Advertisement

ಸೆಲ್ಫಿ ವಿತ್‌ ಕ್ಯಾಮೆರಾ

02:54 PM Aug 18, 2018 | |

ತಪಸ್ಸಿಗೆ ಕುಳಿತ ಮುನಿಗೆ ಇರುವಂಥ ಏಕಾಗ್ರತೆ ಇದ್ದಾಗ ಮಾತ್ರ ಚೆಂದದ ಫೋಟೋ ತೆಗೆಯಲು ಸಾಧ್ಯ ಎಂಬ ಮಾತು ಈ ಹಿಂದೆ ಚಾಲ್ತಿಯಲ್ಲಿತ್ತು. ಫೋಟೋಗ್ರಫಿ ಎಂಬುದೊಂದು ಧ್ಯಾನ ಎಂದೂ ಹೇಳಲಾಗುತ್ತಿತ್ತು. ಆದರೆ ಈಗ ಮೊಬೈಲ್‌ಗ‌ಳೂ, ಅದರಲ್ಲಿರುವ ಕ್ಯಾಮರಾಗಳು ಬಂದ ಮೇಲೆ, ಫೋಟೋಗ್ರಫಿಯ ಸೈಕಾಲಜಿ ಬದಲಾಗಿದೆ. ಅದು ಹೇಗೆ, ಹಿರಿಯ ಮನಃಶಾಸ್ತ್ರಜ್ಞ, ಫೋಟೋಗ್ರಾಫ‌ರ್‌ ಪ್ರೊ. ಶ್ರೀಧರಮೂರ್ತಿ ಇಲ್ಲಿ ಮಾತಾಗಿದ್ದಾರೆ. 

Advertisement

ಒಂದು ಸಲ ಬಸವನಗುಡಿಯ ಹೋಟೆಲ್‌ನಲ್ಲಿ ಕೂತಿದ್ದೆ. ಒಬ್ಬ ಕಡುಗಪ್ಪು ಹುಡುಗ ಬಂದ. ಆಪ್ರೋ ಅಮೇರಿಕನ್‌. ಇವನ್ನು ನೋಡುತ್ತಿದ್ದಂತೆ ಮನದ ಕ್ಯಾಮರಾ ಬಿಚ್ಚಿಕೊಂಡಿತು.  ಫೋಟೋ ತೆಗೆಯುವ ಉಮೇದು ಹೆಚ್ಚಾಗಿ ಕಪ್ಪು ವ್ಯಕ್ತಿಯನ್ನು ಕಪ್ಪು ಬ್ಯಾಗ್ರೌಂಡ್‌ನ‌ಲ್ಲಿ ಫೋಟೋ ತೆಗೆದರೆ ಹೇಗೆ ಅನಿಸಿತು. ತಡ ಮಾಡಲಿಲ್ಲ. ಮೆಲ್ಲಗೆ ಹೋಗಿ “ನಿಮ್ಮ ಫೋಟೋ ತೆಗೆಯಲಾ’ ಅಂದೆ. ಅವನು ಸ್ವಲ್ಪ ಗುಮಾನಿಸಿದ. ಆಮೇಲೆ,  ಉದ್ದೇಶ ಇದು ಅಂದೆ. ಕೊನೆಗೆ ಒಪ್ಪಿಕೊಂಡ.  ಹಾಗಂತ, ಅವತ್ತೇ ಫೋಟೋ ತೆಗೆಯಲಿಲ್ಲ.  ಮನೆಗೆ ಕರೆದುಕೊಂಡು ಬಂದೆ. ವಿದ್ಯಾರ್ಥಿ ಭವನ್‌ ಮಸಾಲೆ ದೋಸೆ, ಬ್ರಾಹ್ಮಣರ ಕಾಫೀಬಾರ್‌ನಲ್ಲಿ ಇಡ್ಲಿ ತಿನಿಸಿದೆ.  ಹೀಗೆ ವಾರಗಟ್ಟಲೆ ಅವನ ಜೊತೆ ಸುತ್ತಿ ಸಲುಗೆ ಗಳಿಸಿ ಕೊಂಡ ಮೇಲೆ ನನ್ನ ಕಲ್ಪನೆ ಹೇಳಿದ ಫೋಟೋ ತೆಗೆದೆ.  ಹಿಂದೆ ಕಪ್ಪು ಹಿನ್ನೆಲೆ ಕೊಟ್ಟು. 

