಇಲ್ಲಿಯವನೇ, ಆದರೆ, ಬೆಂಗಳೂರಿನಲ್ಲಿ ಐದು ವರ್ಷ ರಿಕ್ಷಾ ಓಡಿಸ್ತಾ ಇದ್ದೆ. ಹಾಗಾಗಿ ಕನ್ನಡ ಓದುವುದು, ಬರೆಯುವುದು ನನಗೆ ತಿಳಿದಿದೆ’ ಅಂದವನೇ ತನ್ನ ಕತೆಯನ್ನು ಹೇಳಲಾರಂಭಿಸಿದ. 

ಅವನ ಹೆಸರು ಸೆಲ್ವ ಕುಮಾರನ್‌. ಕೋಲಾರದಲ್ಲಿ  ಹುಟ್ಟಿದ್ದು, ತಮಿಳುನಾಡಿನಲ್ಲಿ ತನ್ನ ವಿದ್ಯಾಭ್ಯಾಸ ನಡೆದಿದ್ದು, ಕಾಸರಗೋಡಿನಲ್ಲಿ ಡ್ರೈವಿಂಗ್‌ ಕಲಿತಿದ್ದು, ನಂತರ ಬೆಂಗಳೂರು ಹಾದಿ ಹಿಡಿದು, ಅಲ್ಲಿ ರಿಕ್ಷಾ ಓಡಿಸಿದ್ದು, ನಂತರ ಮತ್ತೆ ತಮಿಳುನಾಡಿಗೆ ಬಂದು ಖಾಯಂ ಆಗಿ ನೆಲೆಸಿದ್ದು… ಹೀಗೆ ಒಂದೊಂದಾಗಿ ಹೇಳತೊಡಗಿದ. ತನ್ನ ಮೊಬೈಲ್‌ನ ವಾಲ್‌ಪೇಪರನ್ನು ತೋರಿಸಿ, “ಇವ ನೋಡಿ ನನ್ಮಗ. ಬಿ.ಎ. ಮಾಡ್ತಿ¨ªಾನೆ. ಒಳ್ಳೆ ಕ್ರಿಕೆಟ್‌ ಪ್ಲೇಯರ್‌. ನನಗೆ ಇಬ್ರು ಮಕ್ಳು. ಮಗ್ಳು ಮಾರ್ಕೆಟಿಂಗ್‌ ಕಂಪೆನಿಯಲ್ಲಿ ಕೆಲಸದಲ್ಲಿ¨ªಾಳೆ. ತಮ್ಮ ಕಲಿತು ಕೆಲಸಕ್ಕೆ ಸೇರುವವರೆಗೆ ಅವಳು ಮದುವೆಯಾಗುವುದಿಲ್ಲವಂತೆ. ನಾನು ತುಂಬಾ  ಅದೃಷ್ಟ ಮಾಡಿದ್ದೀನಿ ಕಣಮ್ಮಾ’ ಅಂದಾಗ ಶಮಾಳಿಗೂ ಆ ಹುಡುಗಿಯ ಬಗ್ಗೆ ಹೆಮ್ಮೆಯೆನಿಸಿತು. ಕುಮಾರನ್‌ ಮಗಳ ಫೋಟೋವನ್ನೂ ತೋರಿಸಿದ.

