Advertisement

ಸ್ವಾವಲಂಬನೆಯೇ ಆತ್ಮನಿರ್ಭರತೆ ಉದ್ದೇಶ ; ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಭಿಮತ

10:50 AM May 26, 2020 | mahesh |

ಚಿಕ್ಕಮಗಳೂರು: ಆತ್ಮನಿರ್ಭರತೆ ಉದ್ದೇಶವೇ ಕುಟುಂಬ, ಸಮುದಾಯ,ದೇಶದ ಸ್ವಾವಲಂಬನೆ ಯಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಸೋಮವಾರ ನಗರದ ಮಧುವನ ಬಡಾವಣೆಯಲ್ಲಿ ಸೇವಾಭಾರತಿ ಆಶ್ರಯದಲ್ಲಿ ಆರಂಭಗೊಂಡ ವಿಜಯಭಾರತಿ ಹಣ್ಣು ಮತ್ತು ತರಕಾರಿ ಅಂಗಡಿ ಉದ್ಘಾಟಿಸಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆತ್ಮನಿರ್ಭರತೆ ಎಂದಿರುವುದು ಸ್ವಾಲಂಬನೆ ಬದುಕಿಗಾಗಿ ಒಂದು ಕಾಲದಲ್ಲಿ ವ್ಯಕ್ತಿಗತವಾಗಿ, ಕೌಟುಂಬಿಕವಾಗಿ, ಸಮಾಜಿಕವಾಗಿ ಮತ್ತು ರಾಷ್ಟ್ರವಾಗಿ ದೇಶ ಪೂರ್ಣ ಸ್ವಾಲಂಬಿಯಾಗಿತ್ತು ಎಂದರು.

Advertisement

ನಂತರ ದೇಶ ಸ್ವಾತಂತ್ರ್ಯ ಕಳೆದುಕೊಂಡು ದಾಸ್ಯಕ್ಕೆ ಒಳಗಾದ ಪರಿಣಾಮ ಕುಟುಂಬ ಹಾಗೂ ರಾಷ್ಟ್ರ ಸ್ವಾವಲಂಬನೆಗೆ ಧಕ್ಕೆ ಉಂಟಾಯಿತು. ಆಗ ವ್ಯಕ್ತಿಗತ
ಸ್ವಾವಲಂಬನೆಯೂ ಮರೆಯಾಯಿತು. ದೇಶ ಮತ್ತೆ ಸ್ವಾವಲಂಬನೆಯಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು
ಆತ್ಮನಿರ್ಭರತೆ ಬಗ್ಗೆ ಹೇಳಿದ್ದಾರೆ ಎಂದರು. ಈ ಹಿನ್ನೆಲೆಯಲ್ಲಿ ಸೇವಾಭಾರತಿ ಯುವಕರ ತಂಡ ಕಾಯಿಪಲ್ಲೆಯನ್ನು ಮಾರಾಟ ಮಾಡುವ ಮೂಲಕ ಸಣ್ಣ ಪ್ರಯತ್ನವನ್ನು ನಗರದಲ್ಲಿ ಆರಂಭಿಸಿದೆ. ಆರಂಭ ಶೂರತ್ವವಾಗದೆ ವ್ಯಾವಹಾರಿಕ ಹಿನ್ನೆಲೆಯಲ್ಲಿ ನಿರಂತರ ವ್ಯವಹಾರ ನಡೆಯಬೇಕಾಗಿದೆ ಎಂದು ತಿಳಿಸಿದರು.

ಲಾಭ ಗಳಿಕೆಯೇ ಮೂಲ ಉದ್ದೇಶವಾಗದೆ ಲಾಭವನ್ನು ಇಟ್ಟುಕೊಂಡು ಉತ್ಕೃಷ್ಟವಾದ ಸೇವೆ ನೀಡಿದಾಗ ಮಾತ್ರ ಉದ್ಯಮಕ್ಕೆ ಅಥವಾ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ. ಲಾಭವೇ ಉದ್ದೇಶವಾದರೆ ಕೆಲವು ದಿನ ಈ ಪ್ರಯತ್ನ ನಡೆದು ಆನಂತರ ವಿಶ್ವಾಸ ಮೆರೆಯಾಗುತ್ತದೆ. ಆದ್ದರಿಂದ ಲಾಭ ಮತ್ತು ಸೇವೆ
ಎರಡೂ ಸಮತೋಲನದಲ್ಲಿ ಇರಬೇಕು ಎಂದರು.