 ಎಂಥ ಬಂಪರ್‌ ಫೋಟೋ ಗೊತ್ತೇ ಅದು?
ನಮ್ಮ ಮೇಷ್ಟ್ರು ಚಕ್ರವರ್ತಿ ರಾಜಗೋಪಾಲ್‌-  
  ಡು ಯು ಸೀ ವಾಟ್‌ ಐ ಸೀ ಅಂತ ಕೇಳ್ಳೋರು. ಇಲ್ಲ ಅಂದರೆ, ತಕ್ಷಣ- 
 “ಯು ಸೆಲ್‌ ಯುವರ್‌ ಕ್ಯಾಮರ,  ಬೈ  ಎ ಕಲರ್‌ ಟಿ.ವಿ’ ಅನ್ನೋರು. 

ನನ್ನ ಮೇಷ್ಟ್ರು ಮೂರು ವರ್ಷ ನನಗೆ ಕ್ಯಾಮರಾ ಮುಟ್ಟೋದಕ್ಕೆ ಬಿಟ್ಟಿರಲಿಲ್ಲ. ಕಾರಣ, ಪ್ರಜ್ಞೆಯಲ್ಲಿ ಚಿತ್ರ ಮೂಡಬೇಕು ಅಂತೆ.  ಅದಕ್ಕೆ ಒಳ್ಳೊಳ್ಳೆ ಚಿತ್ರಗಳನ್ನು ನೋಡುತ್ತಿರಬೇಕಿತ್ತು; ವೇದಿಕೆ ಏರಿ ಹಾಡುವ ಮೊದಲು ವರ್ಷಗಟ್ಟಲೆ ಸಂಗೀತ ಕೇಳಬೇಕು ಅಂತಾರಲ್ಲ, ಹಾಗೇ!  ಕೇಳ್ಕೆಯಿಂದ ಮನಸಲ್ಲಿ ನಾದದ ಅಲೆ ಶುರುವಾಗುತ್ತದೆ.  ಹಾಗೇನೇ, ಚಿತ್ರಗಳನ್ನು ನೋಡುವುದರಿಂದ ಪ್ರಜ್ಞೆಯಲ್ಲಿ ಕಲ್ಪನೆ ಹುಟ್ಟುತ್ತದೆ. 10 ಜನ ಫೋಟೋಗ್ರಾಫ‌ರ್‌ಗಳಿದ್ದರೆ, ಹತ್ತೂ ಜನರ ನೋಟಗಳು
 ಬೇರೆ ಬೇರೆಯಾಗಿರುತ್ತದೆ.
ಇದನ್ನೇ ಧ್ಯಾನ ಅನ್ನೋದು. 
ಧ್ಯಾನ ಅಂದರೆ ಮತ್ತೇನೂ ಅಲ್ಲ; ನಮ್ಮನ್ನು ನಾವು ಮರೆಯುವುದು. ಮರೆಯುವುದು ಅಂದರೆ ಅದು ಆ ಕ್ಷಣದ ಸಾವು;  ಸತ್ತು ಬದುಕದಿದ್ದರೆ ಒಳ್ಳೆ ಫೋಟೋ ಸಿಗುವುದೇ ಇಲ್ಲ. 

