Advertisement

ಸ್ವಾವಲಂಬಿ ಬದುಕಿಗೆ ದಾರಿದೀಪವಾದವರು

05:42 PM Mar 08, 2021 | Team Udayavani |

ಕೊಪ್ಪಳ: ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಂಡು ಇತರೆ ನಾಲ್ಕಾರು ಮಹಿಳೆಯರಿಗೆ ಕೆಲಸ ಕೊಟ್ಟಿರುವ ಇರಕಲ್‌ಗ‌ಡಾದ ಮಿನುಗುತಾರೆ ಸ್ವ ಸಹಾಯ ಮಹಿಳಾ ಸಂಘದ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು. ಇಲ್ಲಿನ ಮಹಿಳೆಯರು ಆಧುನಿಕತೆಗೆ ತಕ್ಕಂತೆ ಬಗೆ ಬಗೆ ಡಿಸೈನ್‌ಗಳಲ್ಲಿ ಎಲ್ಲ ಬಟ್ಟೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಲಾಕ್‌ ಡೌನ್‌ ಸಂದರ್ಭದಲ್ಲೂ ಹಗಲಿರುಳು ಶ್ರಮಿಸಿ ಮಾಸ್ಕ್, ಬ್ಯಾಗ್‌ಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ.

Advertisement

ಸ್ವಂತ ಉದ್ಯಮ ಸ್ಥಾಪಿಸುವುವು ಇಂದುಕಷ್ಟದ ಕೆಲಸ. ಇಂತಹ ಪರಿಸ್ಥಿತಿಯಲ್ಲೂ ನಾಲ್ವರು ಮಹಿಳೆಯರು ಸರ್ಕಾರದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಪಡೆದು ಸಣ್ಣ ಉದ್ಯಮ ಸ್ಥಾಪನೆ ಮಾಡಿ ನಾಲ್ಕಾರು ಜನರಿಗೂ ಉದ್ಯೋಗ ಕೊಟ್ಟಿರುವುದು ಸುಲಭದ ಮಾತಲ್ಲ. ಇರಕಲ್‌ ಗಡಾದ ಕವಿತಾ ಪಟ್ಟಣಶೆಟ್ಟರ್‌, ಕವಿತಾ ಹಿರೇಮಠ, ಲಲಿತಾ ಹಿರೇಮಠ, ನಿರ್ಮಲಾ ಮೂಲಿಮನಿ ಅವರ ಯಶೋಗಾಥೆ ನಿಜಕ್ಕೂ ಗಮನಾರ್ಹವಾಗಿದೆ. ಕವಿತಾ ಪಟ್ಟಣಶೆಟ್ಟಿ ಎನ್ನುವವರು 16 ವರ್ಷದ ಹಿಂದೆಯೇ ಟೈಲರಿಂಗ್‌ ಕಲಿತಿದ್ದರು. ಮನೆಯಲ್ಲಿಯೇ ನಿತ್ಯ ಟೈಲರಿಂಗ್‌ ಮಾಡಿಕೊಂಡು ಜೀವನ ನಡೆಸುತ್ತಿದ್ದ ಇವರು, ಕೆಲವು ವರ್ಷಗಳ ಹಿಂದೆ ಮನೆ ಪಕ್ಕದಲ್ಲೇಸಣ್ಣ ಅಂಗಡಿ ಮಾಡಿ ಅದರಲ್ಲಿ ನಾಲ್ಕು ಯಂತ್ರ ಇರಿಸಿ ಕಿರಿದಾದ ಉದ್ಯಮ ಸ್ಥಾಪಿಸಿ ಬಟ್ಟೆಯ ವ್ಯಾಪಾರ ಮಾಡುತ್ತಿದ್ದರು. ಸಣ್ಣ ಅಂಗಡಿ ತೆಗೆದು ಇವರೊಟ್ಟಿಗೆ ನಾಲ್ವರು ಸೇರಿಕೊಂಡು ಸಣ್ಣ ಗಾರ್ಮೆಂಟ್‌ಆರಂಭಿಸಬೇಕೆಂದು ಕನಸು ಕಟ್ಟಿಕೊಂಡು ಸರ್ಕಾರದ ಎನ್‌ಆರ್‌ಎಂಲ್‌ ಯೋಜನೆಯಡಿ 2 ಲಕ್ಷ ರೂ. ಸಾಲ ಪಡೆದು ಇರಕಲ್‌ಗ‌ಡಾದ ಗ್ರಾಪಂ ಕಟ್ಟಡದಲ್ಲೇ ಗಾರ್ಮೆಂಟ್‌ ಉದ್ಯಮ ಆರಂಭಿಸಿದ್ದಾರೆ.

