Advertisement

ಸಿದ್ದಲಿಂಗ ಪಟ್ಟಣಶೆಟ್ಟಿ ಆತ್ಮ ಕಥನ ಗಿರಿಜವ್ವನ ಮಗ ಲೋಕಾರ್ಪಣೆ

05:03 PM Apr 16, 2018 | Team Udayavani |

ಧಾರವಾಡ: ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ ವತಿಯಿಂದ ಹಿರಿಯ ಕವಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಆತ್ಮಕಥನ ‘ಗಿರಿಜವ್ವನ ಮಗ’ ಕೃತಿಯು ನಗರದ ರಂಗಾಯಣದ ಸಾಂಸ್ಕೃತಿಕ ಸಮುತ್ಛಯದಲ್ಲಿ ರವಿವಾರ ಲೋಕಾರ್ಪಣೆಗೊಂಡಿತು.

Advertisement

ಕೃತಿ ಲೋಕಾರ್ಪಣೆ ಮಾಡಿದ ಹಂಪಿ ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ತಾಯಿ ತನ್ನ ರಟ್ಟೆ ಬಲದ ಮೂಲಕ ಗಟ್ಟಿತನದ ವ್ಯಕ್ತಿತ್ವ ಹೊಂದುವ ಮಕ್ಕಳನ್ನು ಸಮಾಜಕ್ಕೆ ಕಟ್ಟಿಕೊಡುವ ಬದುಕೇ ಒಂದು ರೋಚಕ. ಇಂತಹ ಸಾಂಸ್ಕೃತಿಕ ಅನನ್ಯತೆ ಒಂದು ಕಾಲದಲ್ಲಿತ್ತು. ಆದರೆ, ಆಧುನಿಕ ಬಿರುಗಾಳಿಗೆ ಸಿಲುಕಿ ಚದುರಿ ಹೋಗುವ ಮಾನವೀಯ ಸಂಬಂಧಗಳ ಗಟ್ಟಿತನವನ್ನು ಇಂದಿಗೂ ಗ್ರಾಮೀಣ ಸೊಗಡಿನಲ್ಲಿ ಕಾಣಬಹುದು. ಮನುಷ್ಯ ತನ್ನ ಅನುಭವದ ಮೂಲಕವೇ ಜಗತ್ತು ಗೆಲ್ಲಬಹುದು ಎಂಬುದಕ್ಕೆ ‘ಗಿರಿಜವ್ವನ ಮಗ’ ಕೃತಿಯೇ ಸಾಕ್ಷಿ. ಇದು ತಾಯಿ-ಮಗನ ಸಂಬಂಧದ ಪುಸ್ತಕವಲ್ಲ. ಸಾಮಾಜಿಕ ನೆಲೆಗಟ್ಟಿನಲ್ಲಿ ಮೂಡಿ ಬಂದಿರುವ ಗುರು ಪರಂಪರೆ, ಶೈಕ್ಷಣಿಕ ವ್ಯವಸ್ಥೆ, ಗ್ರಾಮೀಣ ಬದುಕು, ಸಂಬಂಧ ಹಾಗೂ ಸೌಹಾರ್ದತೆ ಬೆಸೆಯುವ ಅದ್ಭುತ ಕೃತಿಯಾಗಿದೆ ಎಂದರು.

ಸಾಹಿತಿ ಡಾ.ರಾಜಶೇಖರ ಮಠಪತಿ ಕೃತಿ ಪರಿಚಯಿಸಿ, ‘ಗಿರಿಜವ್ವನ ಮಗ’ ನೆನಪುಗಳ ಸಂಕಲನ. ಒಂದು ಪುಸ್ತಕ ಬರೆಯುವುದು ಎಂದರೆ ಆತ್ಮದೊಂದಿಗೆ ಆಲಾಪ-ಸಲ್ಲಾಪ ಇರಲಿದೆ. ಜಗತ್ತಿನ ಶ್ರೇಷ್ಠ ಬರಹಗಾರನು ಸಂಪೂರ್ಣ ಸತ್ಯ ಹೇಳಲು ಸಾಧ್ಯವಿಲ್ಲ. ಓರ್ವ ಲೇಖಕ ಎಷ್ಟರ ಮಟ್ಟಿಗೆ ಸತ್ಯ ಹೇಳಲು ಸಾಧ್ಯವೋ ಅಷ್ಟರ ಮಟ್ಟಿಗೆ ಈ ಕೃತಿ ಹೇಳಿದೆ. 25 ಪುಟಗಳು ಶಿಕ್ಷಕರ ಹೆಸರು, 100 ಪುಟಗಳಷ್ಟು ಸ್ನೇಹಿತರ ಹೆಸರುಗಳಿದ್ದು, ತಾಯಿಯ ಅಂತಃಕರಣ ಬಿಂಬಿಸುವುದನ್ನು ಕಾಣಬಹುದು ಎಂದರು.

ಕೃತಿಕಾರ ಕವಿ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ, ಪ್ರೊ| ಚಂದ್ರಶೇಖರ ವಸ್ತ್ರದ, ಮಾಜಿ ಶಾಸಕಿ ಸೀಮಾ ಮಸೂತಿ, ಲೇಖಕಿ ಡಾ| ಹೇಮಾ ಪಟ್ಟಣಶೆಟ್ಟಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next