ಬೆಂಗಳೂರು: ಕೋಟ್ಯಂತರ ರೂ. ಮೌಲ್ಯದ ಆನೆ ದಂತಗಳನ್ನು ಮಾರಾಟಕ್ಕೆ ಯತ್ನಿಸಿದ ಮೂವರನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.
ಹಾಸನದ ವೀರಾಪುರ ಗ್ರಾಮದ ಚಂದ್ರೇಗೌಡ (46), ಹಾವೇರಿಯ ಬಂಕಾಪುರದ ಸೋಮಲಿಂಗಪ್ಪ ಕೊಡದ್ (41) ಹಾಗೂ ಬಸವನಾಳದ ಪ್ರವೀನ್ ಗುಳೇದ್ (24) ಬಂಧಿತರು. ಆರೋಪಿಗಳಿಂದ 29 ಕೆ.ಜಿ. ತೂಕದ 150 ಸೆಂ.ಮೀ. ಹಾಗೂ 125 ಸೆಂ.ಮೀ. ಉದ್ದವಿರುವ ಎರಡು ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಬನಶಂಕರಿಯ 3ನೇ ಹಂತದ 7ನೇ ಮುಖ್ಯ ರಸ್ತೆಯ ಬಿಟಿಎಲ್ ವಿದ್ಯಾವಾಹಿನಿ ಸ್ಕೂಲ್ ಗೇಟ್ ಬಳಿ ಟಾಟಾ ಇಂಡಿಕಾ ಕಾರಿನಲ್ಲಿ 150 ಸೆ.ಮೀ. ಉದ್ದದ 16 ಕೆ.ಜಿ. ಹಾಗೂ 125 ಸೆಂ. ಮೀ. ಉದ್ದದ 13 ಕೆ.ಜಿ.ಯ ಎರಡು ಆನೆ ದಂತಗಳನ್ನು ಮಾರಾಟಕ್ಕೆ ಯತ್ನಿಸಿದ್ದರು. ಅದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಜನಾರ್ದನ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ದಂತಗಳನ್ನು ವಶಕ್ಕೆ ಪಡೆದುಕೊಂಡಿದೆ. ಆರೋಪಿಗಳ ವಿರುದ್ಧ ವನ್ಯಜೀವ ಸಂರಕ್ಷಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸಕಲೇಶಪುರ ಸಮೀಪದಲ್ಲಿರುವ ಕಾಡಿನಿಂದ ಆನೆ ದಂತಗಳನ್ನು ತಂದಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಸುಮಾರು 40-45 ವರ್ಷದ ಆನೆಯ ದಂತಗಳು ಎಂದು ಅಂದಾಜಿಸಲಾಗಿದೆ. ಆನೆ ಕೊಂದು ಇವರೇ ತಂದಿದ್ದಾರೆಯೇ? ಅಥವಾ ಬೇರೆಯವರಿಂದ ಖರೀದಿಸಿದ್ದಾರೆಯೇ? ಇಲ್ಲಿ ಯಾರಿಗೆ ಮಾರಾಟಕ್ಕೆ ಯತ್ನಿಸಿದ್ದರು? ಜತೆಗೆ ಪರಸ್ಪರ ಪರಿಚಯ ಹೇಗೆ? ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಪೊಲೀಸರು ಹೇಳಿದರು.