ಮನ್ ಕೀ ಬಾತ್‌ನಲ್ಲಿ ಮಾತನಾಡಿದ ಪ್ರಧಾನಿ
ಲಾಕ್‌ಡೌನ್‌ಗಿಂತಲೂ ಸ್ವಯಂ ರಕ್ಷಣೆಯೇ ಪ್ರಧಾನ ಅಸ್ತ್ರ
ದುಡಿಮೆಯ ಜೊತೆಗೆ ದೇಶದ ಆರ್ಥಿಕತೆಯನ್ನೂ ಬೆಳೆಸಬೇಕು
ದೇಶದ ಜನತೆಗೆ ಪ್ರಧಾನಿಯ ಕರೆ
ಹೊಸದಿಲ್ಲಿ: “”ಮಾನವನ ಅಸ್ತಿತ್ವಕ್ಕೆ ಸವಾಲೊಡ್ಡಿರುವ ಕೋವಿಡ್ ನ್ನು ಮಣಿಸುವುದೆಂದರೆ ಲಾಕ್‌ಡೌನ್ ಮಾಡಿಕೊಂಡು ಮನೆಯಲ್ಲಿ ಕುಳಿತುಕೊಳ್ಳುವುದಲ್ಲ… ಬದಲಿಗೆ, ಸ್ವಯಂ ರಕ್ಷಣೆಯನ್ನು ಮಾಡಿಕೊಳ್ಳುತ್ತಲೇ ನಾವು ದಿನಂಪ್ರತಿ ಈ ಪಿಡುಗಿನ ಜೊತೆಗೆ ಹೋರಾಡಬೇಕಿದೆ” ಎಂದು ಪ್ರಧಾನಿ ನರೇಂದ್ರ ಮೋದಿ, ದೇಶಬಾಂಧವರಿಗೆ ಕರೆ ನೀಡಿದ್ದಾರೆ.
ರವಿವಾರದಂದು, ಆಕಾಶವಾಣಿಯಲ್ಲಿ ಮೂಡಿಬರುವ ತಮ್ಮ ಮಾಸಿಕ ಕಾರ್ಯಕ್ರಮವಾದ “ಮನ್ ಕೀ ಬಾತ್’ನ 66ನೇ ಸಂಚಿಕೆಯಲ್ಲಿ ಅವರು ಮಾತನಾಡಿ, “ಅನ್‌ಲಾಕ್ ಘಟ್ಟದಲ್ಲಿ ದೇಶದ ಪ್ರತಿಯೊಬ್ಬರು ಎರಡು ಅಂಶಗಳ ಮೇಲೆ ಹೆಚ್ಚಿನ ಗಮನ ಕೊಡಬೇಕಿದೆ. ಒಂದು – ಕೊರೊನಾ ವೈರಸ್ ವಿರುದ್ಧ ಹೋರಾಡುವುದು ಹಾಗೂ ಎರಡನೆಯದ್ದು – ದೇಶದ ಆರ್ಥಿಕತೆ ಬೆಳೆಸುವುದು. ಲಾಕ್‌ಡೌನ್ ಅವಧಿಯಲ್ಲಿ ನಾವೆಷ್ಟು ಹುಷಾರಾಗಿದ್ದೆವೋ ಅದಕ್ಕಿಂತ ಹೆಚ್ಚು ಹುಷಾರುತನವನ್ನು ನಾವು ಅನ್‌ಲಾಕ್ ಅವಧಿಯಲ್ಲಿ ಪಾಲಿಸಬೇಕಿದೆ. ಅದಕ್ಕಾಗಿ, ವ್ಯಕ್ತಿಗಳ ನಡುವೆ ಕನಿಷ್ಟ 2 ಅಡಿಗಳ ಅಂತರ ಕಾಪಾಡಿಕೊಳ್ಳಬೇಕಿರುತ್ತದೆ. ಹಾಗೆಯೇ, ಮಾಸ್ಕ್ ಗಳನ್ನು ಧರಿಸುವುದರ ಜೊತೆಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕಿದೆ. ಇದ್ಯಾವುದನ್ನೂ ಪಾಲಿಸದೇ ಇದ್ದರೆ, ನಿಮ್ಮ ಕುಟುಂಬದವರನ್ನು, ನಿಮ್ಮ ಮನೆಯ ಮಕ್ಕಳು, ಹಿರಿಯನ್ನು ನೀವೇ ತೊಂದರೆಗೆ ಒಳಪಡಿಸಿದಂತಾಗುತ್ತದೆ” ಎಂದು ತಿಳಿಸಿದರಲ್ಲದೆ, “”ದೇಶದ ಎಲ್ಲಾ ವಾಸಿಗಳೂ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ನಿಮ್ಮ ಬಗ್ಗೆ ನಿಮ್ಮ ಕುಟುಂಬದವರ ಬಗ್ಗೆ ಕಾಳಜಿ ವಹಿಸಬೇಕು” ಎಂದು ಕರೆ ನೀಡಿದರು.