“ಮಗಳೂ ದುಡೀತಾಳೆ ಅಂದ್ಮೇಲೆ ಸಂಸಾರ ಅಷ್ಟೊಂದು ಕಷ್ಟವಾಗಿರಲಿಕ್ಕಿಲ್ಲ ಅನ್ನಿ’ ಶಮಾ ಅಂದಾಗ, “ಇಲ್ಲಮ್ಮ ಅವಳ ಸಂಬಳ ಒಂದು ಪೈಸೆನೂ ಮುಟ್ಟೋದಿಲ್ಲ. ಅವಳೂ ಖರ್ಚು ಮಾಡದೆ ಎಲ್ಲವನ್ನೂ ಅಮ್ಮನ ಕೈಗೆ ತಂದುಕೊಡ್ತಾಳೆ. ಮನೆ ಖರ್ಚು ಎಲ್ಲಾ ನಾನೇ ನೋಡ್ಕೊತೀನಿ. ಆದ್ರೆ ನನ್ನ ಇಬ್ರೂ ಮಕ್ಳು ಮನೇಲಿ ಒಂದೂ ಕೆಲ್ಸ ಮಾಡಲ್ಲ. ಉಟ್ಟ ಬಟ್ಟೆನೂ ಒಗೆಯೋಲ್ಲ. ಉಂಡ ಪಾತ್ರೆನೂ ತೊಳೆಯೋದಿಲ್ಲ. ಅವರಮ್ಮ ತುಂಬಾನೆ ಮುದ್ದು ಮಾಡಿºಟ್ಟಿದ್ದಾಳೆ’ “ಈಗಿನ ಜನರೇಷನೇ ಹಾಗೆ ಅಂಕಲ್‌, ನೀವು ಬುದ್ಧಿ ಹೇಳೊºàದಲ್ವೆ?’ “ಅಯ್ಯೋ ಇಲ್ಲಮ್ಮ, ನಾನೇನಾದ್ರೂ ಹೇಳಿದ್ರೆ ನನಗೇ ಹೊಡೆಯೋಕೆ ಬರ್ತಾಳೆ. ಯಾರಲ್ಲೂ ಮಾತಾಡೋ ಹಾಗಿಲ್ಲ. ಎಲ್ಲಾ ಸೇರಿ ಎಗರಾಡ್ತಾರಮ್ಮ’ ಸ್ವಲ್ಪ ಹೊತ್ತಿನ ಮುಂಚೆ ಅಂತಹ ಮಕ್ಳನ್ನು ಪಡೆಯೋಕೆ ಪುಣ್ಯ ಮಾಡಿರಬೇಕು ಅಂದ ಮನುಷ್ಯ, ಈಗ ಈ ಥರ ಆಡ್ತಾನಲ್ಲಾ… ಶಮಾ ತನ್ನೊಳಗಿನ ಗೊಂದಲವನ್ನು ಪರಿಹರಿಸಲು, “ಅಂಕಲ್‌, ಮಕ್ಕಳು ತುಂಬಾ ಒಳ್ಳೆಯವರು ಅಂತೀರಾ, ಆದ್ರೆ ಒಳ್ಳೆತನ ಮನೆಯಿಂದಲೇ ಆರಂಭವಾಗೋದಲ್ವಾ? ಮನೇಲೇ ಈ ಥರ ಇದ್ರೆ ಇನ್ನು ಈ ಸಮಾಜದಲ್ಲಿ, ಮುಂದೆ ಭವಿಷ್ಯದಲ್ಲಿ ಹೇಗೆ?’ ಎಂದು ಶಮಾ ಕೇಳಿದಾಗ, ಕುಮಾರನ್‌ ತನ್ನ ಕತೆಯನ್ನು ಮತ್ತೆ ಮುಂದುವರಿಸಿದ.

“ಎಳವೆಯಲ್ಲಿ ಬುದ್ಧಿ ತಿಳಿಯುವ ಮೊದಲೇ ತಾಯಿಯನ್ನು ಕಳ್ಕೊಂಡಿದ್ದೆ. ತಾಯಿಯ ಪ್ರೀತಿ ಏನೆಂದು ನನಗೆ ತಿಳಿದಿರಲಿಲ್ಲ. ನ‌ನ್ನ ಹೆಂಡತಿ ಗರ್ಭಿಣಿಯಾದಾಗ, ನನಗೆ ತಾಯಿಯಂಥ ಮಗಳನ್ನು ಕರುಣಿಸಪ್ಪಾ ಅಂತ ದೇವರಲ್ಲಿ ಬೇಡ್ಕೊಂಡಿದ್ದೆ. ಆ ಭಗವಂತ ತಥಾಸ್ತು ಅಂದಿºಟ್ಟ. ಈಗ ಮಗಳು ಪ್ರತಿ ಬಾರಿ ಕೆನ್ನೆಗೆ ಹೊಡೆಯುವಾಗಲೂ ನನಗೆ ಅಮ್ಮ ನೆನಪಾಗ್ತಾಳೆ. ನನಗವಳು ಅಮ್ಮನೇ ಆಗಿದ್ದಾಳೆ’ ಅಂದಾಗ ಅವನ ಕಂಠ ಗದ್ಗದಿತವಾಗಿತ್ತು. 

