ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯ ನೂರಕ್ಕೂ ಹೆಚ್ಚು ಕಂಪನಿಗಳು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಪೌರಕಾರ್ಮಿಕರನ್ನು ಅವಲಂಬಿಸಿಲ್ಲ. ತ್ಯಾಜ್ಯ ಸಂಗ್ರಹ ವಾಹನ ಬಾರದಿದ್ದರೂ, ಪೌರಕಾರ್ಮಿಕರು ಮುಷ್ಕರ ಮಾಡಿದರೂ ಇವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಒಟ್ಟಾರೆ, ತ್ಯಾಜ್ಯ ವಿಲೇವಾರಿ ಅಥವಾ ನಿರ್ವಹಣೆಯ ಯಾವುದೇ ಹಂತದಲ್ಲೂ ಈ ಕಂಪನಿಗಳು ಬಿಬಿಎಂಪಿಯನ್ನು ಅವಲಂಬಿಸಿಯೇ ಇಲ್ಲ.
ಎಲೆಕ್ಟ್ರಾನಿಕ್ ಸಿಟಿಯ 115 ಕಂಪನಿಗಳು ಹಸಿರುದಳ ಇನೋವೇಶನ್ ಮತ್ತು ಎಲ್‌ಸಿಟಾ(ಎಲೆಕ್ಟ್ರಾನಿಕ್‌ಸಿಟಿ ಇಂಡಸ್ಟ್ರೀಯಲ್ ಟೌನ್ ಶಿಪ್ ಅಥಾರಿಟಿ) ಸಹಭಾಗಿತ್ವದಲ್ಲಿ ತ್ಯಾಜ್ಯ ನಿರ್ವಹಣೆ, ವಿಲೇವಾರಿಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿವೆ. ಇದರಿಂದ ಬಿಬಿಎಂಪಿಗೆ ಲಕ್ಷಾಂತರ ರೂ. ಉಳಿತಾಯವಾಗುವ ಜತೆಗೆ ಕ್ವಾರಿಗೆ ಹೋಗುತ್ತಿದ್ದ ಶೇ.40ರಷ್ಟು ತ್ಯಾಜ್ಯ ಸರ್ಮಪಕವಾಗಿ ನಿರ್ವಹಣೆಯಾಗುತ್ತಿದೆ. ಆ ಮೂಲಕ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಮರಗಳಿಗೂ ಗೊಬ್ಬರ ಲಭ್ಯವಾಗುತ್ತಿದೆ.
ಹಸಿ ತ್ಯಾಜ್ಯ ಸರ್ಮಪಕವಾಗಿ ಕಾಂಪೋಸ್ಟ್ ಮಾಡುತ್ತಿರುವುದರಿಂದ ಇಲ್ಲಿ ಉತ್ಪತ್ತಿಯಾಗುತ್ತಿರುವ ಗೊಬ್ಬರವನ್ನು ಕೆ.ಜಿಗೆ 10 ರೂ.ಗಳಂತೆ ರೈತರಿಗೆ ಮತ್ತು ಕಂಪನಿಯ ಸಸಿಗಳಿಗೆ ನೀಡಲಾಗುತ್ತಿದೆ. ಈ ರೀತಿಯಲ್ಲಿ ಕಂಪನಿಗಳೇ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವುದರಿಂದ ಬಿಬಿಎಂಪಿ ಸಹ ತಕ್ಕಮಟ್ಟಿಗೆ ನಿಟ್ಟುಸಿರು ಬಿಟ್ಟಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿದ್ದು, ಈ ಪೈಕಿ 115 ಕಂಪನಿಗಳು ಹಸಿರುದಳ ಇನೋವೇಶನ್‌ನೊಂದಿಗೆ ಮೂರು ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿವೆ
ನಿತ್ಯ 10 ಟನ್ ಗೊಬ್ಬರ: ಈ ಕಂಪನಿಗಳಲ್ಲಿ ಪ್ರತಿ ದಿನ 4.9 ಟನ್ ಹಸಿ ತ್ಯಾಜ್ಯ, 2.2 ಟನ್ ಒಣತ್ಯಾಜ್ಯ ಮತ್ತು 2.1 ಟನ್‌ನಷ್ಟು ಇ-ತ್ಯಾಜ್ಯ, ಹಾನಿಕಾರಕ ತ್ಯಾಜ್ಯಗಳು ಉತ್ಪತ್ತಿಯಾಗುತ್ತಿದೆ. ಪ್ರತಿದಿನ ಒಟ್ಟು 9.2 ಟನ್ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಹಸಿ ತ್ಯಾಜ್ಯವನ್ನು ಸಂಪೂರ್ಣವಾಗಿ ಕಾಂಪೋಸ್ಟ್ ಮಾಡಲಾಗುತ್ತಿದ್ದು, ಇದರಿಂದ ಪ್ರತಿ ದಿನ 10 ಟನ್‌ಗಿಂತ ಹೆಚ್ಚು ಗೊಬ್ಬರ ಉತ್ಪತ್ತಿಯಾಗುತ್ತಿದೆ.