ಈ ಗಾರ್ಮೆಂಟ್‌ನಲ್ಲಿ ನಾಲ್ಕಾರು ಯುವತಿಯರಿಗೆ, ಮಹಿಳೆಯರಿಗೆ ಟೈಲರಿಂಗ್‌ ತರಬೇತಿ ಹೇಳಿಕೊಡುವುದರ ಜೊತೆಗೆ ಕೆಲಸ ಕೇಳಿಕೊಂಡು ಬರುವ ಟೈಲರ್‌ ಕಲಿತ ಮಹಿಳೆಯರಿಗೆ ಕೆಲಸ ಕೊಡುತ್ತಿದ್ದಾರೆ. ಲಾಕ್‌ಡೌನ್‌ ವೇಳೆ ಯಾವುದೇ ವ್ಯಾಪಾರ ವಹಿವಾಟು ನಡೆಯದಂತಹ ಕಷ್ಟದ ಸ್ಥಿತಿಯಲ್ಲೂ ಮೂರು ತಿಂಗಳ ಕಾಲ ತಾಪಂಗೆ ಬಟ್ಟೆಯ ಮಾಸ್ಕ್ ಸಿದ್ಧಪಡಿಸಿ ಕೊಟ್ಟಿದ್ದಾರೆ. ಇದರಿಂದ ಅಲ್ಪಸ್ವಲ್ಪ ಆದಾಯಬಂದಿದೆ. ಈಚೆಗೆ ನೂತನವಾಗಿ ಆಯ್ಕೆಯಾದ ಗ್ರಾಪಂ ಸದಸ್ಯರಿಗೆ ಕೈ ಚೀಲ ವಿತರಣೆಗೆ ಜಿಪಂನಿಂದಲೂ ಆರ್ಡರ್‌ ಬಂದಿದ್ದು, ಅವುಗಳನ್ನು ಬಟ್ಟೆಯಿಂದಲೇ ಸಿದ್ಧಪಡಿಸಿ ಕೊಟ್ಟಿದ್ದಾರೆ. ಇದಲ್ಲದೇ ಬೆಂಗಳೂರಿನಿಂದಇಬ್ಬರು ಉದ್ಯಮಿಗಳು ಸಂಘವನ್ನು ಸಂಪರ್ಕಿಸಿ, ವಿವಿಧ ಪ್ರಕಾರದ ಬಟ್ಟೆ ಸಿದ್ಧಪಡಿಸಿ ಕೊಡುವ ಮಾತುಕತೆಯನ್ನೂ ನಡೆಸಿದ್ದಾರೆ.

ಇತರಿಗೆ ಉದ್ಯೋಗ: ಸಂಘದ ಸದಸ್ಯರು ತಾವು ಸ್ವಾವಲಂಬಿ ಬದುಕು ಕಂಡುಕೊಳ್ಳುವ ಜೊತೆಗೆ ಇತರೆ ನಾಲ್ಕಾರು ಮಹಿಳೆಯರಿಗೆ ಉದ್ಯೋಗ ಕೊಟ್ಟಿದ್ದಾರೆ. ಕೇವಲ ಒಂದೂವರೆ ವರ್ಷದಲ್ಲಿ ನಾಲ್ಕಾರು ಕುಟುಂಬಕ್ಕೆಪರೋಕ್ಷವಾಗಿ ಆಸರೆಯಾಗಿದ್ದಾರೆ. ಹೆಚ್ಚುವರಿ ಬಟ್ಟೆ ಹೊಲೆಯುವ ಬೇಡಿಕೆ ಬಂದರೆ, ಮನೆ ಮನೆಗಳಿಗೆ ಟೈಲರಿಂಗ್‌ ಕಲಿತ ಮಹಿಳೆಯರಿಗೆ ಮನೆಯಲ್ಲಿಯೇಕೆಲಸ ಕೊಡುವ ಇವರು ಮಹಿಳೆಯರು ಸ್ವಾವಲಂಬಿ ಜೀವನ ಎಂಬ ಉದ್ದೇಶ ಹೊಂದಿದ್ದಾರೆ.

