Advertisement

ಸಾವಯವ ಉತ್ಪನ್ನಗಳಿಗೆ ಸ್ವಾವಲಂಬಿ ಮಾರುಕಟ್ಟೆ!

10:59 PM Oct 12, 2020 | mahesh |

ಉಡುಪಿ: ಕೃಷಿಕರ ಉತ್ಪನ್ನ ಗಳಿಗೆ ಸರಿಯಾದ ಮಾರುಕಟ್ಟೆ ಬೆಲೆ ಸಿಗುವುದಿಲ್ಲ ಎಂಬುದು ಲಾಗಾಯ್ತಿನಿಂದ ಕೇಳುವ ಮಾತು. ಆದರೆ ಬಂಟಕಲ್ಲಿನ ಸಾವಯವ ಕೃಷಿಕ ರಾಮಕೃಷ್ಣ ಶರ್ಮ ತಮ್ಮ ತೋಟದಲ್ಲಿ ಬೆಳೆದ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದಾರೆ.

Advertisement

ಇವರ ಮೂರು ಎಕರೆ ಮಿಶ್ರ ಬೆಳೆ ಬೇಸಾಯ ಕ್ರಮದಲ್ಲಿ ಬಾಳೆ, ಪಪ್ಪಾಯ, ಬೆಂಡೆ, ಅಲಸಂಡೆ, ಹೀರೆ, ಸೋರೆ, ಸುವರ್ಣಗಡ್ಡೆ, ಮಾವು, ಚಿಕ್ಕು, ದೀಗುಜ್ಜೆ, ಪೇರಳೆ ಇತ್ಯಾದಿ ಹಣ್ಣು, ತರಕಾರಿಗಳನ್ನು ಬೆಳೆಯುತ್ತಾರೆ. ಇವೆಲ್ಲವೂ ಎಲ್ಲ ಸಮಯದಲ್ಲಿ ಬೆಳೆಯುವುದಿಲ್ಲ. ಆಯಾ ಕಾಲದಲ್ಲಿ ಏನೇನು ಬೆಳೆಯುತ್ತವೋ ಅವುಗಳ ಬಗ್ಗೆ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಮಾಹಿತಿ ನೀಡುತ್ತಾರೆ. ಗ್ರಾಹಕರು ತಮಗೆ ಎಷ್ಟು ಪ್ರಮಾಣದಲ್ಲಿ ಯಾವ ಉತ್ಪನ್ನ ಬೇಕು ಎಂದು ತಿಳಿಸಿದಂತೆ ಗ್ರಾಹಕರಿಗೆ ತಲುಪಿಸುತ್ತಾರೆ. ಕಡಿಮೆ ಉತ್ಪನ್ನವಿದ್ದರೆ ಬೈಕ್‌ನಲ್ಲಿ, ಹೆಚ್ಚು ಇದ್ದರೆ ಕಾರಿನಲ್ಲಿ ಕೊಂಡೊಯ್ಯುತ್ತಾರೆ. ತಾವು ಬೆಳೆದ ಉತ್ಪನ್ನಗಳೇ ವಿನಾ ಇತರರ ಉತ್ಪನ್ನಗಳನ್ನು ಇವರು ವಿಕ್ರಯ ಮಾಡುವುದಿಲ್ಲ. ಉಡುಪಿ ಮತ್ತು ಶಿರ್ವ, ಬಂಟಕಲ್ಲು ಆಸುಪಾಸಿನಲ್ಲಿ ಇವರಿಗೆ ಸುಮಾರು 100 ಗ್ರಾಹಕರಿದ್ದಾರೆ. ಇವರಲ್ಲಿ ಸುಮಾರು 60 ಗ್ರಾಹಕರು ಸಕ್ರಿಯರು.