ಆ ಕ್ಷಣ ಚೆನ್ನೈ ಸಿಟಿಯ ವಾಹನಗಳ ಕರ್ಕಶ ಶಬ್ದಗಳ ನಡುವೆಯೂ ಒಂದು ತೆರನಾದ ಮೌನ ಇವರೊಳಗೆ ಆವರಿಸಿತ್ತು. ಶಮಾಳ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಸ್ಪಷ್ಟೀಕರಣಕ್ಕೆ ಒಂದರಮೇಲೊಂದರಂತೆ ಹೊರಳಾಡುತ್ತಿದ್ದವು. ಈಗಷ್ಟೇ ಪರಿಚಯವಾದವರ ವೈಯಕ್ತಿಕ ವಿಚಾರದ ಬಗ್ಗೆ  ನಾನಾಗಿ ಕೇಳ್ಳೋದು ಸರಿಯೆ? ಕುಮಾರನ್‌ ಹೇಳಿದಷ್ಟು ಕೇಳಿ ಸುಮ್ನಿರೋದು. ಹೇಗೂ ಒಂದಷ್ಟು ಹೊತ್ತಲ್ಲಿ ನಾವ್ಯಾರೋ, ಅವನ್ಯಾರೋ ಅಂದುಕೊಂಡರೂ, ಶಮಾಳಿಗೆ ಮನಸ್ಸಿನ ತುಮುಲಗಳನ್ನು ಅಲ್ಲಗಳೆಯಲಾಗಲಿಲ್ಲ. ಮಗಳಿಂದ ಹೊಡೆಸ್ಕೊಳ್ಬೇಕಾದ್ರೆ ಏನಾದ್ರೂ ಕಾರಣವಿರಬೇಕೆಂದುಕೊಂಡವಳೇ, “ಅಂಕಲ್‌ ನಿಮಗೆ ಡ್ರಿಂಕ್ಸ್‌ ಮಾಡೋ ಅಭ್ಯಾಸ ಇದೆಯಾ?’ ಎಂದು ಕೇಳಿದಳು.

ಕುಮಾರನ್‌ ಬಾಯೊಳಗಿದ್ದ ಪಾನ್‌ಬೀಡಾವನ್ನು ಜಗಿಯುತ್ತ¤ ಗುಳು ಗುಳು ಸ್ವರದಲ್ಲಿಯೇ, “ಇಲ್ಲಮ್ಮಾ, ನಾನು ಕುಡಿಯೋದು ಬಿಟ್ಟು 15 ವರ್ಷ ಆಯ್ತು. ಕುಡಿಯುತ್ತಿ¨ªಾಗಲೂ ನಾನು ಸಂಸಾರವನ್ನು ಚೆನ್ನಾಗಿ ನೋಡ್ಕೊಂಡಿದ್ದೀನಿ. ಏನೂ ಕಮ್ಮಿ ಮಾಡಿಲ್ಲ. ದಿನಕ್ಕೆರಡು ಬೀಡಾ ತಿನ್ತೀನಿ ಅಷ್ಟೆ’ ಅಂದ.

“ಹಾಗಾದ್ರೆ ಮಗಳು ಹೊಡೆಯೋದಿಕ್ಕೆ ಏನು ಕಾರಣ? ಅರ್ಥ ಆಗ್ಲಿಲ್ಲ’ “ಬುದ್ಧಿ ಮಾತು ಹೇಳ್ತೀನಲ್ವಾ… ಮನೇಲಿ ಇದ್ದಷ್ಟು ಹೊತ್ತು  ಮೊಬೈಲ್‌ ಚಾಟಿಂಗ್‌. ಮನೆ ಕೆಲ್ಸ ಮಾಡು ಅಂತ ಹೇಳಿದ್ರೆ ತಾಯಿಮಕ್ಳು ಎಲ್ಲಾ ಸೇರಿ ನನ್ನ ದಬಾಯಿಸ್ತಾರಮ್ಮಾ’ “ಯಾಕಾಗಿ ಹಾಗ್ಮಾಡ್ತಾರೆ? ಅವರಿಗಾಗಿ ತಾನೆ ಈ ರಿಕ್ಷಾದಲ್ಲಿ ಇಷ್ಟು ಕಷ್ಟಪಟ್ಟು ನೀವು ದುಡೀತಾ ಇರೋದು’ “ಹೌದಮ್ಮಾ 35 ವರ್ಷದಿಂದ ದುಡೀತಾ ಇದ್ದೀನಿ. ದಿನಾ 700 ರೂಪಾಯಿ ಮನೆ ಖರ್ಚಿಗೆ ಕೊಡ್ತೀನಿ. ಅದೂ ಸಾಕಾಗಲ್ಲ ಅಂತ ಜಗಳ ಮಾಡ್ತಾರೆ. ನನ್ನ ಕಷ್ಟ ಯಾರಿಗೂ ಅರ್ಥ ಆಗ್ತಿಲ್ಲ. ನೆಮ್ಮದಿಯೇ ಇಲ್ಲದಂತಾಗಿದೆ. ಕೆಲವೊಮ್ಮೆ ಮನೆಗೆ ಹೋಗೋದೇ ಬೇಡವೆನಿಸುತ್ತದೆ’
ವಿದ್ಯಾ ಮೌನವಾಗಿ ಇಬ್ಬರ ಸಂಭಾಷಣೆಯನ್ನು ಆಲಿಸುತ್ತಿದ್ದರೂ ಅವಳ ಮುಖದಲ್ಲೂ ವಿಷಾದದ ಛಾಯೆ ಮೂಡಿತ್ತು. 

