Advertisement

JDS: ಜೆಡಿಎಸ್‌ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ?

03:42 PM Feb 26, 2024 | Team Udayavani |

ಸಕಲೇಶಪುರ: 2 ದಶಕಗಳ ನಂತರ ತಾಲೂಕು ಜೆಡಿಎಸ್‌ನಲ್ಲಿ ಬದಲಾವಣೆ ಗಾಳಿ ಬೀಸುವುದು ಬಹುತೇಕ ಖಚಿತವಾಗಿದೆ. ಸುಮಾರು 19 ವರ್ಷಗಳ ಕಾಲ ನಿರಂತರವಾಗಿ ತಾಲೂಕು ಜೆಡಿಎಸ್‌ ಶಾಸಕರ ಆಡಳಿತದಲ್ಲಿದ್ದ ಪರಿಣಾಮ ಪಕ್ಷದ ಪದಾಧಿಕಾರಿಗಳ ಬದಲಾವಣೆ ಕೂಗು ಆಗಾಗ ಏಳುತ್ತಲೆಯಿದ್ದರೂ ಪಕ್ಷ ಅಧಿಕಾರದಲ್ಲಿದ್ದರಿಂದ ಪಕ್ಷದ ಪಧಾಧಿಕಾರಿಗಳನ್ನು ಬದಲಾವಣೆ ಮಾಡಲು ಪಕ್ಷದ ಹೈಕಮಾಂಡ್‌ ಮುಂದಾಗಿರಲಿಲ್ಲ.

Advertisement

2004- 2023ರವರೆಗೆ ಜೆಡಿಎಸ್‌ ಆಡಳಿತ: 2004ರಲ್ಲಿ ಜೆಡಿಎಸ್‌ನಿಂದ ಎಚ್‌.ಎಂ. ವಿಶ್ವನಾಥ್‌ ಶಾಸಕರಾಗಿ ಆಯ್ಕೆಯಾದ ಪಕ್ಷವನ್ನು ಅತ್ಯಂತ ಸುಭ ದ್ರವಾಗಿ ಕಟ್ಟಿದರು. ವಿಶ್ವನಾಥ್‌ ಆಡಳಿತದಲ್ಲಿದ್ದ ವೇಳೆ ಜೆಡಿಎಸ್‌ ತಾಲೂಕು ಘಟಕವನ್ನು ರಚಿಸಲಾಯಿತು. ಕೆ.ಎಲ್‌ ಸೋಮಶೇಖರ್‌ ತಾಲೂಕು ಅಧ್ಯಕ್ಷರಾಗಿ ಹಾಗೂ ಸ.ಭಾ. ಭಾಸ್ಕರ್‌ ಯುವ ಜನತಾದಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇನ್ನು ಹಲವರಿಗೆ ವಿವಿಧ ಹುದ್ದೆಗಳನ್ನು ನೀಡಲಾಗಿತ್ತು. ವಿಶ್ವನಾಥ್‌ ಅಧಿಕಾರದಲ್ಲಿದ್ದ ವೇಳೆ ಜಿಪಂ, ತಾಪಂ , ಸೇರಿದಂತೆ ಬಹುತೇಕ ಗ್ರಾಪಂಗಳು ಜೆಡಿಎಸ್‌ ಆಡಳಿತಕ್ಕೆ ಒಳಪಟ್ಟಿತ್ತು.

ವಿಶ್ವನಾಥ್‌ಗೆ ತಪ್ಪಿದ ಅವಕಾಶ: 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾಗಿ ಮೀಸಲು ಕ್ಷೇತ್ರವಾದ ಹಿನ್ನೆಲೆಯಲ್ಲಿ ವಿಶ್ವನಾಥ್‌ ಸ್ಪರ್ಧಿಸುವ ಅವಕಾಶ ಕಳೆದುಕೊಂಡರು. ಸಕಲೇಶಪುರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಪ್ರಬಲ ದಲಿತ ಅಭ್ಯರ್ಥಿ ಇರದ ಕಾರಣ ಈ ಹಿನ್ನೆಲೆಯಲ್ಲಿ ಬೇಲೂರು ಕ್ಷೇತ್ರದ ಶಾಸಕರಾಗಿದ್ದ ಎಚ್‌.ಕೆ ಕುಮಾರಸ್ವಾಮಿರವರಿಗೆ ಸಕಲೇಶಪುರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಯಿತು.

2008- 2023ರವರೆಗೆ ಎಚ್‌ಕೆಕೆ ಹವಾ: 2008ರ ಚುನಾವಣೆಯಲ್ಲಿ ಎಚ್‌.ಕೆ ಕುಮಾರಸ್ವಾಮಿ 13,295 ಮತಗಳಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ನಿರ್ವಾಣಯ್ಯರವರನ್ನು ಸೋಲಿಸಿದರು. ಈ ವೇಳೆ ವಿಶ್ವನಾಥ್‌ ಪಕ್ಷವನ್ನು ಸಧೃಡವಾಗಿ ಕಟ್ಟಿದ್ದರಿಂದ ಕುಮಾರಸ್ವಾಮಿರವರಿಗೆ ಸಂಪೂರ್ಣವಾಗಿ ಅದರ ಫ‌ಲ ದಕ್ಕಿತು. 2013ರ ಚುನಾವಣೆಯಲ್ಲಿ ಮಾಜಿ ಶಾಸಕ ಎಚ್‌.ಎಂ ವಿಶ್ವನಾಥ್‌ ಹಾಗೂ ಪಕ್ಷದ ಹೈಕಮಾಂಡ್‌ ನಡುವೆ ಸಂಬಂಧ ಹದಗೆಟ್ಟಿದ್ದರಿಂದ ವಿಶ್ವನಾಥ್‌ ಕೆಜೆಪಿ ಸೇರಿದರು. ಬಿಜೆಪಿ-ಕೆಜೆಪಿಯೆಂದು ಮತಗಳು ವಿಭಜನೆ, ತಾಲೂಕಿನಲ್ಲಿ ವಿರೋಧ ಪಕ್ಷಗಳಿಂದಾದ ಗೊಂದಲ ಬಳಸಿಕೊಂಡ ಎಚ್‌.ಕೆ ಕುಮಾರಸ್ವಾಮಿ 2013 ಚುನಾವಣೆಯಲ್ಲಿ 33,069 ಮತಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಮಲ್ಲೇಶ್‌ರವರನ್ನು ಸೋಲಿಸಿದರು. ಎಚ್‌ಕೆಕೆ ಪಕ್ಷವನ್ನು ಸಂಘಟಿಸಿದರು.

