Advertisement
ಇದ್ದರೆ ಮನೆಯಲ್ಲಿರಲಿ ಎಂದು ಪಡೆದಿದ್ದ ರೊಟ್ಟಿ ಯಂತ್ರವೇ ಇದೀಗ ಆ ಕುಟುಂಬಕ್ಕೆ ಪ್ರಮುಖ ಆಧಾರವಾಗಿದೆ. ರೊಟ್ಟಿ ತಟ್ಟುವ ಮೂಲಕವೇ ಆ ಮಹಿಳೆ ಇಡೀ ಕುಟುಂಬ ನಿರ್ವಹಣೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
Related Articles
Advertisement
12-15 ಸಾವಿರ ರೊಟ್ಟಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯೆಯಾಗಿರುವ ಶೀಲಾ ಕೊಟಗಿ ಅವರು 12 ಸದಸ್ಯರ ತಂಡದಲ್ಲಿದ್ದಾರೆ. ಈ ಸಂಘ ಸುಮಾರು 30ಲಕ್ಷ ರೂ.ಗಳ ವಹಿವಾಟು ನಡೆಸಿದೆ. ಇದೇ ಸಂಘದಿಂದಲೇ ರೊಟ್ಟಿ ತಟ್ಟುವ ಯಂತ್ರದ ತರಬೇತಿಗೆಂದು ಹೋಗಿದ್ದ ಶೀಲಾ ಅವರು, ಸೆಲ್ಕೋ ಕಂಪೆನಿಯವರ ರೊಟ್ಟಿ ತಟ್ಟುವ ಯಂತ್ರ ಗಮನಿಸಿ, ಸೋಲಾರದಿಂದ ನಿರ್ವಹಣೆ ಆಗುವುದನ್ನು ಗಮನಿಸಿ ಮನೆಯಲ್ಲಿ ಸಣ್ಣ ಪುಟ್ಟ ವೆಚ್ಚ ನಿರ್ವಹಣೆಗೆ ಇದು ಸಹಕಾರಿ ಆಗಲಿದೆ, ಮನೆ ಕೆಲಸದ ನಡುವೆ ಕೈಲಾದಷ್ಟು ರೊಟ್ಟಿ ಮಾಡಿದರಾಯಿತು ಎಂದು ಯಂತ್ರ ಪಡೆದಿದ್ದರು.
ಆರಂಭದಲ್ಲಿ ರೊಟ್ಟಿ ಯಂತ್ರದಿಂದ ರೊಟ್ಟಿ ತಯಾರಿಸುವುದು, ಮಾರಾಟ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸಣ್ಣ ಪುಟ್ಟ ವೆಚ್ಚಗಳಿಗೆ ಪತಿಯನ್ನು ಹಣ ಕೇಳುವ ಬದಲು, ರೊಟ್ಟಿ ತಯಾರಿಸಿ ಬಂದ ಹಣದಿಂದಲೇ ನಿರ್ವಹಿಸಿದರಾಯಿತು ಎಂದುಕೊಂಡಿದ್ದರು.ಅದೇ ಮಾದರಿಯಲ್ಲಿಯೇ ಬೇಡಿಕೆ ಬಂದಾಗಷ್ಟೇ ರೊಟ್ಟಿ ತಯಾರಿಸಿ ನೀಡುತ್ತಿದ್ದರು. ಆದರೆ ಮೆದುಳು ಆಘಾತದಿಂದ ಪತಿಯ ಅಕಾಲಿಕ ಮರಣದಿಂದ ದಿಕ್ಕು ತೋಚದಾಗಿತ್ತು. ಇದ್ದ ಎರಡು ಎಕರೆ ಭೂಮಿಯಲ್ಲಿ ಒಕ್ಕಲುತನ ಮಾಡುವುದು ಹೇಗೆ, ಮಕ್ಕಳ ಓದು, ತನ್ನೊಂದಿಗೆ ಇರುವ ತಂದೆ-ತಾಯಿ ನೋಡಿಕೊಳ್ಳುವುದು ಹೇಗೆ ಎಂಬ ಚಿಂತೆ ಆವರಿಸಿತ್ತು.