ತಮಗಾಗಿ ಸವೆಸುವ ಜೀವದ ನೋವನ್ನು ಅರ್ಥಮಾಡಿಕೊಳ್ಳುವ ಮನಸ್ಸು ತಮ್ಮವರೆನಿಸಿಕೊಂಡವರಿಗೆ ಯಾಕಿಲ್ಲವೋ!’ ಇದನ್ನೇ ಒಂದು ಕಥೆಯಾಗಿಸಿದರೆ ಹೇಗೆ ಎಂದು ಶಮಾಳಿಗೆ ಹೊಳೆದು, “ಅಂಕಲ್‌ ನನಗೆ ಸ್ವಲ್ಪ ಕಥೆ-ಕವನ ಗೀಚೋ ಹವ್ಯಾಸ. ನಿಮ್ಮ ಕಥೆ ಬರೆಯಲಾ?’ “ಖಂಡಿತ ಬರೆಯಮ್ಮ, ಸಾಧ್ಯವಾದರೆ ನನಗೂ ಕಳಿಸು. ನಂಬರ್‌ ಕೊಡ್ತೀನಿ’ ಅಂದ.  ಏರ್‌ಪೋರ್ಟ್‌ ತಲುಪಲು ಇನ್ನೂ ಹದಿನೈದು ನಿಮಿಷ ಬಾಕಿ ಉಳಿದಿತ್ತು. ಶಮಾ ಕಥೆ ಬರೆಯುತ್ತೇನೆ ಅಂದ ಮೇಲೆ, ಕುಮಾರನ್‌ನ ಕಥೆ ಬೇರೆಯೇ ದಾಟಿಯಲ್ಲಿ ಸಾಗತೊಡಗಿತು. ಆವರೆಗೆ ತನ್ನ ಕುಟುಂಬದವರ ಬಗೆಗೆ ಹೇಳಿದ್ದನ್ನೆಲ್ಲ ಸಮರ್ಥಿಸಿಕೊಳ್ಳಲಾರಂಭಿಸಿದ. 

“ಮಗಳ ಕೈಯಿಂದ ಪೆಟ್ಟು ತಿಂದರೇನಾಯ್ತು ಅದು ನನ್ನ ಬುದ್ದಿಗೆ ತಾನೆ? ನಾನೂ ಕಿರಿಕಿರಿ ಮಾಡ್ತೇನಲ್ಲಾ! ನಾವೆಲ್ಲಾ ಫ್ರೆಂಡ್ಸ್‌ ತರ ಇರೋದು; ನನ್ನ ಮಕ್ಳು ತುಂಬಾ ಒಳ್ಳೆಯವರು. ನನ್ನ ಹೆಂಡ್ತೀನೂ ಅಷ್ಟೆ; ನನಗೆ ಇಷ್ಟವಾದ ಅಡುಗೆ ಮಾಡ್ತಾಳೆ. ಮಕ್ಕಳಿಗೆ ನಾನ್‌ವೆಜ್‌, ನನಗೆ ವೆಜ್‌ ಮಾಡೋವಷ್ಟೊತ್ತಿಗೆ ಸುಸ್ತಾಗಿ ಹೋಗ್ತಾಳೆ ಪಾಪ. ಈ ವಿಷಯದಲ್ಲಿ ನಾನು ತುಂಬಾ ಅದೃಷ್ಟ ಮಾಡಿದ್ದೀನಿ ಕಣಮ್ಮಾ’ ಅಂದಾಗ, ಶಮಾ ಮತ್ತು ವಿದ್ಯಾ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡರು. ನಗುವೊಂದು ಅವರಿಬ್ಬರ ಮುಖದಲ್ಲೂ ಮಿಂಚಿ ಮರೆಯಾಯಿತು. 

