Advertisement

ಸ್ವಾವಲಂಬನೆ ಬದುಕು; ಆಘಾತಕ್ಕೆ ಸಿಲುಕಿದ್ದ ಬದುಕಿಗೆ ಆಧಾರವಾದ ರೊಟ್ಟಿ

02:54 PM Apr 29, 2022 | Team Udayavani |

ಹುಬ್ಬಳ್ಳಿ: ಇದ್ದದ್ದು ಎರಡೇ ಎಕರೆ ಜಮೀನು ಆದರೂ ನೆಮ್ಮದಿ-ತೃಪ್ತಿಯಿಂದ ಬದುಕುತ್ತಿದ್ದ ಆ ಕುಟುಂಬಕ್ಕೆ ಬರಸಿಡಲಿನ ಆಘಾತ ಬಂದೆರಗಿತ್ತು. ತಾನಾಯಿತು ತನ್ನ ಮನೆಯಾಯಿತು ಎಂದುಕೊಂಡಿದ್ದ ಮಹಿಳೆ ಆಧಾರಸ್ತಂಭ ಕಳೆದುಕೊಂಡು ಇಡೀ ಕುಟುಂಬಕ್ಕೆ ಆಧಾರವಾಗಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಸಂಕಷ್ಟ ಸಂದರ್ಭದಲ್ಲಿ ತರಬೇತಿ ಪಡೆದಿದ್ದೇನೆ.

Advertisement

ಇದ್ದರೆ ಮನೆಯಲ್ಲಿರಲಿ ಎಂದು ಪಡೆದಿದ್ದ ರೊಟ್ಟಿ ಯಂತ್ರವೇ ಇದೀಗ ಆ ಕುಟುಂಬಕ್ಕೆ ಪ್ರಮುಖ ಆಧಾರವಾಗಿದೆ. ರೊಟ್ಟಿ ತಟ್ಟುವ ಮೂಲಕವೇ ಆ ಮಹಿಳೆ ಇಡೀ ಕುಟುಂಬ ನಿರ್ವಹಣೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸಣ್ಣಪುಟ್ಟ ಖರ್ಚಿಗಿರಲಿ ಎಂದು ಖರೀದಿಸಿದ್ದ ರೊಟ್ಟಿ ಯಂತ್ರವೇ ಇಂದು ಬದುಕಿನ ಬಂಡಿಸಾಗಿಸುವ ಸಾಧನವಾಗಿದೆ. ರೊಟ್ಟಿ ತಯಾರಿಸಿ ಅದರಿಂದ ಬರುವ ಹಣದಿಂದಲೇ ಒಂದು ಕುಟುಂಬದ ನಿರ್ವಹಣೆ ಆಗುತ್ತಿದೆ. ಇದು ಹಾವೇರಿ ಜಿಲ್ಲೆ ತಿಳವಳ್ಳಿ ಬಳಿಯ ಹುಲಗಡ್ಡಿ ಎಂಬ ಗ್ರಾಮದ ಮಹಿಳೆಯೊಬ್ಬರ ಸಂಕಷ್ಟದಿಂದ ಮೇಲೆದ್ದು ಬದುಕು ಕಟ್ಟಿಕೊಂಡ ಕಥೆಯಿದು.

ಹುಲಗಡ್ಡಿಯ ಶೀಲಾ ಕೊಟಗಿ ಅವರು ಸಣ್ಣದಾದ ರೊಟ್ಟಿ ಯಂತ್ರದೊಂದಿಗೆ ತನ್ನನ್ನೇ ನಂಬಿದ ನಾಲ್ವರನ್ನು ಸಲುಹುತ್ತಿದ್ದಾರೆ. ಇದರಲ್ಲಿ ತನ್ನಿಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಶೀಲಾ ಕೊಟಗಿ ಹತ್ತನೇ ತರಗತಿವರೆಗೆ ಓದಿದ್ದು, ಪತಿಯ ಕುಟುಂಬಕ್ಕೆ ಇದ್ದದ್ದು ಎರಡು ಎಕರೆ ಜಮೀನು ಮಾತ್ರ. ಪಕ್ಕದ ಒಂದಿಷ್ಟು ಜಮೀನು ಗುತ್ತಿಗೆ ಪಡೆದು ಕೃಷಿ ಕಾರ್ಯ ಮಾಡಲಾಗುತ್ತಿತ್ತು.