ಆಧುನಿಕತೆಗೆ ತಕ್ಕಂತೆ ಈ ಸಂಘವು ಮಹಿಳೆಯರ ಎಲ್ಲ ಬಗೆಯ ಬಟ್ಟೆಗಳನ್ನು ಹೊಲಿಯುತ್ತಿದೆ. ಇವರ ಸ್ವಾವಲಂಬಿ ಸಾಧನೆಯ ಬಗ್ಗೆ ಸ್ವತಃ ಜಿಪಂ ತುಂಬ ಖುಷಿ ಪಟ್ಟಿದೆ. ಇದಲ್ಲದೇ ಸಚಿವ ಬಿ.ಸಿ. ಪಾಟೀಲ್‌ ಅವರೂ ಈಚೆಗೆ ಘಟಕಕ್ಕೆ ಭೇಟಿ ನೀಡಿ ಮೆಚ್ಚುಗೆ ಮಾತನ್ನಾಡಿದ್ದಾರೆ.

Advertisement

ಒಟ್ಟಿನಲ್ಲಿ ಮಹಿಳೆಯರು ನಾವು ಯಾರಿಗೂ ಕಡಿಮೆ ಇಲ್ಲವೆಂದು ಇರುವ ಊರಿನಲ್ಲಿಯೇ ಸ್ವಾವಲಂಬನೆಯ ಜೊತೆಗೆ ನಾಲ್ಕಾರು ಮಹಿಳೆಯರಿಗೆ ಉದ್ಯೋಗ ಕೊಟ್ಟು ಜೀವನೋಪಾಯಕ್ಕೆ ದಾರಿಯಾಗಿರುವುದು ನಿಜಕ್ಕೂ ಮೆಚ್ಚಲೇಬೇಕು.

ನಾವು ನಾಲ್ವರು ಸೇರಿ ಸಣ್ಣ ಟೈಲರಿಂಗ್‌ ಗಾರ್ಮೆಂಟ್‌ ಆರಂಭಿಸಿದ್ದೇವೆ. ಲಾಕ್‌ಡೌನ್‌ನಲ್ಲೂ ಶ್ರಮಿಸಿ ಮಾಸ್ಕ್ ಸೇರಿ ಕೈಚೀಲ ಸಿದ್ಧಪಡಿಸಿಕೊಟ್ಟಿದ್ದೇವೆ. ಇನ್ನೂ ಮಾರ್ಕೆಟಿಂಗ್‌ ಆಗಬೇಕಿದೆ. ಈಗಿನ ಹೊಸತನಕ್ಕೆ ತಕ್ಕಂತೆ ಎಲ್ಲ ಬಟ್ಟೆಗಳನ್ನು ಸಿದ್ಧಪಡಿಸಲಿದ್ದೇವೆ. ನಮ್ಮಲಿಯೇ ನಾಲ್ಕಾರು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. 100 ಜನರಿಗೆ ಕೆಲಸ ಕೊಡಬೇಕೆನ್ನುವ ಕನಸು ಕಂಡಿದ್ದೇನೆ. ಅದಕ್ಕಾಗಿ ಶ್ರಮಿಸುತ್ತಿದ್ದೇನೆ. – ಕವಿತಾ ಪ್ರಕಾಶ ಪಟ್ಟಣಶೆಟ್ಟರ್‌, ಮಿನುಗುತಾರೆ ಮಹಿಳಾ ಸ್ವಸಹಾಯ ಸಂಘದ ಮುಖ್ಯಸ್ಥೆ

 

­-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next