ಕೋಟ: ದೇವಮಾನವ ಎಂದು ಕರೆದುಕೊಳ್ಳುತ್ತಿದ್ದ ಕುಂದಾಪುರ ಮೂಲದ ಯೋಗ ಗುರು ಹಾಗೂ ಜೋತಿಷಿಯೊಬ್ಬ ಗೋವಾದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದು, ವಾಸ್ಕೊ ಪೊಲೀಸರು ಆತನ ಪತ್ತೆಗಾಗಿ ಹುಟ್ಟೂರು ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಗಾವಳಿಗೆ ಶನಿವಾರ ಭೇಟಿ ನೀಡಿ ಶೋಧ ನಡೆಸಿದ್ದಾರೆ.
ಬಿದ್ಕಲ್‌ಕಟ್ಟೆ ಸಮೀಪ ಗಾವಳಿಯ ನಿವಾಸಿ ರವಿಶಂಕರ್ ಈ ಪ್ರಕರಣದ ಆರೋಪಿ. ಈತ ಈ ಹಿಂದೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಯೋಗ, ವಾಸ್ತುಶಾಸ್ತ್ರ, ಜೋತಿಷದಲ್ಲಿ ಪಾಂಡಿತ್ಯ ಹೊಂದಿದ್ದೇನೆ ಎಂದು ಜನರನ್ನು ನಂಬಿಸುತ್ತಿದ್ದ ಹಾಗೂ ಸ್ವಲ್ಪ ಸಮಯದ ಹಿಂದೆ ಗೋವಾಕ್ಕೆ ತೆರಳಿ ಅನುಯಾಯಿಗಳೊಂದಿಗೆ ತನ್ನ ಚಟುವಟಿಕೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಘಟನೆಯ ಹಿನ್ನೆಲೆ: ದೌರ್ಜನ್ಯಕ್ಕೊಳಗಾದ 19ರ ಹರೆಯದ ಯುವತಿ ಮೂಲತಃ ಮಹಾ ರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಆಕ್ರಾದವಳಾ ಗಿದ್ದು,ಪ್ರಸ್ತುತ ಗೋವಾದ ವಾಸ್ಕೊದಲ್ಲಿ ನೆಲೆಸಿದ್ದಳು. ಈಕೆಗೆ ಪರಿಚಿತನಾದ ಕರ್ನಾಟಕದ ನಿಪ್ಪಾಣಿಯ ಸಂತೋಷ್ ಕುಂಭಾರ್ ಎಂಬಾತ ತವರೂರು ಆಕ್ರಾಗೆ ಬಿಡುವುದಾಗಿ ಹೇಳಿ ವಾಹನ ಹತ್ತಿಸಿಕೊಂಡು ಮಾರ್ಗಮಧ್ಯದಲ್ಲಿ ಆಕೆಗೆ ತಂಪು ಪಾನೀಯದಲ್ಲಿ ಮಾದಕ ದ್ರವ್ಯ ಬೆರೆಸಿ ಕುಡಿಸಿ ಗೋವಾದ ಮಪುಸಾದ ಮನೆಯೊಂದಕ್ಕೆ ಕರೆತಂದಿದ್ದ. ಇಲ್ಲಿ ರವಿಶಂಕರ್ ಆಕೆಯ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿದ್ದಾಳೆ.
ಕುಂಭಾರ್ ಪರಿಚಿತ ಎಂಬ ವಿಶ್ವಾಸದಿಂದ ಶುಕ್ರವಾರ ಯುವತಿ ಅವನ ಜತೆಗೆ ಹುಟ್ಟೂರಿಗೆ ಕಾರಿನಲ್ಲಿ ಹೊರಟಿದ್ದಳು.ಆದರೆ ಈ ವಿಶ್ವಾಸವೇ ಅವಳಿಗೆ ಮುಳುವಾಗಿದೆ. ಮಾದಕ ದ್ರವ್ಯ ಬೆರೆಸಿದ ತಂಪು ಪಾನೀಯ ಕುಡಿದು ಪ್ರಜ್ಞೆ ತಪ್ಪಿದ ಯುವತಿಯನ್ನು ಸಂತೋಷ್ ಮಪುಸಾದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆರೋಪಿ ರವಿಶಂಕರ್ ಮತ್ತು ಹಿಂಬಾಲಕ ನಿಖೀಲ್ ಚವಾಣ್ ಮೊದಲೇ ಈ ಮನೆಯಲ್ಲಿ ಇದ್ದರು. ಯುವತಿಯನ್ನು ಮನೆಯೊಳಗೆ ಬಿಟ್ಟ ಬಳಿಕ ಸಂತೋಷ್ ಕುಂಭಾರ್ ಮತ್ತು ನಿಖೀಲ್ ಚವಾಣ್ ಹೊರಗೆ ಹೋಗಿದ್ದಾರೆ. ಅನಂತರ ರವಿಶಂಕರ್ ಅತ್ಯಾಚಾರ ಎಸಗಿ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸುಮ್ಮನೆ ಬಿಡುವು ದಿಲ್ಲ ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಹುಟ್ಟೂರಿನಲ್ಲಿ ಶೋಧ: ಈ ಕುರಿತು ವಾಸ್ಕೊ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ಅಲ್ಲಿನ ಪೊಲೀಸರು ಶನಿವಾರ ಆತನ ಹುಟ್ಟೂರು ಬಿದ್ಕಲ್‌ಕಟ್ಟೆ ಸಮೀಪ ಗಾವಳಿಗೆ ಭೇಟಿ ನೀಡಿ ಶೋಧ ನಡೆಸಿದ್ದಾರೆ. ಅಲ್ಲಿ ಆರೋಪಿಯ ಕುರಿತು ಯಾವುದೇ ಮಾಹಿತಿ ಸಿಗದಿರುವುದರಿಂದ ಗೋವಾಕ್ಕೆ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ. ಜೋತಿಷಿಯ ವಿರುದ್ಧ ಅತ್ಯಾಚಾರ, ವಿಷಪ್ರಾಶನ ಮತ್ತು ಸಂತೋಷ್ ಕುಂಭಾರ್ ಹಾಗೂ ನಿಖೀಲ್ ಚವಾಣ್ ವಿರುದ್ಧ ಅತ್ಯಾಚಾರಕ್ಕೆ ಸಹಕರಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ.