Advertisement

 ಮೂಲಭೂತವಾಗಿ ನಾನು ಮನಃಶಾಸ್ತ್ರದ ವಿದ್ಯಾರ್ಥಿ. ಪ್ರಾಕ್ಟೀಶನರ್‌. ಜೊತೆಗೆ ಹವ್ಯಾಸಿ ಛಾಯಾಗ್ರಾಹಕ. 
 ಒಬ್ಬ ಮನಃಶಾಸ್ತ್ರಜ್ಞನಾಗಿ, ಫೋಟೋಗ್ರಫಿ ಕ್ಷೇತ್ರವನ್ನು ಗಮನಿಸುತ್ತಾ ಬಂದಿದ್ದೇನೆ. ಇವತ್ತು ಎಲ್ಲರ ಕೈಯಲ್ಲಿ  ಮೊಬೈಲ್‌, ಅದರಲ್ಲಿ ಕ್ಯಾಮರಾ ಬಂದು ಫೋಟೋಗ್ರಫಿ ಅನ್ನೋದು  ದುರಂತವಾಗಿದೆ. 

 ಧ್ಯಾನವಿಲ್ಲದ, ತಪಸ್ಸು ಮಾಡದ ಫೋಟೋಗ್ರಫಿ ಹೆಚ್ಚುತ್ತಿದೆ. ಅಂದರೆ, ನಮ್ಮ ಭಾವಕೋಶದಿಂದಾಚೆ ಜಿಗಿದು ಲೋಕ ಪರ್ಯಟನೆಗೆ ಹೊರಟುಬಿಟ್ಟಿವೆ.  ಹೀಗಾಗಿ ಚಿತ್ರಗಳು ಇವೆ; ಅದರಲ್ಲಿ ಭಾವ ಕಾಣುತ್ತಿಲ್ಲ. 

 ಎಲ್ಲರ ಕೈಯಲ್ಲೂ ಕ್ಯಾಮರಾಗಳು. ಬದುಕಿನ ಒಳಗೂ, ಹೊರಗೂ ಕ್ಯಾಮರಗಳನ್ನು ಇಟ್ಟುಕೊಂಡಿದ್ದೇವೆ.   ನಮಗೆ ಇಷ್ಟ ಇರಲಿ, ಬಿಡಲಿ, ಎಲ್ಲರೂ ಪೋಟೋಗಳಾಗಿಬಿಟ್ಟಿದ್ದೇವೆ.  ಬೇರೆಯವರು ಹೇಗೆ ಫೋಟೋ ತೆಗೀತಾರೋ, ನಮಗೆ ಬೇಡವಾದ ಕೋನದಲ್ಲಿ ಫೋಟೋ ತೆಗೆದು ಬಿಟ್ಟರೆ? ಅನ್ನೋ ಭಯದಿಂದ ಎಲ್ಲರೂ  ಸಜ್ಜನರಂತೆಯೂ, ಬೇಡದೇ ಇದ್ದರೂ ಕೃತಕವಾಗಿ ನಗುತ್ತಲೂ ಇದ್ದೀವಿ.  ಅಂದರೆ, ನಮ್ಮ ಖಾಸಗಿ ಹಾಗೂ ಸಾರ್ವಜನಿಕ ಬದುಕಿನ ಅಂತರ ಕಡಿಮೆಯಾಗಿ ಸೌಜನ್ಯ, ಮಾನವೀಯತೆ ಮಂಗಮಾಯವಾಗಿದೆ.  ಎಷ್ಟೋ ಸಲ ಆಕ್ಸಿಡೆಂಟ್‌ ಆದರೆ ಸಹಾಯಕ್ಕೆ ಬರುವುದು ಬಿಟ್ಟು ಆ ಕ್ಷಣದ ಫೋಟೋ ತೆಗೆದು  ಹಂಚುವ ಮಟ್ಟಿಗೆ ಮನಸ್ಸುಗಳು ಅಮಾನವೀಯವಾಗುತ್ತಿವೆ.

ಹಾಗಾದರೆ, ಟೆಕ್ನಾಲಜಿಯಲ್ಲಿ ಪ್ರಗತಿ ಆದದ್ದು ತಪ್ಪೇ? ಅನ್ನಬಹುದು. ತಪ್ಪಲ್ಲ, ಆದರೆ ತಂತ್ರಜ್ಞಾನ ನಮ್ಮ ಅಗತ್ಯಗಳನ್ನು ಮೀರಿದರೆ ಈ ರೀತಿ ಆಗುತ್ತದೆ.  

