ಹಾವೇರಿ: ಪ್ರತಿ ಮನೆ ಮಠವಾಗಬೇಕು, ಪ್ರತಿ ಮಠವೂ ಶಿವಯೋಗವಾಗಬೇಕು. ಅಂತಹ ಸಂಸ್ಕಾರ ಸಿಗಬೇಕಾದರೆ ಅದಕ್ಕೆ ಮಹಾತ್ಮರ ಸಾರ್ಥಕ ಸೇವೆ ಕಾರಣವಾಗುತ್ತದೆ. ಅಂತಹ ಸಾರ್ಥಕ ಸೇವೆಯ ಮೂಲಕ ಭಕ್ತರ ಮನೆಯನ್ನು ಮಠವಾಗಿಸಿ, ಸಿಂದಗಿ ಮಠವನ್ನು ಶಿವಯೋಗವಾಗಿಸಿದ ಕೀರ್ತಿ ಲಿಂ. ಶಾಂತವೀರ ಪಟ್ಟಾಧ್ಯಕ್ಷರಿಗೆ ಸಲ್ಲುತ್ತದೆ ಎಂದು ಗದುಗಿನ ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
Advertisement
ಸ್ಥಳೀಯ ಸಿಂದಗಿ ಮಠದಲ್ಲಿ ಲಿಂ. ಶಾಂತವೀರ ಪಟ್ಟಾಧ್ಯಕ್ಷರ 44ನೇ ಪುಣ್ಯ ಸ್ಮರಣೋತ್ಸವದ ಕೊನೆಯ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾವ ಶಿಕ್ಷಣದಿಂದ ವಿದ್ಯಾರ್ಥಿಗೆ ಸ್ವಾಭಿಮಾನ ಬರುತ್ತದೆಯೋ ಆ ಶಿಕ್ಷಣವೇ ಅಮೃತ ಸಮಾನ. ಓರ್ವ ಸ್ವಾಭಿಮಾನಿ ವಿದ್ಯಾರ್ಥಿ ಮಾತ್ರ ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಅದನ್ನು ಸಮರ್ಥವಾಗಿ ನಿರ್ವಹಿಸಬಲ್ಲ. ಯಾವುದೇ ಪರೀಕ್ಷೆಯನ್ನೂ ಧೈರ್ಯದಿಂದ ಎದುರಿಸಬಲ್ಲ. ನಾವು ಕಲಿತ ಶಿಕ್ಷಣದಿಂದ ಬೌದ್ಧಿಕ ವಿಕಾಸವಾದಾಗ ಅದು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮಾಡುತ್ತದೆ.
ಶಿಕ್ಷಣದ ಸದ್ವಿನಿಯೋಗವಾಗುತ್ತದೆ ಎನ್ನುವ ಅದ್ಭುತ ವಿಚಾರ ಶಾಂತವೀರ ಪಟ್ಟಾಧ್ಯಕ್ಷದ್ದಾಗಿತ್ತು. ಯಾವ ಸೌಲಭ್ಯಗಳಿಲ್ಲದ ಸಮಯದಲ್ಲಿ ಅನ್ನ ಮತ್ತು ಅಕ್ಷರ ದಾಸೋಹ ನೀಡಿ ಬಡ ಮಕ್ಕಳ ಹಿತಕ್ಕಾಗಿ ಶ್ರಮಿಸಿದ ಮಹಾನ್ ತ್ಯಾಗಿ ಅವರಾಗಿದ್ದಾರೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ 50 ವರ್ಷಗಳ ಕಾಲ ಬ್ಯಾಡಗಿಯ ಕುಮಾರೇಶ್ವರ ಧಾರ್ಮಿಕ ಪಾಠಶಾಲೆ ಮುನ್ನಡೆಸಿದ ಸೇವಾಜೀವಿ ವೇ.ಮೂ. ರಾಚಯ್ಯ ಶಾಸ್ತ್ರಿಗಳು ಓದಿಸೋಮಠ ಅವರನ್ನು ಗೌರವಿಸಲಾಯಿತು. ಬಳ್ಳಾರಿಯ ಪ್ರಕಾಶ ಹೆಮ್ಮಾಡಿ ಹಾಗೂ ನೇತ್ರಾವತಿ ಹೆಮ್ಮಾಡಿ ಅವರಿಂದ ವಿಶೇಷ ಜಾದೂ ಪ್ರದರ್ಶನ ಜರುಗಿತು. ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಸಿಂದಗಿ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಹೊತನಹಳ್ಳಿಯ ಸಿಂದಗಿಮಠದ ಶಂಭುಲಿಂಗಪಟ್ಟಾಧ್ಯಕ್ಷರು ಇದ್ದರು.
Related Articles
Advertisement