Advertisement

ಸ್ಟಿಕ್‌ ಸ್ಟಿಕ್‌ ಎನುತಿದೆ ಕಾಲ…

12:42 PM May 16, 2017 | Harsha Rao |

ಹಿಂದಿನ ಕಾಲದಲ್ಲಿ ಕುರಿ, ದನ ಕಾಯುವವರು, ಹಿರಿಯರು, ನಿಶ್ಯಕ್ತರು ಕೈಯಲ್ಲೊಂದು ಕೋಲು ಹಿಡಿದು ಓಡಾಡುತ್ತಿದ್ದರು. ಈಗ ಗಟ್ಟಿಮುಟ್ಟಾಗಿರುವ ಯುವಕ ಯುವತಿಯರೂ ಕೈಯಲ್ಲಿ ಕೋಲು ಹಿಡಿದು ಓಡಾಡುತ್ತಿದ್ದಾರೆ. ಇದು ವಾಕಿಂಗ್‌ ಸ್ಟಿಕ್‌ ಅಲ್ಲ, ಸೆಲ್ಫಿ ಸ್ಟಿಕ್‌!

Advertisement

ನಾನು ಚಿಕ್ಕವನಾಗಿದ್ದಾಗ ನಮ್ಮನೆಯಲ್ಲಿ ಒಂದು ಹಳೇ ಕ್ಯಾಮೆರಾ ಇತ್ತು. ರೀಲ್‌ ಹಾಕಿ ಪ್ರತಿ ಸಾರಿ ಪಟಕ್‌ ಅನಿಸಿದಾಗಲೂ ಮತ್ತೆ ರೀಲನ್ನು ಒಂಚೂರು ಮುಂದೆ ತಳ್ಳಿ ಆಮೇಲೆ ಫೋಟೊ ತೆಗೆಯಬೇಕಿತ್ತು. ಪ್ರವಾಸ ಹೊರಡುವ ಸಮಯದಲ್ಲಿ ನಮ್ಮಪ್ಪ “ಲೇ ಅದಕ್ಕೊಂದು ರೀಲು ಹಾಕ್ಕೊಂಡು ಬಾ. ಅಲ್ಲೆಲ್ಲೂ ಸಿಗಲ್ಲ’ ಅಂತ ಅಂತಿದ್ರು. ಫ್ಯೂಜಿ, ಕೊಡ್ಯಾಕ್‌ ಕಂಪನಿಯ ರೀಲುಗಳನ್ನು ತಂದು, ಕತ್ತಲಲ್ಲಿ ಕೂಡಿಕೊಂಡು ಕ್ಯಾಮೆರಾಕ್ಕೆ ತೂರಿಸಬೇಕಿತ್ತು. ಫೋಟೊ ತೆಗೆದ ಮೇಲೆ ಅದರಲ್ಲಿ ನಮ್ಮ ಮುಖಗಳು ಹೇಗೆ ಬಿದ್ದಿವೆ ಎಂದು ತಿಳಿಯುತ್ತಿರಲಿಲ್ಲ. ಪೂರ್ತಿ ರೀಲು ಖಾಲಿಯಾಗಿ, ಸ್ಟುಡಿಯೋದ ಕೆಮಿಕಲ್‌ನಲ್ಲಿ ರೀಲನ್ನು ಅದ್ದಿ ತಗೆದಾಗಲೇ ನಮ್ಮ ಮುಖಗಳು ಕಾಣುತ್ತಿದ್ದವು. ಎಷ್ಟೋ ಬಾರಿ ನನ್ನ ಫೋಟೊವನ್ನು ಬೇರೊಬ್ಬರ ಬಳಿ ತೆಗೆಸಿಕೊಳ್ಳೋಣ ಅಂತ ಹೋದರೆ ಕ್ಯಾಮೆರಾ ಆಪರೇಟ್‌ ಮಾಡುವವರಿಲ್ಲದೆ ಬರೀ ಇನ್ನೊಬ್ಬರ ಫೋಟೊ ತೆಗೆಯುವುದಕ್ಕಷ್ಟೇ ಸೀಮಿತನಾಗಬೇಕಿತ್ತು. ಇದು ಅಂದಿನ ಕಾಲದ ಹವ್ಯಾಸಿ ಫೋಟೊಗ್ರಾಫ‌ರ್‌ಗಳ ಹಣೆಬರಹ. ಈಗ ನೋಡಿ ಸ್ವಲ್ಪ ಅವಧಿಯಲ್ಲೇ ಎಷ್ಟೊಂದು ಬದಲಾವಣೆ! ಸೆಲ್ಫಿ- ಈ ಒಂದು ಪದ ಇಡೀ ಪೋಟೋಗ್ರಫಿಯನ್ನು ಹಿಡಿದಿಟ್ಟುಕೊಂಡಿದೆ.