 ಸೆಲ್ಪಿಗಳು  ಸ್ವರತಿ ಇದ್ದಾಗೆ.  ಇದು ಆತ್ಮರತಿಯನ್ನು ಜಾಸ್ತಿ ಮಾಡುತ್ತಿದೆ.  ಹೀಗಾಗಿ ಮಾನಸಿಕ ಖನ್ನತೆ ಉಂಟಾಗಿ, ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿದೆ.  ಸೆಲ್ಫಿಯಿಂದ;  ನಾನು ಬೆಳೆಯುವುದಕ್ಕೆ, ವಿಜೃಂಭಿಸುವುದಕ್ಕೆ ಬೇರೆ ಯಾರ ನೆರವೂ ಬೇಕಿಲ್ಲ, ಸ್ನೇಹಿತರು,  ಸಂಗಾತಿಗಳು, ಬಂಧು, ಎಲ್ಲವೂ ನಾನೇ, ನನ್ನಲ್ಲೇ ಅನ್ನೋ ಅಪಾಯಕಾರಿ ಮನೋಭಾವ ಮೂಡಿಸಿಬಿಟ್ಟಿದೆ.  ಇದನ್ನು ದೃಢಪಡಿಸಿಲಿಕ್ಕೆ ಸೆಲ್ಪಿಬೇಕು. ಅದನ್ನು ಫೇಸ್‌ಬುಕ್ಕಿಗೆ ಹಾಕಬೇಕು.  ಒಟ್ಟಾರೆ ಉದ್ದೇಶ, ಸೆಲ್ಫಿ ತೆಗೆಯೋದು, ಫೋಟೋಗ್ರಫಿ ಮಾಡೋದು ಜಗತ್ತನ್ನು ಮೆಚ್ಚಿಸಲಿಕ್ಕೆ, ಆತ್ಮರತಿಗಷ್ಟೇ. ಆತ್ಮಸಂತೋಷಕ್ಕಲ್ಲ.  

ಮೊನ್ನೆ ಒಂದು ಘಟನೆ ನಡೆಯಿತು. ನಮ್ಮ ದೂರದ ಸಂಬಂಧಿಕ ಅಜ್ಜಿಯೊಬ್ಬರು ತೀರಿಹೋದರು. ಮೊಮ್ಮಗಳು ತಟಕ್ಕನೇ ಇದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದಳು. ನಿಮಿಷಗಳಲ್ಲಿ ನೂರಾರು ಲೈಕುಗಳು, ಸಂತಾಪ ಸೂಚನೆಗಳು ಬಂದವು.   ಹುಟ್ಟು, ಸಾವು ಬಹಳ ಖಾಸಗಿ ವಿಚಾರ. ಹಸಿ ಹಸಿಯಾಗಿದ್ದ ಸಾವಿನ ನೋವಲ್ಲೂ ಫೇಸ್‌ಬುಕ್ಕಿಗೆ ಅಪ್‌ಲೋಡ್‌ ಮಾಡುವ ಮನೋಸ್ಥಿತಿ ಇದೆಯಲ್ಲ; ಇದಕ್ಕಿಂತ ದುರಂತ ಇನ್ನೇನಿದೆ?

 ಲಕ್ಷಾಂತರ ರೂ. ಕೊಟ್ಟು ಹೈ ಎಂಡ್‌ ಕ್ಯಾಮರಾ ಕೊಂಡರೂ, ನೋಡೋಕೆ ಬರದ ಮೇಲೆ ಪ್ರಯೋಜನ ಏನು?  10 ಸಾವಿರ ಪೆನ್ನು ತಗೊಂಡು ಸಹಿ ಹಾಕೋಕೆ ಬರದೇ ಇದ್ದರೆ ಹೇಗೋ ಹಾಗೇ. ನಮ್ಮಲ್ಲಾಗಿರೋದು ಇದೇನೇ.  ಇವತ್ತು ಪೋಟೋ ತೆಗೀತಾ ಇದ್ದರೆ ಫೋಸ್‌ ಕೊಡಬೇಕು ಅನ್ನೋ ಮಟ್ಟಕ್ಕೆ ವರ್ತಿಸುವಷ್ಟು ಜನರ ಮನೋಸ್ಥಿತಿ ಬದಲಾಗಿದೆ. 

