Advertisement
ಪೌರಾಣಿಕ ಹಿನ್ನೆಲೆಕೇರಳ ಕರ್ನಾಟಕ ಗಡಿಪ್ರದೇಶದ ಬಣಾ¤ಜೆಯಲ್ಲಿದೆ ಜಾಂಬ್ರಿ ಅಥವಾ ಸ್ವಯಂಭೂ ಗುಹೆ. ಮಹಾಲಿಂಗೇಶ್ವರ ದೇವಸ್ಥಾನದ ಮೂಲ ಸ್ಥಾನವಾಗಿರುವ ಈ ಗುಹೆಯು ಶ್ರೀ ಕ್ಷೇತ್ರದ ಇತಿಹಾಸವನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡು ಕಲಿಯುಗದ ವಿಸ್ಮಯವಾಗಿ ಕಂಡುಬರುತ್ತದೆ. ಹಿಂದೆ ಶಿವಭಕ್ತನಾದ ಖರಾಸುರನೆಂಬ ರಾಕ್ಷಸನು ತನ್ನ ಕಠಿನ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡು ಮೂರು ಶಿವಲಿಂಗಗಳನ್ನು ಪಡೆದು ಗುಹಾ ಮಾರ್ಗವಾಗಿ ತನ್ನ ರಾಜ್ಯಕ್ಕೆ ಹೊರಟನು. ಆ ಲಿಂಗಗಳ ಮೂರನೇ ಕಣ್ಣಿನಿಂದ ಹೊರಸೂಸುತ್ತಿದ್ದ ದಿವ್ಯ ಪ್ರಭೆ ಖರಾಸುರನಿಗೆ ದಾರಿತೋರುತ್ತಿತ್ತು. ಎರಡು ಶಿವಲಿಂಗಗಳು ಖರಾಸುರನ ಕೈಗಳಲ್ಲೂ ಇನ್ನೊಂದನ್ನು ತನ್ನ ಬಾಯಲ್ಲಿಟ್ಟು ಕೊಂಡೊಯ್ಯುತ್ತಿರುವಾಗ ಖರಾಸುರನಿಗೆ ತನ್ನ ರಾಜ್ಯ ತಲುಪಿತೇ ಎಂಬ ಸಂದೇಹ ಮೂಡಲು ಅವನು ತಲೆಯೆತ್ತಿ ನೋಡಿದನು. ಮನದ ಏಕಾಗ್ರತೆ ಸಡಿಲಗೊಂಡಂತೆ ಶಿವಲಿಂಗ ಭಾರ ವಾಯಿತು. ಹಾಗೆಯೇ ಬಾಯಿಯಲ್ಲಿದ್ದ ಶಿವಲಿಂಗವು ಭೂಮಿಗೆ ಬಿದ್ದು ಬೃಹದಾಕಾರವಾಗಿ ಬೆಳೆದು ಮಾಯವಾಯಿತು. ಅಷ್ಟರಲ್ಲಿ ಮಹಾ ಕಾರ್ಯಸ್ತ ಗುಳಿಗನು ದಾರಿ ತೋರುವನೆಂಬ ಅಶರೀರವಾಣಿ ಮೊಳಗಿತು. ಅದರಂತೆ ಗುಳಿಗ ಹಾಗೂ ಶಂಖವಾಳ ಸರ್ಪ ಜತೆಯಾಗಿ ಅವನಿಗೆ ದಾರಿ ತೋರಿದರು. ಗುಳಿಗನ ಸಲಹೆಯಂತೆ ಎಡಗೈ ಲಿಂಗವನ್ನು ಬೆಟ್ಟಂಪಾಡಿಯಲ್ಲೂ ಬಲಗೈ ಲಿಂಗವನ್ನು ಆಲಂಗೋಡ್ಲು ಎಂಬಲ್ಲಿಯೂ ಪ್ರತಿಷ್ಠಾಪಿಸಿದನು. ಅಂತೆಯೇ ಶಿವಲಿಂಗ ಮಾಯವಾದ ಸ್ಥಳದಿಂದ ಸುಮಾರು ಒಂದು ರಹದಾರಿಯಷ್ಟು ಪೂರ್ವದಲ್ಲಿ ಶಿವನ ಅಣತಿ ಯನ್ನು ಕಾಯುತ್ತಿರುವ ಮಹಾಕಾರ್ಯಸ್ಥ ಗುಳಿಗನು ಪಶ್ಚಿಮಾಭಿಮುಖವಾಗಿ ನಿಂತಿರುವು ದನ್ನು ಕಂಡು ಖರನು ಸಂತುಷ್ಟನಾದನು. ತುಂಬಿದ ಭಕ್ತಿಭಾವದಿಂದ ಕೈಜೋಡಿಸಿ ನಮಿಸಿ, ಸಾಷ್ಟಾಂಗವೆರಗಿದನು. ಅಭಿಷೇಕ, ಅರ್ಚನಾದಿ ಗಳನ್ನು ಸಲ್ಲಿಸಿ ತೃಪ್ತಿಗೊಂಡನು. ಹೀಗೆ ಕಾಶಿಯಿಂದ ಹೊರಟ ಶಿವನು ಗವಿಯಿಂದ ಹೊರಬಂದ ಪ್ರದೇಶವೇ ಜಾಂಬ್ರಿ.
ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಸ್ವಯಂಭೂ ಗುಹಾ ಪ್ರವೇಶ ಕಾರ್ಯಕ್ರಮದಲ್ಲಿ ಗುಹೆಯನ್ನು ಮೊದಲು ಪ್ರವೇಶಿಸುವವರು ಕಾಪಾಡರು. ನಿಟ್ಟೋಣಿಯ ವಂಶಸ್ಥರಾದ ಸಂಬಂಧ ಕಟ್ಟುಪಾಡುಗಳಿಂದ ಮುಕ್ತರಾಗಿ 48 ದಿನಗಳ ಕಠಿನ ವ್ರತಾಚರಣೆಯನ್ನು ಪಾಲಿಸುವುದು ಪದ್ಧತಿ. ದೇವಾಲಯದ ಪಕ್ಕದಲ್ಲಿ ವಿಶೇಷವಾಗಿ ನಿರ್ಮಿಸಿದ ಗುಡಾರದಲ್ಲಿ ಶಿವನಾಮ ಪಠಿಸುತ್ತಾ ತಮ್ಮನ್ನು ಸಂಪೂರ್ಣವಾಗಿ ಶಿವನಿಗೆ ಅರ್ಪಿಸಿಕೊಂಡ ಅವರನ್ನು ಕಾಪಾಡರು ಎಂದೇ ಕರೆಯಲಾಗುತ್ತದೆ. ಅವರ ಮೂಲ ಹೆಸರು ಕರೆಯುವಂತಿಲ್ಲ. ದೇವಾಲಯದಿಂದ ಒದಗಿಸುವ ಆಹಾರದ ಹೊರತು ಬೇರೇನನ್ನೂ ಇವರು ಸೇವಿಸುವುದಿಲ್ಲ. ಜಾಂಬ್ರಿ ಗುಹಾಪ್ರವೇಶದ ದಿನ ಇವರು ಬಿಳಿವಸ್ತ್ರ ಉಟ್ಟು ಮುಸುಕುಧಾರಿಗಳಾಗಿ ದೊಂದಿ ಹಿಡಿದು ಗುಹಾಪ್ರವೇಶ ಯಾತ್ರೆಯ ಮುಂಚೂಣಿಯಲ್ಲಿ ಇರುತ್ತಾರೆ. ಈ ಬಾರಿ ಮೊದಲ ಬಾರಿಗೆ ಗುಹಾ ಪ್ರವೇಶ ಮಾಡುವ ಆನಂದ ಕಾಪಾಡರು ಹಾಗೂ ಈ ಹಿಂದೆ ನಡೆದ ಗುಹಾಪ್ರವೇಶೋತ್ಸವದಲ್ಲಿ ಭಾಗವಹಿಸಿ ಮತ್ತೂಮ್ಮೆ ಆ ಭಾಗ್ಯವನ್ನು ಪಡೆದುಕೊಂಡ ಬಾಬು ಕಾಪಾಡರು ಈಗಾಗಲೇ ವ್ರತಾಚರಣೆಯಲ್ಲಿದ್ದಾರೆ. ಗುಹಾಪ್ರವೇಶ
ಮೊದಲಿಗೆ ವ್ರತಸ್ಥರಾದ ಇಬ್ಬರು ಕಾಪಾಡರು ದೊಂದಿಗಳಲ್ಲದೆ ಬೋಳ್ ಸರೋಳಿ ಸೊಪ್ಪಿನ ಸೂಡಿಗಳನ್ನು ಧರಿಸಿ ಗುಹೆಯನ್ನು ಪ್ರವೇಶಿಸುತ್ತಾರೆ. ಕುಳದಪಾರೆ ಮಣಿಯಾಣಿ ಮನೆತನದವರು ದೊಂದಿ ಉರಿಸಿಕೊಡುವರು. ಅವರ ಪ್ರಯಾಣ ಎಷ್ಟು, ಏನೇನು ಎನ್ನುವುದು