ಮೊಬೈಲ್‌ನಲ್ಲಿ ಕ್ಯಾಮೆರಾ ಬಂದಾಗ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಖುಷಿ ಪಟ್ಟಿದ್ದೆವು. ಆದರೂ ಯಾರಾದರೊಬ್ಬರು ನಿಂತು ಸೆ¾„ಲ್‌ ಪ್ಲೀಸ್‌ ಅನ್ನಲೇಬೇಕಿತ್ತು. ಟೈಮ್‌ ಸೆಟ್‌ ಮಾಡುವ ಸೌಲಭ್ಯ ಇತ್ತಾದ್ರೂ ಅದ್ಯಾಕೊ ಅಷ್ಟೊಂದು ಸಮಾಧಾನವೆನಿಸಲಿಲ್ಲ. ಮನುಷ್ಯನೊಳಗಿನ ನಾನು ಎಂಬುದಕ್ಕೆ ಪೂರಕವಾಗಿಯೇ ಏನೋ ಯಾರ ಸಹಾಯವಿಲ್ಲದೆ ನಾನು, ನಾನೇ, ನನ್ನ ಮುಖವನ್ನು ಫೋಟೊದಲ್ಲಿ ಕೂರಿಸಿಕೊಳ್ಳಬೇಕು ಅನ್ನುವವರಿಗೆ ಸೆಲ್ಫಿ ಸ್ಟಿಕ್‌ ಬಂದು ಕೂತಿದೆ. ಇತ್ತೀಚಿನ ಹೊಸ ಟ್ರೆಂಡ್‌ ಸೆಲ್ಫಿ. ತಮ್ಮ ಫೋಟೋ ತಾವೇ ತೆಗೆದುಕೊಂಡು ನಾವು ನೋಡುವುದು ಮಾತ್ರವಲ್ಲದೆ, ನಮ್ಮ ಸುತ್ತಮುತ್ತಲಿನವರೂ ನೋಡಲಿ ಎಂಬ ಆಸೆ ಈ ಸೆಲ್ಫಿಯ ಹಿಂದಿನ ಹುನ್ನಾರ.

ಜನರ ಸೆಲ್ಫಿ ಹುಚ್ಚನ್ನು ಗಮನಿಸಿದ ಮೊಬೈಲ್‌ ಕಂಪನಿಯವರು ಬೇಗನೆ ಎಚ್ಚೆತ್ತುಕೊಂಡು ಸೆಲ್ಫಿ ಸ್ನೇಹಿ ಮೊಬೈಲುಗಳನ್ನೂ ಬಿಡುಗಡೆಗೊಳಿಸಿದ್ದಾಯಿತು. ಡಬಲ್‌ ಕ್ಯಾಮೆರಾಗಳಿರುವ ಮೊಬೈಲ್‌ಗ‌ಳು ಬಂದವು. ಇನ್ನೊಬ್ಬರಿಂದ ಫೋಟೋ ತೆಗೆಸಿಕೊಳ್ಳುವುದು ಇನ್ನೈದು ಹತ್ತು ವರ್ಷಗಳಲ್ಲಿ ಇತಿಹಾಸದ ಪುಟ ಸೇರುತ್ತದೆ ಎಂಬುದರ ಕುರಿತು ಚರ್ಚೆಗಳೂ ಆದವು.