ಫೋಟೋಗ್ರಫಿಯ ಮೂಲ ಉದ್ದೇಶ ಇದಲ್ಲ. ವ್ಯಕ್ತಿಯ ಸಹಜತೆ, ಒಳಗೆ ಹುದುಗಿರುವ ಕಾಣದ ವ್ಯಕ್ತಿತ್ವವನ್ನು ಪೋಟೋದಲ್ಲಿ ಕಾಣಿಸಬೇಕು ಅನ್ನೋದು. ಎಲ್ಲರ ಕೈಯಲ್ಲೂ ಕ್ಯಾಮರಾಗಳು ಇರುವುದರಿಂದ ಯಾರಲ್ಲೂ ಸಹಜ, ಮಾನವೀಯತೆಯ ಗುಣಗಳು ಉಳಿದಿಲ್ಲ.   ಮನೆಯಿಂದ ಮೇಕಪ್‌ ಮಾಡಿಕೊಂಡು ಬಂದು ತೆಗೆಸಿಕೊಳ್ಳುವ 
ಪ್ರೀ ವೆಡ್ಡಿಂಗ್‌ ಶೂಟ್‌, ಪೋಸ್ಟ್‌ ವೆಡ್ಡಿಂಗ್‌ ಶೂಟ್‌ಗಳನ್ನು ನೋಡಿದ್ದೀನಿ. ಇಲ್ಲಿ ಆತ್ಮೀಯವಾದ ಕ್ಷಣಗಳನ್ನು ಕಲ್ಪಿಸಿ, ನಟಿಸುತ್ತಾ ಫೋಸು ಕೊಡುವ ಇವು ನಿಜಕ್ಕೂ ಕ್ಯಾಂಡಿಡ್‌ ಫೋಟೋಗ್ರಫಿ ಹೇಗೆ ಆಗುತ್ತದೆ?  ಕ್ಯಾಂಡಿಡ್‌ ಅಂದರೆ, ನಮಗೆ ಗೊತ್ತಿಲ್ಲದ, ಅಸಹಜ ಸಂದರ್ಭವನ್ನು ಸೆರೆ ಹಿಡಿಯೋದು. ಅಂದರೆ ನಮ್ಮೊಳಗಿರುವ ಕಾಣದ ಭಾವಕ್ಕೆ ಕ್ಯಾಮರಾ ಇಡೋದು, ಅರಿವಿಗೆ ಬರದಂತೆ ತೆಗೆಯುವುದು ಕಲೆಗಾರಿಕೆ. ಇಂದು ಇದು ಅಸಾಧ್ಯ.

ಕಾರಣ, ಯಾರಿಗೂ ಕ್ಯಾಮರ ಹಿಡಿದು ತಪಸ್ಸು ಮಾಡುವ ವ್ಯವಧಾನ ಇಲ್ಲ.  ಒಳ್ಳೆ ಫೋಟೋಗ್ರಫಿಗಾಗಿ ಕಾಯಬೇಕು. ನಮಗಿಂತ ಹಿರಿಯರು ತೆಗೆದ ಫೋಟೋಗಳನ್ನು ನೋಡಿ, ನೋಡಿ ಪ್ರಜ್ಞೆಯಲ್ಲಿ ಕಲ್ಪನೆಗಳನ್ನು ಗುಡ್ಡೆ ಹಾಕಿಕೊಳ್ಳಬೇಕು. ಯಾರಿಗೆ ಇದನ್ನೆಲ್ಲಾ ಮಾಡುವ ವ್ಯವಧಾನವಿದೆ?

