ಬೆಂಗಳೂರು: ಸರಕಾರದ ಮಹತ್ವಾಕಾಂಕ್ಷಿ ಓಬವ್ವ ಆತ್ಮರಕ್ಷಣ ಕಲೆ ತರಬೇತಿಯು ಇನ್ನು ಮುಂದೆ ಪೊಲೀಸ್ ತರಬೇತಿ ಶಾಲೆ(ಪೊಲೀಸ್ ಟ್ರೈನಿಂಗ್ ಸ್ಕೂಲ್)ಗಳಲ್ಲಿ ನಡೆಯಲಿದೆ.
ರಾಜ್ಯದ 12 ಪೊಲೀಸ್ ತರಬೇತಿ ಶಾಲೆಗಳನ್ನು ಮಹಿಳಾ ಆತ್ಮರಕ್ಷಣ ತರಬೇತಿಗೆ ಬಳಕೆ ಮಾಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ಪೊಲೀಸ್ ತರಬೇತಿ ಶಾಲೆಗಳಲ್ಲಿ ಈ ಯೋಜನೆ ಅಡಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧ ಮುಂಭಾಗ ರವಿವಾರ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಓಬವ್ವ ಆತ್ಮ ರಕ್ಷಣ ಕಲೆಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆ ಜತೆಗೆ ಹೆಣ್ಣುಮಕ್ಕಳಿಗೆ ಮಿಲಿಟರಿಗೆ ಸಮಾನ ವಾದ ತರಬೇತಿಯೊಂದಿಗೆ ವಿವಿಧ ಶಾಲಾ-ಕಾಲೇಜುಗಳ ಸುಮಾರು 50 ಸಾವಿರ ಎನ್‌ಸಿಸಿ ಕೆಡೆಟ್‌ಗಳನ್ನು ಸೇರ್ಪಡೆಗೊಳಿಸುವ ಗುರಿ ಕೂಡ ಇದೆ ಎಂದರು.
ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ 7,500 ಹೊಸ ಕೆಡೆಟ್‌ಗಳನ್ನು ಎನ್‌ಸಿಸಿಗೆ ಸೇರ್ಪಡೆಗೊಳಿಸಲಾಗುತ್ತಿದೆ.
ಇವರಿಗೆ ತಲಾ 12 ಸಾವಿರ ರೂ. ಅನುದಾನ ನೀಡಲಾಗುತ್ತಿದೆ. 75 ಹೊಸಘಟಕಗಳನ್ನು ಶಾಲಾ- ಕಾಲೇಜುಗಳಲ್ಲಿ ತೆರೆಯಲು ತೀರ್ಮಾನಿಸಲಾಗಿದೆ. 44 ಸಾವಿರ ಎನ್‌ಸಿಸಿ ಕೆಡೆಟ್‌ಗಳಿಗೆ ತರಬೇತಿಗೆ ಅನುಮತಿ ಕೋರ ಲಾಗಿದೆ. ಒಟ್ಟು 50 ಸಾವಿರಕ್ಕಿಂತ ಹೆಚ್ಚು ಕೆಡೆಟ್‌ಗಳನ್ನು ಎನ್‌ಸಿಸಿಗೆ 2023ನೇ ಸಾಲಿನಲ್ಲಿ ಸೇರ್ಪಡೆ ಮಾಡಲಾಗುವುದು ಎಂದರು. ಇವರಿಗೆ ಮಿಲಿಟರಿಗೆ ಸಮಾನವಾದ ತರಬೇತಿ ಜತೆಗೆ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.