ಅಂಗಡಿಯಲ್ಲಿ ಯಾವ ಬೆಲೆಗೆ ಮಾರುತ್ತಾರೋ ಅದೇ ದರದಲ್ಲಿ ಶರ್ಮ ಮಾರಾಟ ಮಾಡುತ್ತಾರೆ. ಸಾವಯವ ಗೊಬ್ಬರವನ್ನು ಮಾತ್ರ ಬಳಸುತ್ತಾರೆ. ಎಷ್ಟೋ ಕೃಷಿಕರು ಅಂಗಡಿಗಿಂತ ಕಡಿಮೆ ದರದಲ್ಲಿ ಕೊಟ್ಟು ಕೊನೆಗೆ ಅದೇ ದರದಲ್ಲಿ ಅಂಗಡಿಗೆ ರಖಂ ಆಗಿ ಕೊಡುವ ಸ್ಥಿತಿಗೆ ತಲುಪುತ್ತಾರೆ ಎಂದು ಶರ್ಮ ಬೆಟ್ಟು ಮಾಡುತ್ತಾರೆ. ಇದೇಕೆಂದರೆ ಅಂಗಡಿಗೆ ಮಾರಾಟ ಮಾಡುವ ದರದಲ್ಲಿ ಉತ್ಪಾದಕರು ಗ್ರಾಹಕರಿಗೆ ಮಾರಾಟ ಮಾಡುತ್ತಾರೆಂದು ಇಟ್ಟುಕೊಳ್ಳಿ. ಗ್ರಾಹಕರು ನಿರಂತರವಾಗಿ ಬಂದು ಚಿಲ್ಲರೆ ಉತ್ಪನ್ನ ಗಳನ್ನು ಕೊಂಡೊಯ್ಯುವ ಅನುಭವವಾದ ಬಳಿಕ ಇದಕ್ಕಿಂತ ಇದೇ ಬೆಲೆಗೆ ರಖಂ ಆಗಿ ಅಂಗಡಿಗೆ ಕೊಡುವುದು ಲೇಸೆಂಬ ನಿರ್ಧಾರಕ್ಕೆ ಉತ್ಪಾದಕರು ಬರುತ್ತಾರೆ.

“ನಾನು ಮೂರು ವರ್ಷಗಳಿಂದ ನನ್ನ ಉತ್ಪನ್ನಗಳಿಗೆ ಮಾರುಕಟ್ಟೆ ಮಾಡಿಕೊಂಡಿ ದ್ದೇನೆ. ಇದರಿಂದ ಉತ್ತಮ ಆದಾಯ ಬಂದಿದೆ. ಇತರ ರೈತರೂ ಅವರವರ ಉತ್ಪನ್ನಗಳಿಗೆ ಹೀಗೆ ಮಾರುಕಟ್ಟೆಯನ್ನು ರಚಿಸಿಕೊಳ್ಳಬಹುದು’ ಎಂದು ರಾಮಕೃಷ್ಣ ಶರ್ಮ ಕೃಷಿಕರಿಗೆ ಸಲಹೆ ನೀಡುತ್ತಾರೆ.

ಗುಣವೂ ಅವಗುಣವೂ…
ಸಾವಯವ ಉತ್ಪನ್ನಗಳ ಒಂದು ನೇತ್ಯಾತ್ಮಕ ಗುಣವೆಂದರೆ ಅದು ಹೆಚ್ಚು ದಿನ ಬಾಳುವುದಿಲ್ಲ. ಇದು ಗುಣವೂ ಹೌದು. ಏಕೆಂದರೆ ಇಂತಹ ಉತ್ಪನ್ನಗಳಿಂದ ಅಡ್ಡ ಪರಿಣಾಮ ಗಳಿರುವುದಿಲ್ಲ. ರಾಸಾಯನಿಕ ದ್ರಾವಣ, ವ್ಯಾಕ್ಸ್‌ ಇತ್ಯಾದಿಗಳನ್ನು ಬಳಸಿದರೆ ಮಾತ್ರ ಬಹಳ ದಿನ ಕೆಡದಂತೆ ಇರುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next