“”ದೇಶವಾಸಿಗಳು 2020ನೇ ವರ್ಷ ಯಾವಾಗ ಮುಗಿಯುತ್ತದೋ ಎಂದು ಲೆಕ್ಕಹಾಕುತ್ತಿದ್ದಾರೆ. ಈ ವರ್ಷ ಕೊರೊನಾ ಸೇರಿದಂತೆ ಹಲವಾರು ಸವಾಲುಗಳನ್ನು ನಾವು ಎದುರಿಸಿದ್ದೇವೆ. ಕೆಲವು ದಿನಗಳ ಹಿಂದೆ ಅಂಫಾನ್, ನಿಸರ್ಗ್ ಎಂಬ ಚಂಡಮಾರುತಗಳನ್ನು ಎದುರಿಸಿದೆವು. ಹಲವಾರು ರಾಜ್ಯಗಳಲ್ಲಿ ರೈತರು ಬೆಳ ಭಕ್ಷಕ ಮಿಡತೆಗಳ ಕಾಟ ಎದುರಿಸಿದರು. ಈಗಷ್ಟೇ ಅಲ್ಲ, ನಮ್ಮ ದೇಶ ಇಂಥ ಹಲವಾರು ಸವಾಲುಗಳನ್ನು ಎದುರಿಸಿರುವುದಾಗಿ ನಮ್ಮ ಇತಿಹಾಸ ಹೇಳುತ್ತದೆ. ಹಲವಾರು ಸೋಲುಗಳನ್ನು ಯಶಸ್ಸಿನ ಸೋಪಾನಗಳಾಗಿ ನಾವು ಬದಲಾಯಿಸಿಕೊಂಡಿದ್ದೇವೆ. ಅದೇ ತೆರನಾಗಿ, ಕೊರೊನಾ ಎಂಬ ಹೊಸ ಸವಾಲನ್ನೂ ನಾವು ಮೆಟ್ಟುವ ಸಾಧ್ಯತೆಗಳಿವೆ” ಎಂದು ಪ್ರಧಾನಿ ತಿಳಿಸಿದ್ದಾರೆ.
ಮೇ 30ರಂದು, ಲಾಕ್‌ಡೌನ್ 5.0 ಮುಕ್ತಾಯವಾಗಿದ್ದ ಹಿನ್ನೆಲೆಯಲ್ಲಿ ಜೂ. 1ರಿಂದ ಅನ್‌ಲಾಕ್ ಆರಂಭವಾಗಿದ್ದು, ಜೂ. 30ರವರೆಗೆ ಮುಂದುವರಿಯಲಿದೆ. ಈ ಹಂತದಲ್ಲಿ ಕೇವಲ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಮಾತ್ರ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದೆ. ಉಳಿದೆಡೆ ಹಲವರು ನಿರ್ಬಂಧಗಳನ್ನು ಸರಳಗೊಳಿಸಲಾಗಿದೆ. ಜೂ. 17ರಂದು ಎಲ್ಲಾ ಮುಖ್ಯಮಂತ್ರಿಗಳ ಸಭೆ ನಡೆಸಿದ್ದ ಪ್ರಧಾನಿ ಮೋದಿ, ಜೂ. 30ರ ನಂತರ ಅನ್‌ಲಾಕ್ 2.0ನಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚಿಸಿದ್ದರು.