ಅವರಿಗೆ ಮಾತ್ರ ಗೊತ್ತು. ಆ ಬಗ್ಗೆ ಉಳಿದವರಿಗೆ ಹೇಳಬಾರದು ಎಂಬುದು ನಿಯಮ. ಸುಮಾರು ಒಂದೂವರೆ ಎರಡು ಗಂಟೆ ಕಳೆದು ಬಿಳಿ ಬಟ್ಟೆಯಲ್ಲಿ ಸುತ್ತಿದ ಮಾರಾಪಿನೊಂದಿಗೆ ಹೊರಬರುತ್ತಾರೆ. ಅದನ್ನು ಮುಂಡೂರು ವನದಲ್ಲಿ ಹೂತುಹಾಕಲಾಗುತ್ತದೆ. ಕಾಪಾಡರು ಹೊರಬಂದ ಬಳಿಕ ಸ್ಥಾನಿಕರು ಕೈದೀಪ ಹಿಡಿದು ಗೌರವದಿಂದ ತಂತ್ರಿಗಳಿಗೆ ಗುಹಾಮಾರ್ಗ ತೋರಿಸುತ್ತಾರೆ. ದೇವಾಲಯದಿಂದ ಅರ್ಚಿತ ಕಲಶವನ್ನು ತಂತ್ರಿಗಳು ಕೊಂಡೊಯ್ಯುತ್ತಾರೆ. ಮಹಾಮೃತ್ತಿಕಾ ಪ್ರಸಾದದೊಂದಿಗೆ ಅವರೂ ಸುಮಾರು ಒಂದೂವರೆ ಗಂಟೆಗಳಲ್ಲಿ ಹೊರಬರುತ್ತಿದ್ದಂತೆ ಶಿವನಾಮೋಚ್ಛಾರಣೆ ಮುಗಿಲು ಮುಟ್ಟುತ್ತದೆ. ಅಲ್ಲಿ ನೆರೆದಿರುವ ಭಕ್ತಾದಿಗಳಿಗೆ ಮೃತ್ತಿಕಾ ಪ್ರಸಾದವನ್ನು ಹಂಚಲಾಗುತ್ತದೆ. ಅಂತೆಯೇ ಅಲ್ಲೇ ತಯಾರಿಸಿದ ಗಂಜಿಯನ್ನೂ ಪ್ರಸಾದ ರೂಪದಲ್ಲಿ ಹಂಚುವುದು ರೂಢಿ. ಅನಂತರ ದೇವಸ್ಥಾನಕ್ಕೆ ಯಾತ್ರೆ ಪ್ರಾರಂಭ.
Related Articles
ಕುಂಬಳೆ ಸೀಮೆಯಲ್ಲಿ ಮಂತ್ರ ತಂತ್ರಗಳಿಗೆ ಕುಂಟಾರು ಮನೆತನ ಪ್ರಸಿದ್ಧಿ. ಈ ಮನೆತನದವರೇ ನೆಟ್ಟಣಿಗೆ ಕ್ಷೇತ್ರದ ಪಾರಂಪರಿಕ ತಂತ್ರಿವರ್ಯರು. ಇವರ ಹಿರಿಯರು ಎಡಪದವು ಮನೆತನದವರು. ಇವರಲ್ಲಿ ಕುಂಟಾರು ಸುಬ್ರಾಯ ತಂತ್ರಿಗಳು ಮಂತ್ರ ಸಿದ್ಧಿಯ ಬಗ್ಗೆ ಅಪಾರ ಜ್ಞಾನವನ್ನು ಪಡೆದವರು. ಸ್ವಯಂಭೂ ಗುಹೆಗೆ ಮೂರು ಬಾರಿ ಹೋಗಿ ಬಂದವರು. ಈ ಬಾರಿ ಅವರ ಮಕ್ಕಳಾದ ವಾಸುದೇವ ತಂತ್ರಿ ಹಾಗೂ ರವೀಶ ತಂತ್ರಿಗಳು ಈ ಕಾರ್ಯವನ್ನು ನಡೆಸಿಕೊಡುವರು.