ಹಿಂದಿನ ಕಾಲದಲ್ಲಿ ಕುರಿ, ದನ ಕಾಯುವವರು, ಹಿರಿಯರು, ನಿಶ್ಯಕ್ತರು ಕೈಯಲ್ಲೊಂದು ಕೋಲು ಹಿಡಿದು ಓಡಾಡುತ್ತಿದ್ದರು. ಈಗ ಗಟ್ಟಿಮುಟ್ಟಾಗಿರುವ ಯುವಕ ಯುವತಿಯರೂ ಕೈಯಲ್ಲಿ ಕೋಲು ಹಿಡಿದು ಓಡಾಡುತ್ತಿದ್ದಾರೆ. ಇದು ವಾಕಿಂಗ್‌ ಸ್ಟಿಕ್‌ ಅಲ್ಲ, ಸೆಲ್ಫಿ ಸ್ಟಿಕ್‌! ನಿಮ್ಮ ಸೆಲ್ಫಿಗೆ ಕಂಫ‌ರ್ಟ್‌ ಎನಿಸುವ ಮತ್ತು ಅದಕ್ಕೆಂದೇ ತಯಾರಿಸಿದ ಕಡ್ಡಿ. ಉದ್ದ, ಗಿಡ್ಡ ಹೀಗೆ ನಿಮ್ಮ ಅಳತೆಗೆ ಅನುಕೂಲವಾಗುವಂತೆ ಮಾಡಿಕೊಂಡು, ಒಂದು ತುದಿಗೆ ಮೊಬೈಲ್‌ ಫೋನ್‌ ಸಿಕ್ಕಿಸಿಕೊಂಡು, ಬ್ಲೂಟೂತ್‌ ಸಹಾಯದಿಂದ ಕೈಯಲ್ಲಿರುವ ಹಿಡಿಕೆಯ ಬಟನ್‌ ಅದುಮಿದರೆ ಸಾಕು, ಹಲ್ಲು ಬಿಟ್ಟಿರುವ ನಿಮ್ಮ ಮುಖ ಮೂಡಿದ ಚಿತ್ರ ಸೆರೆಯಾಗಿರುತ್ತದೆ. ಇಲ್ಲಿ ಸೆ¾„ಲ್‌ ಪ್ಲೀಸ್‌ ಅಂತ ನಿಮ್ಮಷ್ಟಕ್ಕೆ ನೀವೇ ಹೇಳಿಕೊಳ್ಳಬೇಕಿದೆ. ಹಿಂದೆಲ್ಲಾ ಆಗಿದ್ದರೆ ಕ್ಯಾಮೆರಾ ಹಿಡಿದು “ಸೆ¾„ಲ್‌ ಪ್ಲೀಸ್‌…’ ಎಂದು ಹೇಳಿ ಚಿತ್ರವಿಚಿತ್ರವಾಗಿ ಸನ್ನೆ ಮಾಡುತ್ತಿದ್ದ ಫೋಟೊಗ್ರಾಫ‌ರ್‌ ಮಾತಿಗಾದರೂ ಒಳಗಿನಿಂದ ಒಂದು ನಗು ಬಂದು ಬಿಡುತ್ತಿತ್ತು. ಈಗ ಕೈಯಲ್ಲಿರುವ ಕಡ್ಡಿಗಾದರೂ ಬಲವಂತಕ್ಕೆ ಎರಡು ಹಲ್ಲುಗಳನ್ನು ಕಾಣಿಸಬೇಕಿದೆ.

Advertisement

ಬದಲಾವಣೆ ಒಳ್ಳೆಯದೇ. ಆದರೆ, ಎಲ್ಲಾ ಬದ‌ಲಾವಣೆಗಳೂ ಒಳ್ಳೆಯವೆಂದು ಹೇಳುವುದು ಹೇಗೆ? ಸೆಲ್ಫಿಯನ್ನು ಸರಳಗೊಳಿಸಲು ಸೆಲ್ಫಿ ಸ್ಟಿಕ್‌ ಬಂದಿದೆ ಎನ್ನುವುದೇನೋ ನಿಜ. ಆದರೆ ಅದನ್ನು ಯಾವಾಗಲೂ ಜೊತೆಯಲ್ಲಿ ಇಟ್ಟುಕೊಂಡು ಓಡಾಡುವುದು ಲಕ್ಷಣವಲ್ಲ. ತೆಗೆದುಕೊಂಡು ಇಟ್ಟುಕೊಳ್ಳಿ. ಅದರಿಂದ ಇನ್ನೊಬ್ಬರಿಗೆ ಕಿರಿಕಿರಿ ಬೇಡ. ಅದರ ಗೀಳಿಗೆ ಬಿದ್ದರೆ ಅಪಾಯ ಖಂಡಿತಾ. 

