ಮಡಿಕೇರಿ: ವಾಹನ ಅಪಘಾತದಲ್ಲಿ ಗಾಯಗೊಂಡ ಯುವಕ ಗಂಭೀರ ಸ್ಥಿತಿಯಲ್ಲಿರುವುದರಿಂದ “ಅದಕ್ಕೆ ನಾನು ಕಾರಣನಾದೆನಲ್ಲ’ ಎಂದು ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿ ತಾಲೂಕಿನ ಹೆರವನಾಡು ಗ್ರಾಮದ ಅಪ್ಪಂಗಳದಲ್ಲಿ ನಡೆದಿದೆ. ಕಾಕತಾಳೀಯ ಎಂಬಂತೆ ಯುವಕನೂ ಅದೇ ವೇಳೆಗೆ ಇಹಲೋಕ ತ್ಯಜಿಸಿದ್ದಾನೆ.
ಮಡಿಕೇರಿ ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಚೈನ್ ಗೇಟ್ ಬಳಿ ಇತ್ತೀಚೆಗೆ ಅಪಘಾತ ಸಂಭವಿಸಿತ್ತು. ಹಾಲೇರಿಯ ಕಾಂಡನಕೊಲ್ಲಿಯ ಅಯ್ಯಕುಟ್ಟಿರ ಜಯಗಣಪತಿ ಅವರ ಪುತ್ರ ಫೀ|ಮಾ| ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿ ಧನಲ್ ಸುಬ್ಬಯ್ಯ (24) ದ್ವಿಚಕ್ರ ಮಡಿಕೇರಿಯಿಂದ ಮನೆಗೆ ಮರಳುತ್ತಿದ್ದರು.
ಹೆರವನಾಡು ಗ್ರಾಮದ ಅಪ್ಪಂಗಳದ ಎಚ್.ಡಿ. ತಮ್ಮಯ್ಯ (57) ತಮ್ಮ ದ್ವಿಚಕ್ರ ವಾಹನದಲ್ಲಿ ಮತ್ತೊಂದು ಒಳ ರಸ್ತೆಯಿಂದ ಚೈನ್ ಗೇಟ್ ಬಳಿಯ ಮೈಸೂರು ರಸ್ತೆಗೆ ಪ್ರವೇಶಿಸಿದಾಗ ಎರಡೂ ವಾಹನಗಳು ಢಿಕ್ಕಿ ಹೊಡೆದುಕೊಂಡಿದ್ದವು. ನೆಲಕ್ಕುರುಳಿದ ಧನಲ್ ಮೇಲೆ ಲಾರಿಯೊಂದು ಹರಿದು ಗಂಭೀರ ಗಾಯಗೊಂಡಿದ್ದರು. ಅವರಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದಾಗ ಮೆದುಳು ನಿಷ್ಕ್ರಿಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವುದು ತಿಳಿದು ಬಂತು.
ಈ ನಡುವೆ ಸಣ್ಣಪುಟ್ಟ ಗಾಯಗಳಾಗಿದ್ದ ತಮ್ಮಯ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಧನಲ್‌ನ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯುತ್ತಲೇ ಇದ್ದ ಅವರು ನನ್ನಿಂದಾಗಿ ಯುವಕನ ಸ್ಥಿತಿ ಹೀಗಾಯಿತು ಎಂದು ನೊಂದುಕೊಳ್ಳುತ್ತಿದ್ದರು. ಶನಿವಾರ ರಾತ್ರಿ ಧನಲ್ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ ಎಂದು ತಿಳಿದು ಮತ್ತಷ್ಟು ಬೇಸರಗೊಂಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ರವಿವಾರ ನಸುಕಿನ 3ರಿಂದ 4 ಗಂಟೆ ಹೊತ್ತಿನಲ್ಲಿ ತೋಟದ ಮರಕ್ಕೆ ತಮ್ಮಯ್ಯ ನೇಣು ಬಿಗಿದು ಜೀವ ಕಳೆದುಕೊಂಡಿದ್ದಾರೆ. ಕಾಕತಾಳೀಯ ಎಂಬಂತೆ ಧನಲ್ ಕೂಡ ಇದೇ ಸಮಯದ ಆಸುಪಾಸಿನಲ್ಲಿ ಇಹಲೋಕ ತ್ಯಜಿಸಿರುವುದಾಗಿ ತಿಳಿದು ಬಂದಿದೆ.
ತಮ್ಮಯ್ಯ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಧನಲ್ ಹೆತ್ತವರು ಹಾಗೂ ಸಹೋದರನನ್ನು ಅಗಲಿದ್ದಾರೆ.