ಆರೋಪಿಯನ್ನು ಹುಡುಕಿಕೊಂಡು ಬಂದಿದ್ದ ವಾಸ್ಕೊ ಪೊಲೀಸರು ರವಿಶಂಕರ್‌ನ ಆಶ್ರಮ ಹಾಗೂ ಇತರ ಸ್ಥಳಗಳಲ್ಲಿ ಹುಡುಕಾಡಿದ್ದಾರೆ. ಆದರೆ ರವಿಶಂಕರ್ ಅವರ ಕೈಗೆ ಸಿಕ್ಕಿಲ್ಲ. ಕುಂಭಾರ್ ಮತ್ತು ಚವಾಣ್‌ರನ್ನು ಬಂಧಿಸಿರುವ ವಾಸ್ಕೊ ಪೊಲೀಸರು ಅವರಿಂದ ರವಿಶಂಕರ್‌ನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ರವಿಶಂಕರ್‌ನ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಅವನು ಸೆರೆಯಾಗಲಿದ್ದಾನೆ ಎಂದು ವಾಸ್ಕೊದ ಪೊಲೀಸರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ದೇವಮಾನವನಾದ
ರವಿಶಂಕರ್‌ನ ಹುಟ್ಟೂರು ಗಾವಳಿ. ಊರಲ್ಲಿರುವಾಗ ಚಿಕ್ಕಪುಟ್ಟ ಪೌರೋಹಿತ್ಯ ಮಾಡುತ್ತಿದ್ದ ರವಿಶಂಕರ್ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ ದೇವಮಾನವನಾಗಿ ಬದಲಾಗಿದ್ದ. ಜೋತಿಷ, ವಾಸ್ತು ಪಂಡಿತನೆಂದು ಜನರನ್ನು ನಂಬಿಸಿದ್ದ. ಯೋಗ ಗುರು ಎಂದು ಹೇಳಿಕೊಂಡು ಯೋಗವನ್ನೂ ಕಲಿಸುತ್ತಿದ್ದ. ಬಳಿಕ ಬೆಂಗಳೂರಿನಿಂದ ವಾಸ್ಕೊಗೆ ಹೋಗಿ ಅಲ್ಲಿಯೂ ತನ್ನ ದಂಧೆಯನ್ನು ಪ್ರಾರಂಭಿಸಿದ್ದ. ವಾಸ್ಕೊದಲ್ಲಿ ಅವನಿಗೆ ಕೆಲವು ಅನುಯಾಯಿಗಳು ಇದ್ದರು ಎನ್ನಲಾಗಿದೆ.
ನಮ್ಮನ್ನು ಸಂಪರ್ಕಿಸಿಲ್ಲ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಗೋವಾ ರಾಜ್ಯದ ಪೊಲೀಸರು ಆರೋಪಿಯ ಹುಟ್ಟೂರು ಉಡುಪಿ ಜಿಲ್ಲೆಯ ಕೋಟಕ್ಕೆ ಬಂದು ಮಾಹಿತಿ ಪಡೆದಿರುವ ಬಗ್ಗೆ ಯಾವುದೇ ವಿಚಾರ ಗೊತ್ತಾಗಿಲ್ಲ. ಅವರ ತನಿಖೆಗೆ ಜಿಲ್ಲಾ ಪೊಲೀಸರ ಸಹಕಾರ ಕೋರಿದಲ್ಲಿ ಸಹಕರಿಸಲು ಸಿದ್ಧ.
– ಡಾ| ಸಂಜೀವ ಎಂ. ಪಾಟೀಲ್,
ಉಡುಪಿ ಎಸ್‌ಪಿ