ಎಲ್‌ಸಿಟಾ ಸಹ ಎಲೆಕ್ಟ್ರಾನಿಕ್ ಸಿಟಿಯ ಆರ್ಗಾನಿಕ್ ವೇಸ್ಟ್ ಸೆಂಟರ್ ಮೂಲಕ 75ರಿಂದ 100ರಷ್ಟು ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಸಿಟಿಯ ರಸ್ತೆಗಳಲ್ಲಿರುವ ಮರಗಳಿಂದ ಉತ್ಪತ್ತಿಯಾಗುತ್ತಿರುವ ಸಸಿಗಳ ಎಲೆಗಳನ್ನು ಮತ್ತು ಕಂಪನಿಯ ಹಸಿ ತ್ಯಾಜ್ಯವನ್ನು ಇಲ್ಲಿ ಬಳಸಲಾಗುತ್ತಿದೆ. ಇದರಿಂದ ಉತ್ಪತ್ತಿಯಾಗುತ್ತಿರುವ ಗೊಬ್ಬರವನ್ನು ಎಲೆಕ್ಟ್ರಾನಿಕ್ ಸಿಟಿಯ ಮರಗಳಿಗೆ ಹಾಕಲಾಗುತ್ತಿದೆ.
ಈ ರೀತಿ ಕಂಪನಿಗಳು ಮತ್ತು ವಸತಿ ಸಮುತ್ಛಯಗಳು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ತಾವೇ ಸರ್ಮಪಕವಾಗಿ ನಿರ್ವಹಿಸಿದರೆ ಬಿಬಿಎಂಪಿಯ ಮೇಲಿನ ಅವಲಂಬನೆ ತಪ್ಪಲಿದೆ. ಜತೆಗೆ ಪಾಲಿಗೆಗೂ ಹೊರೆ ಕಡಿಮೆಯಾಗಲಿದೆ. ಇದೊಂದು ಮಾದರಿ ಯೋಜನೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
“ತ್ಯಾಜ್ಯ ಸಂಗ್ರಹಣೆಗೆ 4 ವಾಹನಗಳಿದ್ದು, 31 ಜನರ ತಂಡ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಟ್ಟುನಿಟ್ಟಾಗಿ ಕಸ ಸಂಗ್ರಹಿಸಿ ನೀಡುತ್ತಿರುವುದರಿಂದ ತ್ಯಾಜ್ಯದಿಂದ ಉಂಟಾಗುತ್ತಿದ್ದ ಸಮಸ್ಯೆ ಕಡಿಮೆಯಾಗಿದೆ. ಭಾನುವಾರ ಬಿಟ್ಟು ವಾರದ ಆರು ದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 5.30ರವರೆಗೆ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯ ವಿಂಗಡಣೆ ಬಗ್ಗೆಯೂ ಕೆಲವು ಕಂಪನಿಗಳ ಕೆಲಸಗಾರರಿಗೆ ತರಬೇತಿ ನೀಡಲಾಗಿದೆ’ ಎಂದು ಹಸಿರುದಳ ಇನೋವೇಶನ್ ಸಂಸ್ಥೆಯ ಸಹ ಸಂಸ್ಥಾಪಕ ಶೇಖರ್ ಪ್ರಭಾಕರ್ ಹೇಳುತ್ತಾರೆ.