ಕಳೆದ ಐದಾರು ತಿಂಗಳ ಹಿಂದೆ ಶೀಲಾ ಅವರ ಪತಿ ಮೆದುಳು ಆಘಾತದಿಂದ ಮೃತಪಟ್ಟಿದ್ದು, ಕುಟುಂಬ ಆಧಾರಸ್ತಂಭವೇ ಕಳಚಿ ಬಿದ್ದಿದ್ದರಿಂದ ಮುಂದೇನು ಎಂಬ ಆತಂಕ-ಆಘಾತಕ್ಕೆ ಸಿಲುಕಿದ್ದ ಶೀಲಾ ಅವರು ಸುಧಾರಿಸಿಕೊಂಡು ಬದುಕು ಕಟ್ಟಿಕೊಳ್ಳಲು ಮುಂದಾದಾಗ ಅವರ ಕೈ ಹಿಡಿದಿದ್ದು ರೊಟ್ಟಿ ತಟ್ಟುವ ಯಂತ್ರ. ತಂದೆ-ತಾಯಿ ಇಬ್ಬರು ಮಕ್ಕಳನ್ನು ಇದೇ ರೊಟ್ಟಿ ಯಂತ್ರದಿಂದಲೇ ಸಲುಹುತ್ತಿದ್ದಾರೆ. ಮಕ್ಕಳಲ್ಲಿ ಒಬ್ಬರು ಎಸ್‌ಎಸ್‌ಎಲ್‌ಸಿ ಓದುತ್ತಿದ್ದರೆ, ಇನ್ನೊಬ್ಬರು ಎಂಟನೇ ತರಗತಿ ಓದುತ್ತಿದ್ದಾರೆ.

Advertisement

12-15 ಸಾವಿರ ರೊಟ್ಟಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯೆಯಾಗಿರುವ ಶೀಲಾ ಕೊಟಗಿ ಅವರು 12 ಸದಸ್ಯರ ತಂಡದಲ್ಲಿದ್ದಾರೆ. ಈ ಸಂಘ ಸುಮಾರು 30ಲಕ್ಷ ರೂ.ಗಳ ವಹಿವಾಟು ನಡೆಸಿದೆ. ಇದೇ ಸಂಘದಿಂದಲೇ ರೊಟ್ಟಿ ತಟ್ಟುವ ಯಂತ್ರದ ತರಬೇತಿಗೆಂದು ಹೋಗಿದ್ದ ಶೀಲಾ ಅವರು, ಸೆಲ್ಕೋ ಕಂಪೆನಿಯವರ ರೊಟ್ಟಿ ತಟ್ಟುವ ಯಂತ್ರ ಗಮನಿಸಿ, ಸೋಲಾರದಿಂದ ನಿರ್ವಹಣೆ ಆಗುವುದನ್ನು ಗಮನಿಸಿ ಮನೆಯಲ್ಲಿ ಸಣ್ಣ ಪುಟ್ಟ ವೆಚ್ಚ ನಿರ್ವಹಣೆಗೆ ಇದು ಸಹಕಾರಿ ಆಗಲಿದೆ, ಮನೆ ಕೆಲಸದ ನಡುವೆ ಕೈಲಾದಷ್ಟು ರೊಟ್ಟಿ ಮಾಡಿದರಾಯಿತು ಎಂದು ಯಂತ್ರ ಪಡೆದಿದ್ದರು.

ಆರಂಭದಲ್ಲಿ ರೊಟ್ಟಿ ಯಂತ್ರದಿಂದ ರೊಟ್ಟಿ ತಯಾರಿಸುವುದು, ಮಾರಾಟ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸಣ್ಣ ಪುಟ್ಟ ವೆಚ್ಚಗಳಿಗೆ ಪತಿಯನ್ನು ಹಣ ಕೇಳುವ ಬದಲು, ರೊಟ್ಟಿ ತಯಾರಿಸಿ ಬಂದ ಹಣದಿಂದಲೇ ನಿರ್ವಹಿಸಿದರಾಯಿತು ಎಂದುಕೊಂಡಿದ್ದರು.ಅದೇ ಮಾದರಿಯಲ್ಲಿಯೇ ಬೇಡಿಕೆ ಬಂದಾಗಷ್ಟೇ ರೊಟ್ಟಿ ತಯಾರಿಸಿ ನೀಡುತ್ತಿದ್ದರು. ಆದರೆ ಮೆದುಳು ಆಘಾತದಿಂದ ಪತಿಯ ಅಕಾಲಿಕ ಮರಣದಿಂದ ದಿಕ್ಕು ತೋಚದಾಗಿತ್ತು. ಇದ್ದ ಎರಡು ಎಕರೆ ಭೂಮಿಯಲ್ಲಿ ಒಕ್ಕಲುತನ ಮಾಡುವುದು ಹೇಗೆ, ಮಕ್ಕಳ ಓದು, ತನ್ನೊಂದಿಗೆ ಇರುವ ತಂದೆ-ತಾಯಿ ನೋಡಿಕೊಳ್ಳುವುದು ಹೇಗೆ ಎಂಬ ಚಿಂತೆ ಆವರಿಸಿತ್ತು.