 ನಮ್ಮ ಮೇಷ್ಟ್ರು ರಾಜಗೋಪಾಲ್‌ ಹೇಳ್ಳೋರು, ಫೋಟೋಗ್ರಫಿಯಲ್ಲಿ ಕೌಶಲ್ಯವನ್ನು ಹೇಳಿಕೊಡಬಹುದು, ಕಲ್ಪಿಸಿಕೊಳ್ಳುವುದನ್ನಲ್ಲ ಅಂತ.  ಟಿ.ಎಸ್‌. ಸತ್ಯನ್‌, ನಮ್ಮ ಮೇಷ್ಟ್ರು ಹೀಗೆ ಇವರಲ್ಲಿ ಯಾರಲ್ಲೂ ಹೈ ಎಂಡ್‌ ಕ್ಯಾಮರಾಗಳು ಇರಲಿಲ್ಲ. ಆದರೆ, ಅವರೆಲ್ಲಾ ಜಗತ್ತು ತಿರುಗಿ ನೋಡುವಂಥ ಫೋಟೋಗಳನ್ನು ತೆಗೆಯಲಿಲ್ಲವೇ? ಇದೆಲ್ಲಾ ಹೇಗೆ ಸಾಧ್ಯವಾಯಿತು?  ಅವರೆಲ್ಲರಿಗೂ ನೋಟವನ್ನು ಕಲೆಯಾಗಿಸುವುದು ಗೊತ್ತಿತ್ತು.  ಇದಕ್ಕೆ ಒಳ್ಳೆ ಉದಾಹರಣೆ – ಸಂಧ್ಯಾರಾಗಂ ಸಿನಿಮಾ. ಅದರಲ್ಲಿ ಬಾಲು ಮಹೇಂದರ್‌ ಸಿನಿಮಾಟೋಗ್ರಫಿ ಮಾಡಿದ್ದಾರೆ. ಆಗ ಮದರಾಸು ಕೊಳಕು ನಗರ ಅಂತ ಹೆಸರಾಗಿತ್ತು. ಇವರ ಫೋಟೋಗಳನ್ನು ನೋಡಿದರೆ,  ತಕ್ಷಣ ವಿಮಾನ ಹಿಡಿದು ಚೆನ್ನೈಗೆ ಹೋಗಿ ಬರೋಣ ಅನಿಸಿಬಿಡುತ್ತದೆ. ಅಷ್ಟು ಚೆನ್ನಾಗಿ  ತೆಗೆದಿದ್ದಾರೆ.
 ಅಂದರೆ, 
ಫೋಟೋಗ್ರಫಿ ಅನ್ನೋದು ಕಲೆ. ಕ್ಯಾಮರ ಅನ್ನೋದು ಬ್ರಷ್‌. ಯಾವಾಗ? ಕ್ಯಾಮರಾ ಹಿಂದಿನ ವ್ಯಕ್ತಿ ಕಲೆಗಾರನಾಗಿದ್ದಾಗ.  ಆರ್ಟ್‌ ಈಸ್‌ ಎ ಪ್ರೊಸಸ್‌ ಆಫ್ ಟೆಲ್ಲಿಂಗ್‌ ಸರ್ಟನ್‌  ಲೈ ಇನ್‌ ಆದ ಕಾಸ್‌ ಆಫ್ ಬ್ಯೂಟಿ ಅನ್ನೋರು ನಮ್ಮ ಗುರುಗಳು.
ಇದು ಸತ್ಯ. 