ಕುಮಾರನ್‌ ಮಾತು ಮತ್ತೆ ರಾಜಕೀಯದತ್ತ ತಿರುಗಿತು. ಒಬ್ಬೊಬ್ಬರ ಅವ್ಯವಹಾರಗಳನ್ನು ಹೇಳಿ, ಕೊಂಚ ಅವಾಚ್ಯ ಶಬ್ದಗಳಿಂದ ಬೈದ. ಅವನ ರಾಜಕೀಯ ವೃತ್ತಾಂತ ಇಂದಿರಾಗಾಂಧಿ ಕಾಲದವರೆಗೂ ಹೋಯ್ತು. ಇಂದಿರಾ ಬಗ್ಗೆ ತುಂಬಾ ಅಭಿಮಾನವಿಟ್ಟುಕೊಂಡಿದ್ದ ಕುಮಾರನ್‌, 

ಆಕೆ ಗುಂಡೇಟಿಗೆ ಬಲಿಯಾದಾಗ ಶವಯಾತ್ರೆಯಲ್ಲಿ ಪಾಲ್ಗೊಳ್ಳಲು ತಮಿಳುನಾಡಿನಿಂದ ದೆಹಲಿಗೆ 25 ಜನರ ತಂಡದಲ್ಲಿ ತಾನಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಂಡ.  ಅದಾಗಲೇ 9.45 ದಾಟಿತ್ತು. “ಇನ್ನು ಏರ್‌ಪೋರ್ಟ್‌ಗೆ 10 ನಿಮಿಷ ಅಷ್ಟೇ’ ಅಂದ ಕುಮಾರನ್‌, ತನ್ನ ಮೊಬೈಲ್‌ನಲ್ಲಿ ವಾಟ್ಸಾಪ್‌ ಓಪನ್‌ ಮಾಡಿ ಒಂದು ಮೆಸೇಜ್‌ ಓದಲು ಕೊಟ್ಟ. “ಡಿಯರ್‌ ಕುಮಾರನ್‌, ಇಟ್‌ ವಾಸ್‌ ವೆರಿ ನೈಸ್‌ ಟೂ ಹ್ಯಾವ್‌ ಟೇಕನ್‌ ರೈಡ್‌ ಟುಡೇ ಆನ್‌ ಯುವರ್‌ ಆಟೋ. ಯು ಆರ್‌ ರಿಯಲಿ ಎ ವೆರಿ ನೈಸ್‌ ಪರ್ಸನ್‌. ಮೇ ಯುವರ್‌ ಡ್ರೀಮ್ಸ್‌ ಕಮ್ಸ್‌ ಟ್ರೂ ಮೈ ನೇಮ್‌ ಈಸ್‌ ಅನಿಲ್‌ ಗುನಿಯಾಲ್‌’ ಎಂದಿತ್ತು.