Advertisement
ಕ್ಷೇತ್ರದ ವೈಶಿಷ್ಟ್ಯಗಳು ಶ್ರೀ ಕ್ಷೇತ್ರದ ರಕ್ಷಕನಾಗಿ ಶಂಖವಾಳ ಎಂಬ ನಾಗನಿದ್ದು ಪಕ್ಕದಲ್ಲಿರುವ ಕೆರೆಯಲ್ಲಿರುವ ಮೀನಿನ ಹೊಳೆಯುವ ಮೂಗುತಿ ಇಲ್ಲಿನ ಇನ್ನೊಂದು ವಿಸ್ಮಯ. ಅಂತೆಯೇ ಚೆಂಡೆತ್ತಡ್ಕದಲ್ಲಿರುವ ವನದಲ್ಲಿ ಬಿಳಿ ಆಮೆಗಳಿರುವುದೂ ಇಲ್ಲಿನ ಇನ್ನೊಂದು ವಿಶೇಷತೆ. ಬಾವಿ ಹಗ್ಗದ ಹರಕೆಯು ಇಲ್ಲಿನ ಪ್ರಧಾನ ಹರಕೆ. ಹಲವಾರು ಭಕ್ತರ ಸಂಕಟಗಳಿಗೆ, ರೋಗ ಬಾಧೆಗಳಿಗೆ ಈ ಹರಕೆಯಿಂದ ಫಲ ದೊರೆತಿದ್ದು ಜನರ ವಿಶ್ವಾಸವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬ್ರಿಟಿಷರಿಂದ ಅನುಮತಿ
ಪಾನಾಜೆ ಸುರಕ್ಷಿತಾರಣ್ಯ ಆದರೂ ಗುಹಾ ಪ್ರದೇಶದಲ್ಲಿ ಮರಗಳನ್ನು ಕಡಿಯಲು, ಚಪ್ಪರ ಹಾಕಲು 1915ರಲ್ಲೇ ಬ್ರಿಟಿಷರು ಅನುಮತಿಸಿದ್ದ ಲಿಖೀತ ದಾಖಲೆಯೂ ಇದೆ. ಅತಿರುದ್ರ ಮಹಾಯಾಗ
ಈ ಬಾರಿ ಸ್ವಯಂಭೂ ಗುಹಾಪ್ರವೇಶದೊಂದಿಗೆ ಶ್ರೀ ಕ್ಷೇತ್ರದಲ್ಲಿ ಶಿವನಿಗೆ ಅತೀ ವಿಶೇಷವಾಗಿರುವ ಅತಿರುದ್ರ ಮಹಾಯಾಗವು ಬ್ರಹ್ಮಶ್ರೀ ಪರಮೇಶ್ವರ ಭಟ್ ಪಳ್ಳತ್ತಡ್ಕ ಅವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿದ್ದು ಸಾಧಾರಣ ಒಂದು ಲಕ್ಷದಷ್ಟು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜತೆಗೆ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ತಯಾರಿ ಭರದಿಂದ ಸಾಗುತ್ತಿದ್ದು ಈ ಮಹತ್ಕಾರ್ಯವು ಚರಿತ್ರೆಯ ಪುಟಗಳಲ್ಲಿ ದಾಖಲಾಗುವುದರಲ್ಲಿ ಸಂದೇಹವಿಲ್ಲ. ನಿಟ್ಟೋಣಿಗೆ ಶಿವನೊಲಿದಾಗ
ಅದು ಬಲ್ಲಾಳರ ಆಳ್ವಿಕೆಯ ಕಾಲ. ಬಣಾ¤ಜೆ ಹುಲ್ಲುಗಾವಲಿನಲ್ಲಿ ನರೆಗಡ್ಡೆಯನ್ನು ತೆಗೆಯುತ್ತಿದ್ದ ನಿಟ್ಟೋಣಿಯ ಕತ್ತಿ ತಾಗಿದ ಕಲ್ಲೊಂದರಲ್ಲಿ ರಕ್ತ ಚಿಮ್ಮಿತು. ವಿಷಯ ಬಲ್ಲಾಳರಿಗೆ ತಲುಪಿತು. ಕೂಡಲೆ ತನ್ನವರೊಂದಿಗೆ ಅಲ್ಲಿಗೆ ತಲುಪಿದ ಬಲ್ಲಾಳರು ದೈವಜ್ಞ ಪ್ರಶ್ನೆಯ ನೆರವಿನಿಂದ ಹಿನ್ನೆಲೆಯನ್ನು ಅರಿತು ಆ ಪುಣ್ಯಭೂಮಿಯಲ್ಲಿ ದೇವಸ್ಥಾನವನ್ನು ಕಟ್ಟಿಸಿ ವಿಧಿವಿಧಾನಗಳಿಂದ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾದಿಗಳನ್ನು ನೆರವೇರಿಸಿದರು. ಅದೇ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ನಿಟ್ಟೋಣಿಗೆ ಶಿವದರ್ಶನ ಭಾಗ್ಯ ದೊರೆತ ಕಾರಣ ಆ ಸ್ಥಳವನ್ನು ನೆಟ್ಟಣಿಗೆ ಎಂದು ನಾಮಕರಣ ಮಾಡಲಾಯಿತು. ಮಾತ್ರವಲ್ಲದೆ ನಿಟ್ಟೋಣಿಯ ವಂಶಸ್ಥರು ಗುಹಾಪ್ರವೇಶ ಮಾಡುವ ಭಾಗ್ಯವನ್ನೂ ಪಡೆದುಕೊಂಡರು. – ಅಖೀಲೇಶ್ ನಗುಮುಗಂ