ಒಂದು ಸಲ ನಾನು ರಾಮಕೃಷ್ಣ ಹೆಗಡೆ ಅವರ ಫೋಟೋ ತೆಗೆಯಲು ಹೋಗಿದ್ದೆ. ಬಹಳ ಚೆನ್ನಾಗಿ ಸಿದ್ಧರಾಗಿ ಬಂದಿದ್ದರು. ಸಮಸ್ಯೆ ಏನೆಂದರೆ, ರಾಮಕೃಷ್ಣ ಹೆಗಡೆಯವರ ಕೆಳದುಟಿ ಇದೆಯಲ್ಲ. ಅದು ಸ್ವಲ್ಪ ದಪ್ಪ. ನನ್ನ ಫೋಟೋದಲ್ಲಿ ನೋಡಿದರೆ, ಅದು ಗೊತ್ತಾಗುವುದೇ ಇಲ್ಲ.  ಸರ್ಟನ್‌ ಲೈ ಅಂದರೆ ಇದೇನೇ. ಇವೆಲ್ಲ ಬರುವುದು ಅಧ್ಯಯನ, ಸತತ ನೋಟಗಳು, ಗ್ರಹಿಕೆಯಿಂದ ಮಾತ್ರ.  ಹೈ ಎಂಡ್‌ ಕ್ಯಾಮರಾ ಇಂಥ ಯಾವ ಸಹಾಯವನ್ನೂ ಮಾಡುವುದಿಲ್ಲ. 

ನಿಜ ಹೇಳಬೇಕೆಂದರೆ,  ಚಿತ್ರಗಳು ನಮ್ಮ ಕಣ್ಣಿನ ಆಚೀಚೆಯೇ ಇರುತ್ತವೆ. ಅದಕ್ಕೆ ಬೇಕಾದ ಕೋನಗಳನ್ನು ಕೊಟ್ಟು, ಅದರಿಂದ ಬೇಡವಾದ ಸಂಗತಿಗಳನ್ನು ಬಿಡಿಸುವುದು ಫೋಟೋಗ್ರಾಫ‌ರ್‌ನಲ್ಲಿ ಇರಬೇಕಾದ ಕಲೆ. 
ಮೊಬೈಲ್‌ಗ‌ಳಿಗೂ ಕ್ಯಾಮರಾಗಳನ್ನು ಇಟ್ಟಿರುವುದರಿಂದ ಇವತ್ತು ಅದೇ ಮಾಯವಾಗಿ, ಹವ್ಯಾಸಿಫೋಟೋಗ್ರಾಫ‌ರ್‌ಗೂ, ವೃತ್ತಿಪರರಿಗೂ ಇರಬೇಕಾದ ಅಂತರ ಕಡಿಮೆಯಾಗಿ, ಇದು ಕಲೆ ಎನ್ನುವುದೇ ಅಳಿಸಿಹೋಗಿ, ಕಲೆ ಅಂತ ಧ್ಯಾನಿಸಿದವರೂ, ಧ್ಯಾನಿಸದೇ ಮನಸ್ಸಿಗೆ ಬಂದಂತೆ ಫೋಟೋ ಕ್ಲಿಕ್ಕಿಸುವವರಿಗೂ ವ್ಯತ್ಯಾಸಗಳನ್ನ ಗುರುತಿಸದಷ್ಟರ ಮಟ್ಟಿಗೆ ಮನಸ್ಸು ಕುರುಡಾಗಿವೆ. 
ಇದು ತಂತ್ರಜ್ಞಾನ ಮುಂದಿಟ್ಟ ದುರಂತ.

ಇದು ಸೆಲ್ಫಿ ಪ್ರಪಂಚ . ಹಾಗಾಗಿ, ಜಗತ್ತಿನ ಎಲ್ಲರೂ ಎಚ್ಚರವಾಗಿರುತ್ತಾರೆ. ತಮ್ಮತನವನ್ನು ಒಳಗಿಟ್ಟುಕೊಂಡು ನಾಟಕ ಮಾಡುತ್ತಾರೆ. ಹೀಗಾಗಿ ಫೋಟೋ ತೆಗೆಯೋದು ಕಷ್ಟ. ಆದರೆ, ಮಕ್ಕಳು, ಹುಚ್ಚರು, ಕಂಠ ಪೂರ್ತಿ ಕುಡಿದವರು ಮಾತ್ರ ತಾವು ತಾವಾಗೇ ಇರುತ್ತಾರೆ. 

ನಿರೂಪಣೆ: ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next