ಮೆಸೇಜ್‌ ಓದಿದ ಶಮಾ ಕುತೂಹಲದಿಂದ, “ಯಾರು ಅಂಕಲ್‌ ಇವರು?’ ಅಂದಳು.  “ಇವತ್ತು ಬೆಳಿಗ್ಗೆ  ನನ್ನ ರಿಕ್ಷಾದಲ್ಲಿ ಪ್ರಯಾಣಿಸಿದ ಕಸ್ಟಮರ್‌. ನನ್ನ ರಿಕ್ಷಾದಲ್ಲಿ ಯಾರೇ ಬಂದ್ರೂ ಖುಷಿಪಡ್ಕೊಂಡು ಹೋಗ್ತಾರೆ. ನಾನು ಯಾರಲ್ಲೂ ಜಾಸ್ತಿ ಬಾಡಿಗೆ ಕೇಳುವುದಿಲ್ಲ. ಆದರೆ ಅವರೇ ನನ್ನ ಮಾತಿಂದ ಖುಷಿಯಾಗಿ ನೂರಿನ್ನೂರು ಬಾಡಿಗೆ ಜಾಸ್ತಿಯೇ ಕೊಟ್ಟು ಹೋಗ್ತಾರಮ್ಮಾ’ ಎಂದ.  “ಹಾಗಾದ್ರೆ ನೀವು ಎಲ್ಲರ ಬಳಿ ನಿಮ್ಮ ಕಥೆಯನ್ನೆಲ್ಲ ಹೇಳ್ತೀರಿ ಅಂತಾಯ್ತು’ “ಹೌದು ನನಗೂ ಸಮಾಧಾನವಾಗುತ್ತೆ, ಅವರಿಗೂ ಬೋರೆನಿಸುವುದಿಲ್ಲ. ಹಾಗೆ ಒಮ್ಮೆ ನನ್ನ ಆಟೋದಲ್ಲಿ ಪ್ರಯಾಣಿಸಿದವರು ನನ್ನ ನಂಬರ್‌ ತಗೊಂಡು ಮತ್ತೂಂದು ಬಾರಿ ಚೆನ್ನೈಗೆ ಬಂದಾಗ ತಪ್ಪದೆ ಫೋನಾಯಿಸಿ ಭೇಟಿಯಾಗುತ್ತಾರೆ. ಅಂಥ ಹಲವು ಕುಟುಂಬಗಳು ನನ್ನೊಡನೆ ಇಂದಿಗೂ ಒಡನಾಟದಲ್ಲಿವೆ. ಇನ್ನೇನಿದೆಯಮ್ಮಾ ನಮ್ಮ ಜೀವನದಲ್ಲಿ? ಈ ಮೋಸ ವಂಚನೆಯಿಂದ ನಮಗೇನು ಸಿಗುತ್ತೆ? ನಾಳೆ ಸತ್ತಾಗ ಏನಾದ್ರೂ ಕೊಂಡೋಗ್ತಿàವಾ? ಎಲ್ಲರೊಡನೆ ಉತ್ತಮ ಸ್ನೇಹ-ಸಂಬಂಧ. ಅಲ್ವೇನಮ್ಮಾ?’ ಅಂದ. 

ಆಟೋ ಅದಾಗಲೇ ಏರ್‌ಪೋರ್ಟ್‌ ಗೇಟ್‌ನ ಎದುರು ನಿಂತಿತ್ತು. ಇಬ್ಬರೂ ಬ್ಯಾಗ್‌ ಹಿಡಿದು ಇಳಿದಾಗ ಕುಮಾರನ್‌, “ಹೇಗಾಯ್ತು ನಿಮ್ಗೆ ಈ ಒಂದೂವರೆ ಗಂಟೆಯ ಪ್ರಯಾಣ?’ ಎಂದು ಕೇಳಿದ. “ತುಂಬಾನೆ ಖುಷಿಯಾಯ್ತು ಅಂಕಲ್‌’ ಎಂದು ಇಬ್ಬರೂ ದನಿಗೂಡಿಸಿದರು. 

“ರಿಕ್ಷಾದಲ್ಲಿ ಏನೂ ಉಳಿದಿಲ್ಲವಲ್ಲ…’ ಎಂದು ಶಮಾ ಸೀಟಿನತ್ತ ಕಣ್ಣಾಡಿಸಿದಾಗ, ಬ್ಯಾಕ್‌ ಸೈಡಿನಲ್ಲಿದ್ದ  ಖಾಲಿ ವಿಸ್ಕಿ ಬಾಟಲ್‌ ಮುಚ್ಚಳ ಕಳಚಿಕೊಂಡು ಬಿದ್ದಿತ್ತು. ಶಮಾ ಹಿಂತಿರುಗಿ ಏನೋ ಹೇಳಬೇಕೆನ್ನುವಷ್ಟರಲ್ಲಿ, ವಿದ್ಯಾ ಕುಮಾರನ್‌ಗೆ ನೂರು ರೂಪಾಯಿ ಜಾಸ್ತಿಯೇ ಕೊಟ್ಟಾಗಿತ್ತು. ರಿಕ್ಷಾ ಕ್ಷಣವೂ ತಡಮಾಡದೆ, ಬಂದ ದಾರಿಯಲ್ಲಿ ಹೈಸ್ಪೀಡಿನಲ್ಲಿ ಸಾಗಿತು.

ಅನಿತಾ ಪಿ. ತಾಕೊಡೆ

Advertisement

Udayavani is now on Telegram. Click here to join our channel and stay updated with the latest news.

Next