ಆಗ ಇವರಿಗೆ ಧೈರ್ಯ ತುಂಬಿದ್ದು, ಅವರನ್ನು ಕೈ ಹಿಡಿದಿದ್ದೆ ರೊಟ್ಟಿ ಯಂತ್ರ. ಸಮಯ ಇದ್ದಾಗ ಖಾಲಿ ಕೂಡುವ ಬದಲು ಹಾಗೂ ಸಣ್ಣ ಪುಟ್ಟ ವೆಚ್ಚಕ್ಕೆ ನೆರವಾಗಲೆಂದು ತೆಗೆದುಕೊಂಡಿದ್ದ ರೊಟ್ಟಿ ಯಂತ್ರ. ಅವರ ಜೀವನ ಆಧಾರಕ್ಕೆ ಮಹತ್ವದ ಸಾಥ್‌ ನೀಡುತ್ತಿದೆ. ರೊಟ್ಟಿ ತಯಾರಿಸುವುದನ್ನೇ ಪೂರ್ಣ ಪ್ರಮಾಣದ  ಉದ್ಯೋಗವಾಗಿಸಿಕೊಂಡ ಅವರು ರೊಟ್ಟಿ ದೊರೆಯುವ ಬಗ್ಗೆ ಬ್ಯಾನರ್‌ ಕಟ್ಟಿ ಪ್ರಚಾರ ಮಾಡಲಾಗಿತ್ತು. ತಿಂಗಳಿಗೆ 12-15 ಸಾವಿರ ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ.

ಗ್ರಾಮದ ಪಕ್ಕದಲ್ಲಿರುವ ಕಲ್ಗುಡಿ ಜಾತ್ರೆಯಲ್ಲಿ ಸುಮಾರು 4-5 ಸಾವಿರದಷ್ಟು ರೊಟ್ಟಿಗಳು ಮಾರಾಟ ಮಾಡಿದ್ದಾರಂತೆ. ಶೀಲಾ ಕೊಟಗಿ ಅವರಿಗೆ ಸೆಲ್ಕೋ ಕಂಪೆನಿ ಸಹ ತನ್ನದೇ ಸಹಾಯ ಹಸ್ತ ಚಾಚಿದ್ದು, ವಿವಿಧ ರೀತಿಯ ನೆರವು ನೀಡುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡಿದೆ. ಬರಸಿಡಿಲಿನಂತೆ ಬಂದೆರಗಿದ ಆಘಾತದ ನಡುವೆಯೂ ಶೀಲಾ ಕೊಟಗಿ ಅವರು ಎದೆಗುಂದದೆ ಸ್ವಯಂ ಉದ್ಯೋಗದೊಂದಿಗೆ ಸ್ವಾವಲಂಬನೆ ಬದುಕು ಸಾಗಿಸುತ್ತಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ.

ರೊಟ್ಟಿ ತಯಾರಿಕೆಗೆ ಪೆಡಲ್‌ ರೂಪದಲ್ಲಿ ಇರುವ ಸಣ್ಣ ಯಂತ್ರ ಇದೆ. ರೊಟ್ಟಿ ತಯಾರಿಕೆಯ ದೊಡ್ಡ ಯಂತ್ರ ತೆಗೆದುಕೊಳ್ಳಬೇಕು ರೊಟ್ಟಿ ವಹಿವಾಟು ಇನ್ನಷ್ಟು ವಿಸ್ತರಿಸಬೇಕು ಎಂಬ ಚಿಂತನೆ ಇದೆ. ತಂದೆ-ತಾ ಯಿ, ಇಬ್ಬರು ಮಕ್ಕಳು ಸೇರಿ ಇಡೀ ಕುಟುಂಬದ ಜವಾಬ್ದಾರಿ ನನ್ನ ಮೇಲೆ ಇದೆ. ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸೆಲ್ಕೋದವರು ಮಹಿಳೆಯರಿಗೆ ತರಬೇತಿ ನೀಡಿಕೆಗೆ ಅವಕಾಶ ಮಾಡಿಕೊಟ್ಟರೆ ಅಲ್ಲಿಯೂ ಸೇವೆ ಸಲ್ಲಿಸಲು ಸಿದ್ಧವಾಗಿದ್ದೇನೆ. ರೊಟ್ಟಿ ತಯಾರಿಕೆಯ ಕಾರ್ಯದಲ್ಲಿ ಮಗಳು ಸಹಾಯ ಮಾಡುತ್ತಾಳೆ. ಶಾಲೆಯಲ್ಲಿಯೂ ಉತ್ತಮ ಅಂಕ ಪಡೆಯುತ್ತಿದ್ದಾಳೆ. ಮಕ್ಕಳು ಉತ್ತಮ ಶಿಕ್ಷಣ ಪಡೆದರೆ ಸಾಕು.
ಶೀಲಾ ಕೊಟಗಿ, ಗೃಹಿಣಿ.

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next