ಸೆಲ್ಫಿ ತಗೆದುಕೊಳ್ಳುವಾಗ ನಮ್ಮ ಗಮನ ಸೆಲ್ಫಿ ಸ್ಟಿಕ್‌ ಮೇಲೆ, ಮೊಬೈಲ್‌ ಪರದೆಯ ಮೇಲೆಯೇ ಇರುತ್ತದೆ. ಯಾವ ಜಾಗದಲ್ಲಿ ನಿಂತಿದ್ದೇವೆ ಎನ್ನುವುದರ ಪರಿವೇ ಇರುವುದಿಲ್ಲ. ಸೆಲ್ಫಿ ತೆಗೆಯಲು ಹೋಗಿ ಅಪಾಯ ತಂದುಕೊಂಡವರ ಸುದ್ದಿಗಳು ದಿನಪತ್ರಿಕೆಗಳಲ್ಲಿ ಹಾಜರಿ ಹಾಕುತ್ತಲೇ ಇವೆ.

ಯಾವುದೇ ತಂತ್ರಜ್ಞಾnನವಾಗಲಿ, ಆವಿಷ್ಕಾರವಾಗಲಿ ನಾವು ಹೇಳಿದಂತೆ ಅದು ಕೇಳಬೇಕೇ ಹೊರತು ಅದು ನಮ್ಮನ್ನು ನಿಯಂತ್ರಿಸುವಂತಾಗಬಾರದು. ನಮ್ಮ ಬುದ್ಧಿ ನಮ್ಮ ಕೈಯಲ್ಲೇ ಇರಬೇಕು. ಸೆಲ್ಫಿ ಕ್ರಮೇಣ ಒಂದು ರೀತಿಯ ಮಾನಸಿಕ ರೋಗಕ್ಕೆ ತೆರೆದುಕೊಳ್ಳಬಹುದು. ಸೆಲ್ಪಿ ಸ್ಟಿಕ್‌ ಹಿಡಿದು ಹಿಡಿದು ಅಭ್ಯಾಸವಾಗಿ ನಂತರ ಅದಿಲ್ಲದೇ ನಿಮಗೆ ಗಲಿಬಿಲಿಗೊಂಡಂತಾಗಿ ಮಾನಸಿಕವಾಗಿ ಕಾಡಬಹುದು.

ಮನುಷ್ಯ ಆಧುನಿಕ ಜಗತ್ತಿನಲ್ಲಿ ಮೊದಲೇ ಒಂಟಿಯಾಗುತ್ತಿದ್ದಾನೆ. ಅದಕ್ಕೆ ಇನ್ನೂ ಇಂಬು ಕೊಡುವ ಕೆಲಸವನ್ನು ಸೆಲ್ಫಿ ಮಾಡುತ್ತಿದೆ. ಅದನ್ನು ಮಿತವಾಗಿ ಬಳಸಿ ಎಲ್ಲರೊಂದಿಗೆ ಸೇರಿ ಸೆ¾„ಲ್‌ ಪ್ಲೀಸ್‌ ಅನ್ನಿಸಿಕೊಂಡು ಒಂದು ಗ್ರೂಪ್‌ ಫೋಟೋ ತೆಗೆಸಿಕೊಳ್ಳುವುದರಲ್ಲಿ ಇರುವ ಖುಷಿ ಸಾವಿರ ಸೆಲ್ಫಿಗಳಲ್ಲಿ ಇಲ್ಲ ಅಲ್ಲವೇ, ಏನಂತೀರಿ!?

– ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next