ಆಗ ಇವರಿಗೆ ಧೈರ್ಯ ತುಂಬಿದ್ದು, ಅವರನ್ನು ಕೈ ಹಿಡಿದಿದ್ದೆ ರೊಟ್ಟಿ ಯಂತ್ರ. ಸಮಯ ಇದ್ದಾಗ ಖಾಲಿ ಕೂಡುವ ಬದಲು ಹಾಗೂ ಸಣ್ಣ ಪುಟ್ಟ ವೆಚ್ಚಕ್ಕೆ ನೆರವಾಗಲೆಂದು ತೆಗೆದುಕೊಂಡಿದ್ದ ರೊಟ್ಟಿ ಯಂತ್ರ. ಅವರ ಜೀವನ ಆಧಾರಕ್ಕೆ ಮಹತ್ವದ ಸಾಥ್ ನೀಡುತ್ತಿದೆ. ರೊಟ್ಟಿ ತಯಾರಿಸುವುದನ್ನೇ ಪೂರ್ಣ ಪ್ರಮಾಣದ ಉದ್ಯೋಗವಾಗಿಸಿಕೊಂಡ ಅವರು ರೊಟ್ಟಿ ದೊರೆಯುವ ಬಗ್ಗೆ ಬ್ಯಾನರ್ ಕಟ್ಟಿ ಪ್ರಚಾರ ಮಾಡಲಾಗಿತ್ತು. ತಿಂಗಳಿಗೆ 12-15 ಸಾವಿರ ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ.
ಗ್ರಾಮದ ಪಕ್ಕದಲ್ಲಿರುವ ಕಲ್ಗುಡಿ ಜಾತ್ರೆಯಲ್ಲಿ ಸುಮಾರು 4-5 ಸಾವಿರದಷ್ಟು ರೊಟ್ಟಿಗಳು ಮಾರಾಟ ಮಾಡಿದ್ದಾರಂತೆ. ಶೀಲಾ ಕೊಟಗಿ ಅವರಿಗೆ ಸೆಲ್ಕೋ ಕಂಪೆನಿ ಸಹ ತನ್ನದೇ ಸಹಾಯ ಹಸ್ತ ಚಾಚಿದ್ದು, ವಿವಿಧ ರೀತಿಯ ನೆರವು ನೀಡುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡಿದೆ. ಬರಸಿಡಿಲಿನಂತೆ ಬಂದೆರಗಿದ ಆಘಾತದ ನಡುವೆಯೂ ಶೀಲಾ ಕೊಟಗಿ ಅವರು ಎದೆಗುಂದದೆ ಸ್ವಯಂ ಉದ್ಯೋಗದೊಂದಿಗೆ ಸ್ವಾವಲಂಬನೆ ಬದುಕು ಸಾಗಿಸುತ್ತಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ.
ರೊಟ್ಟಿ ತಯಾರಿಕೆಗೆ ಪೆಡಲ್ ರೂಪದಲ್ಲಿ ಇರುವ ಸಣ್ಣ ಯಂತ್ರ ಇದೆ. ರೊಟ್ಟಿ ತಯಾರಿಕೆಯ ದೊಡ್ಡ ಯಂತ್ರ ತೆಗೆದುಕೊಳ್ಳಬೇಕು ರೊಟ್ಟಿ ವಹಿವಾಟು ಇನ್ನಷ್ಟು ವಿಸ್ತರಿಸಬೇಕು ಎಂಬ ಚಿಂತನೆ ಇದೆ. ತಂದೆ-ತಾ ಯಿ, ಇಬ್ಬರು ಮಕ್ಕಳು ಸೇರಿ ಇಡೀ ಕುಟುಂಬದ ಜವಾಬ್ದಾರಿ ನನ್ನ ಮೇಲೆ ಇದೆ. ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸೆಲ್ಕೋದವರು ಮಹಿಳೆಯರಿಗೆ ತರಬೇತಿ ನೀಡಿಕೆಗೆ ಅವಕಾಶ ಮಾಡಿಕೊಟ್ಟರೆ ಅಲ್ಲಿಯೂ ಸೇವೆ ಸಲ್ಲಿಸಲು ಸಿದ್ಧವಾಗಿದ್ದೇನೆ. ರೊಟ್ಟಿ ತಯಾರಿಕೆಯ ಕಾರ್ಯದಲ್ಲಿ ಮಗಳು ಸಹಾಯ ಮಾಡುತ್ತಾಳೆ. ಶಾಲೆಯಲ್ಲಿಯೂ ಉತ್ತಮ ಅಂಕ ಪಡೆಯುತ್ತಿದ್ದಾಳೆ. ಮಕ್ಕಳು ಉತ್ತಮ ಶಿಕ್ಷಣ ಪಡೆದರೆ ಸಾಕು.ಶೀಲಾ ಕೊಟಗಿ, ಗೃಹಿಣಿ. *ಅಮರೇಗೌಡ ಗೋನವಾರ