ಉಡುಪಿ: ಅಖೀಲ ಭಾರತ ಮಟ್ಟದಲ್ಲಿ ನಿರ್ಬಂಧ ಮುಕ್ತಾಯವಾದ ಬಳಿಕ ಜನರು ಸ್ವರಕ್ಷಣೆ ಮಾಡಿ ಕೊಳ್ಳಬೇಕಾಗುತ್ತದೆ ಎಂದು ಉಸ್ತುವಾರಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಭಾರತೀಯ ವೈದ್ಯ ಮಂಡಳಿ ಸದಸ್ಯರು ಮತ್ತು ಸರಕಾರಿ ವಲಯದ ವೈದ್ಯರ ಸಭೆಯಲ್ಲಿ ಅವರು ಮಾತನಾಡಿ, ಆರೋಗ್ಯ ಕ್ಷೇತ್ರದವರು ನಡೆಸುತ್ತಿರುವ ಸೇವೆಗೆ ಮೆಚ್ಚುಗೆ ಸೂಚಿಸಿದರು. ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಯನ್ನು ಕೋವಿಡ್ 19 ಆಸ್ಪತ್ರೆಯಾಗಿ ಸೇವೆ ಸಲ್ಲಿಸುತ್ತಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಲಾಕ್‌ಡೌನ್ ಮುಗಿದ ಬಳಿಕ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಹೊರ ಜಿಲ್ಲೆಗಳಿಂದ ಜನರು ಒಮ್ಮೆಲೆ ಬರುವುದು ನಡೆಯುವ ಕಾರಣ ನಿಭಾಯಿಸುವುದು ಕಷ್ಟ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದರು.
ಕೋವಿಡ್ 19 ತರಾತುರಿಯಲ್ಲಿ ಇತರ ರೋಗಿಗಳನ್ನೂ ಗಮನಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳ ವೈದ್ಯರ ಸೇವೆ ಬಹು ಅಮೂಲ್ಯವಾದುದು ಎಂದು ಸಚಿವರು ತಿಳಿಸಿದರು.
ಐಎಂಎ ಅಧ್ಯಕ್ಷ ಡಾ| ಉಮೇಶ ಪ್ರಭು, ಡಾ| ಸುದರ್ಶನ್ ರಾವ್, ಡಾ| ಪಿ.ವಿ. ಭಂಡಾರಿ, ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ|ಅವಿನಾಶ ಶೆಟ್ಟಿ, ಡಾ| ಟಿಎಂಎ ಪೈ ಕೋವಿಡ್ 19 ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ| ಶಶಿಕಿರಣ್ ಉಮಾಕಾಂತ್ ಮೊದಲಾದವರು ಆಸ್ಪತ್ರೆಗಳಲ್ಲಿ ಕೈಗೊಂಡ ಪ್ರತ್ಯೇಕ ಫೀವರ್ ಕ್ಲಿನಿಕ್, ಸಾಮಾಜಿಕ ಅಂತರ ಕಾಪಾಡುವಿಕೆ, ಇತರ ರೋಗಗಳಿಗೆ ಪ್ರತ್ಯೇಕ ವ್ಯವಸ್ಥೆಗಳ ಬಗ್ಗೆ ತಿಳಿಸಿದರು.
ಹೊರಜಿಲ್ಲೆಗಳಿಂದ ಬರುವ ಜನರನ್ನು ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಿಸುವುದು, ರೋಗಿಗಳಿಗೆ ಅನು ಕೂಲವಾಗಲು ಮೊಬೈಲ್ ಕ್ಲಿನಿಕ್‌ಗಳನ್ನು ತೆರೆಯುವುದೇ ಮೊದಲಾದ ಸಲಹೆ ನೀಡಿದರು.