ಸೇವೆಯನ್ನೇ ಪ್ರಧಾನವಾಗಿ ತೆಗೆದುಕೊಂಡರೆ ಹೆಚ್ಚುದಿನ ಮಾಡಲಾಗದು. ಬದುಕಿನ ಸಂಕಷ್ಟಗಳು ಎದುರಾದಾಗ ಸೇವೆ ಹಿನ್ನೆಡೆಗೆ ಬರುತ್ತದೆ. ಕೇವಲ
ಲಾಭವೇ ಮುಖ್ಯವಾಗಿ ಗುಣಮಟ್ಟದ ಸೇವೆಗೆ ಆದ್ಯತೆ ನೀಡದಿದ್ದರೆ, ಅದು ಸಹ ಉದ್ಯಮವನ್ನು ಮುನ್ನಡೆಸದು. ಹಾಗಾಗಿ, ಎರಡೂ ಸಹ ಸಮವಾಗಿರಲಿ ಎಂದರು.
ವ್ಯವಹಾರದಲ್ಲಿ ಪಾರದರ್ಶಕತೆ ಜೊತೆಗೆ ಪ್ರಾಮಾಣಿಕತೆಯ ಚೌಕಟ್ಟನ್ನು ಹೊಂದಿರಬೇಕು. ಆಗ ಮಾತ್ರ ಯಶಸ್ಸು ಸಿಗುತ್ತದೆ. ಸ್ವಾವಲಂಬನೆ ದೂರದಲ್ಲಿದೆ.
ತಕ್ಷಣ ದೊರಕುವುದಲ್ಲ, ಯಾವುದೇ ಯಶಸ್ಸಿಗೆ ಮೊದಲ ಹೆಜ್ಜೆ ಮುಖ್ಯ ಎಂದರು.

ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಮಾತನಾಡಿ, ಜನರು ಗುಣಮಟ್ಟದ ಸೇವೆಯನ್ನು ಬಯಸುತ್ತಾರೆ. ಒಂದು ತರಕಾರಿ ಮಳಿಗೆಯಾಗಿ ಉಳಿಯದೆ ಮಾದರಿ
ತರಕಾರಿ ಮಳಿಗೆಯಾಗಬೇಕು. ಗುಣಮಟ್ಟ ಹಾಗೂ ನಿಖರ ಬೆಲೆಯಲ್ಲಿ ಒದಗಿಸಬೇಕು ಎಂದರು. ಈ ಸಂದರ್ಭದಲ್ಲಿ ಮಧುವನ ಬಡಾವಣೆ ಅಸೋಸಿಯೇಷನ್‌ ಅಧ್ಯಕ್ಷ ಮಾದಪ್ಪ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಿ.ಮಲ್ಲಿಕಾರ್ಜುನ್‌ ಉಪಸ್ಥಿತರಿದ್ದರು.

Advertisement

ಸೇವಾಭಾರತಿ ಮಳಿಗೆ ಹಣ್ಣು ತರಕಾರಿ ಲಾಭ ಗಳಿಕೆಗಾಗಿ ಮಾಡದೆ ಜನರಿಗೆ ಹೊರೆಯಾಗದಂತೆ ಉತ್ತಮ ತರಕಾರಿ ಮತ್ತು ಹಣ್ಣನ್ನು ನೀಡುವ ಉದ್ದೇಶ ಹೊಂದಿದೆ. ಲಾಭದ ಜೊತೆ ಸೇವೆಗೂ ಆದ್ಯತೆ ನೀಡಲಾಗುವುದು. ಸುಮಂತ್‌, ಸೇವಾಭಾರತಿ ಮಳಿಗೆ

Advertisement

Udayavani is now on Telegram. Click here to join our channel and stay updated with the latest news.

Next