Advertisement

ಮಾರಾಟಗಾರರು ನಿಯಮ ಮೀರಿದ್ರೆ ಕ್ರಮ

02:03 PM May 13, 2022 | Niyatha Bhat |

ಶಿವಮೊಗ್ಗ: ಕೃಷಿ ಪರಿಕರ ಮಾರಾಟಗಾರರು ನಿಯಮಾನುಸಾರವಾಗಿ ಪರಿಕರಗಳನ್ನು ಮಾರಾಟ ಮಾಡಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವರಾಜಕುಮಾರ್‌ ತಿಳಿಸಿದರು.

Advertisement

ಶಿವಮೊಗ್ಗದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ರಸಗೊಬ್ಬರ ಕೀಟನಾಶಕ ಮತ್ತು ಬಿತ್ತನೆ ಬೀಜಗಳನ್ನು ಕಡ್ಡಾಯವಾಗಿ ರಸಗೊಬ್ಬರ ಅಂಗಡಿ ಮಾಲೀಕರು ಸಕಾಲದಲ್ಲಿ ನಿಗದಿತ ದರದಲ್ಲಿ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜಗಳನ್ನು ಗೋಡೌನ್‌ ಗಳಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡುವ ಹಾಗಿಲ್ಲ. ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೃಷಿ ಪರಿಕರ ಮಾರಾಟಗಾರರು ನಿಯಮಾನುಸಾರ ಪರಿಕರ ಮಾರಾಟ ಮಾಡಬೇಕು. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿ ಅಧಿಕ ದರಕ್ಕೆ ಮಾರಾಟ, ಅನಧಿಕೃತ ದಾಸ್ತಾನು ಶೇಖರಣೆ, ಕೃತಕ ಅಭಾವ ಸೃಷ್ಟಿಸುವುದು, ಲೂಸ್‌ ಸೀಡ್ಸ್‌ ಮಾರಾಟ ಮಾಡುವುದು ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುವುದು. ಪ್ರತಿಯೊಬ್ಬರು ರೈತರ ಹಿತಾಸಕ್ತಿ ಕಾಪಾಡಲು ಶ್ರಮಿಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ (ಜಾಗೃತ ದಳ) ವೀರಭದ್ರಪ್ಪ ಮಾತನಾಡಿ, ಯೂರಿಯಾ ಗೊಬ್ಬರಕ್ಕೆ ಸರ್ಕಾರ ಪ್ರತಿ 45 ಕೆ.ಜಿ ಚೀಲಕ್ಕೆ 800ರೂ. ಸಹಾಯಧನ ಭರಿಸುತ್ತಿದೆ. ಡಿಎಪಿ ಗೊಬ್ಬರಕ್ಕೆ ಪ್ರತಿ 50 ಕೆಜಿ ಚೀಲಕ್ಕೆ 2500 ರೂ. ಹಾಗೂ 15:15:15 ಗೊಬ್ಬರಕ್ಕೆ ಪ್ರತಿ 50 ಕೆ.ಜಿ ಚೀಲಕ್ಕೆ 1425 ರೂ. ಸಹಾಯಧನ ಭರಿಸುತ್ತದೆ. ರಸಗೊಬ್ಬರಕ್ಕಾಗಿ ಕೇಂದ್ರ ಸರ್ಕಾರವು 2020-21 ನೇ ಸಾಲಿನಲ್ಲಿ 127 ಲಕ್ಷ ಕೋಟಿ, 2021-22 ನೇ ಸಾಲಿನಲ್ಲಿ 160 ಲಕ್ಷ ಕೋಟಿ ಹಾಗೂ ಪ್ರಸಕ್ತ ಸಾಲಿನಲ್ಲಿ 200 ಲಕ್ಷ ಕೋಟಿ ಸಹಾಯಧನ ನೀಡುತ್ತಿದೆ ಎಂದರು.

ತಾಲೂಕಿನಲ್ಲಿ ಒಟ್ಟು 123 ಕೃಷಿ ಪರಿಕರಗಳ ಮಾರಾಟಗಾರರು ಪರವಾನಗಿ ಪಡೆದಿದ್ದಾರೆ. ಅದರಲ್ಲಿ 100 ಖಾಸಗಿ ಮತ್ತು 23 ಸೊಸೈಟಿಗಳಿವೆ. ಒಟ್ಟು 26,000 ಹೆಕ್ಟೇರ್‌ ಕೃಷಿ ಮತ್ತು 49,000 ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು 75,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.

Advertisement

ಸಭೆಯಲ್ಲಿ ಶಿವಮೊಗ್ಗ ತಾಲೂಕು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಾದ ಸುನೀತಾ, ಮಹೇಶ್‌ ಹಾಗೂ ತಾಲೂಕಿನ ಎಲ್ಲಾ ಹೋಬಳಿಗಳ ಕೃಷಿ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next