Advertisement

Madikeri ಅಪಾಯ ಆಹ್ವಾನಿಸುವ ಪ್ರವಾಸಿಗರ ಸೆಲ್ಫಿ , ರೀಲ್ಸ್‌ ಗೀಳು!

12:01 AM May 28, 2024 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕೆಲವು ಪ್ರದೇಶಗಳಲ್ಲಿ ಪ್ರವಾಸಿಗರ ನಿರ್ಲಕ್ಷ್ಯದ ನಡೆ ಅಪಾಯವನ್ನು ಆಹ್ವಾನಿಸುತ್ತಿದೆ.

Advertisement

ನಗರದ ಜನರಲ್‌ ತಿಮ್ಮಯ್ಯ ವೃತ್ತದ ಮೂಲಕ ಮಂಗಳೂರು ರಸ್ತೆ ಕಡೆಗೆ ತೆರಳುವ ಮಾರ್ಗದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಪ್ರದೇಶ ಇದೀಗ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಾಜಾಸೀಟು ಉದ್ಯಾನವನದ ಬೆಟ್ಟದ ಕೆಳಗಿರುವ ಈ ತಡೆಗೋಡೆಯ ಅಪಾಯಕಾರಿ ಪ್ರದೇಶ ಸಾವಿರ ಅಡಿಗೂ ಹೆಚ್ಚು ಪ್ರಪಾತವನ್ನೂ ಹೊಂದಿದೆ.

ಇದರ ಅರಿವಿಲ್ಲದ ಪ್ರವಾಸಿಗರು ಇಲ್ಲಿ ನಿಂತು ತಮ್ಮ ಮೊಬೈಲ್‌ ಕೆಮರಾಗಳ ಮೂಲಕ ಪರಿಸರದ ಸೊಬಗನ್ನು ಸೆರೆ ಹಿಡಿಯುತ್ತಿದ್ದಾರೆ. ಜತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಪ್ರವಾಸಿಗರ ಈ ನಡೆ ಅತ್ಯಂತ ಅಜಾಗರೂಕತೆಯಿಂದ ಕೂಡಿದೆ.ಕೆಲವರು ತಡೆಗೋಡೆ ತುತ್ತ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿದರೆ ಮತ್ತೆ ಕೆಲವರು, ರೀಲ್ಸ್‌ ಮಾಡೋ ನೆಪದಲ್ಲಿ ಹುಚ್ಚು ಧೈರ್ಯ ತೋರುತ್ತಿದ್ದಾರೆ. ಯುವಕ, ಯುವತಿಯರು ಮಾತ್ರವಲ್ಲದೆ ದಂಪತಿಗಳು ಕೂಡ ಚಿಕ್ಕ ಮಕ್ಕಳೊಂದಿಗೆ ಫೋಟೋಗಳಿಗೆ ಪೋಸು ನೀಡುತ್ತಾ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ.

ತಡೆಗೋಡೆಯ ಸ್ಥಳದಿಂದ ನಿಂತು ನೋಡಿದರೆ ಕಣ್ಣು ಹಾಯಿಸಿದಷ್ಟು ದೂರದವರೆಗೆ ಹಚ್ಚ ಹಸಿರ ಪರಿಸರ, ಭತ್ತದ ಗದ್ದೆ ಬಯಲುಗಳ ಸಹಿತ ಮಂಜು ಮುಸುಕಿದ ವಾತಾವರಣ ಸ್ವರ್ಗದಂತೆ ಗೋಚರಿಸುತ್ತದೆ. ಈ ದೃಶ್ಯ ನೋಡಲು ಎಷ್ಟು ಸುಂದರವಾಗಿದೆಯೋ ಅದಕ್ಕಿಂತ ದುಪ್ಪಟ್ಟು ಅಪಾಯವೂ ಇಲ್ಲಿದೆ. ಈ ಪ್ರದೇಶ ಕಣಿವೆ ಮಾದರಿಯಲ್ಲಿದ್ದು, ಬಲವಾದ ಗಾಳಿಯೂ ಬೀಸುತ್ತದೆ. ತಡೆಗೋಡೆಯ ಮೇಲೆ ಯಾವುದೇ ರೀತಿಯ ಸುರಕ್ಷಾ ಬೇಲಿಗಳಿಲ್ಲದ ಕಾರಣ ಸ್ವಲ್ಪ ಎಡವಿದರೂ ಬದುಕುಳಿಯುವ ಸಾಧ್ಯತೆ ಇಲ್ಲಿಲ್ಲ.

Advertisement

2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕುಸಿಯುವ ಅಪಾಯದಲ್ಲಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೋಟ್ಯಂತರ ರೂ.ಗಳಲ್ಲಿ ಸದೃಢವಾದ ತಡೆಗೋಡೆ ನಿರ್ಮಿಸಿದೆ. ಕಾಮಗಾರಿ ಪೂರ್ಣಗೊಂಡ ಅನಂತರ‌ ಅತ್ತ ಕಡೆ ಯಾರೂ ತೆರಳದಂತೆ ಬಿದಿರಿನ ಬೇಲಿ ಹಾಕಲಾಗಿತ್ತು. ಗಾಳಿ, ಮಳೆಗೆ ಬೇಲಿ ಇನ್ನಿಲ್ಲವಾಗಿದ್ದು, ಪ್ರವಾಸಿಗರಿಗೆ ಈ ಪ್ರದೇಶ ಮುಕ್ತವಾಗಿದೆ. ಇಲ್ಲಿ ಮದ್ಯದ ಬಾಟಲಿಗಳು ಬಿದ್ದಿದ್ದು, ಪ್ರವಾಸಿಗರ ವರ್ತನೆ ಮಿತಿ ಮೀರುತ್ತಿರುವುದಕ್ಕೆ ಸಾಕ್ಷಿ ಹೇಳುತ್ತಿವೆ.

ಪೊಲೀಸರಿಂದ ಕ್ರಮ
ಪ್ರವಾಸಿಗರು ಅಪಾಯದೊಂದಿಗೆ ಚೆಲ್ಲಾಟವಾಡುತ್ತಿದ್ದ ದೃಶ್ಯವನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿದ್ದವರಿಗೆ ಬುದ್ಧಿ  ಹೇಳಿ ಕಳುಹಿಸಿದ್ದಾರೆ. ಕೆಲವರು ಹೆದ್ದಾರಿ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ಇತರ ವಾಹನ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದ ಕಾರಣ ಎಲ್ಲ ವಾಹನಗಳನ್ನು ಸ್ಥಳದಿಂದ ತೆರವು ಮಾಡಿದ್ದಾರೆ. ಬಳಿಕ ಅಪಾಯಕಾರಿ ಪ್ರದೇಶಕ್ಕೆ ಯಾರೂ ಸುಳಿಯದಂತೆ ಎಚ್ಚರಿಕೆಯ ಟೇಪ್‌ ಅನ್ನು ಅಳವಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next