ಜಿಪಂ, ತಾಪಂ ಪುರಸಭೆ ಸೇರಿದಂತೆ ಹಲವು ಗ್ರಾಪಂಗಳು ಜೆಡಿಎಸ್‌ ಹಿಡಿತದಲ್ಲಿದ್ದವು. 2018ರಲ್ಲಿ ಕುಮಾರಸ್ವಾಮಿ ವಿರುದ್ಧ ಆಡಳಿತ ವಿರೋಧಿ ಅಲೆ ಕಂಡು ಬಂದರೂ ಎದುರಾಳಿ ಬಿಜೆಪಿಯ ನಾರ್ವೆ ಸೋಮಶೇಖರ್‌ ಚುನಾವಣೆ ತಂತ್ರಗಾರಿಕೆ ಹೆಣೆಯಲು ವಿಫ‌ಲರಾದ ಕಾರಣ 4,942 ಮತಗಳಿಂದ ಮತ್ತೂಮ್ಮೆ ಎಚ್‌.ಕೆ ಕುಮಾರಸ್ವಾಮಿ ಅಧಿಕಾರ ಪಡೆದರು. ಆದರೆ ತಾಪಂ ಆಡಳಿತ ಬಿಜೆಪಿ ಹಾಗೂ ಕಾಂಗ್ರೆಸ್‌ ಮೈತ್ರಿಗೆ ಒಳಪಟ್ಟಿತ್ತು. ಜಿ.ಪಂ 3 ಕ್ಷೇತ್ರಗಳು ಸೇರಿದಂತೆ ಹಲವು ಗ್ರಾಪಂಗಳು, ಪುರಸಭೆ ಜೆಡಿಎಸ್‌ ಹಿಡಿತದಲ್ಲೆ ಇತ್ತು.

Advertisement

ಜೆಡಿಎಸ್‌ ಭದ್ರಕೋಟೆ ಛಿದ್ರ: 2023ರ ಚುನಾವಣೆಯಲ್ಲಿ ರಾಜ್ಯದೆಲ್ಲೆಡೆ ಬಿಜೆಪಿ ಅಸ್ತಿತ್ವ ಕಳೆದುಕೊಂಡರೂ ಸಕಲೇಶಪುರ ಕ್ಷೇತ್ರದಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಸಿಮೆಂಟ್‌ ಮಂಜು ಕೇವಲ 2,056 ಮತಗಳಿಂದ ಜೆಡಿಎಸ್‌ನ ಹ್ಯಾಟ್ರಿಕ್‌ ಹೀರೋ ಕುಮಾರಸ್ವಾಮಿ ಅವರನ್ನು ಪರಾಜಿತಗೊಳಿಸಿದರು. ಚುನಾವಣೆ ಯಲ್ಲಿ ಸಿಮೆಂಟ್‌ ಮಂಜು ಲೆಕ್ಕಕ್ಕೆ ಇಲ್ಲ ಮೂರನೇ ಸ್ಥಾನ ಖಚಿತ ಎಂದು ಕೊಂಡಿದ್ದೇ ಮುಳುವಾ ಯಿತು. ಕ್ಷೇತ್ರದಲ್ಲಿ ಜೆಡಿಎಸ್‌ ಪರಾಭವಗೊಂಡು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಪರಿಣಾಮ ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರು ಅಸ್ತಿತ್ವಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಇದರ ನಡುವೆ ಲೋಕಾ ಚುನಾವಣೆ ಬಿಜೆಪಿ-ಜೆಡಿಎಸ್‌ ಮೈತ್ರಿ ಏರ್ಪಟ್ಟು ಜೆಡಿಎಸ್‌ ಕಾರ್ಯಕರ್ತರು ಬಿಜೆಪಿ ಶಾಸಕ ಸಿಮೆಂಟ್‌ ಮಂಜುರವರನ್ನು ವಿರೋಧಿಸಲಾಗದೆ ಇತ್ತ ಅವರನ್ನು ಒಪ್ಪಿಕೊಳ್ಳಲಾಗದೆ ತಟಸ್ಥರಾಗಬೇಕಾಯಿತು.

ತಾಲೂಕು ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳು :

ಮಸ್ತಾರೆ ಲೋಕೇಶ್‌: ವೀರಶೈವ ಜನಾಂಗಕ್ಕೆ ಸೇರಿರುವ ಮಸ್ತಾರೆ ಲೋಕೇಶ್‌  2.5 ದಶಕಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದು 2023ರ ವಿಧಾ® ‌ ಸಭಾ ಚುನಾವಣೆಯಲ್ಲಿ ಜೆಡಿಎಸ್‌ ಸೇರ್ಪಡೆ ಗೊಂಡಿ ದ್ದರು. ಈ ಬಾರಿಯ ಜೆಡಿಎಸ್‌ ತಾಲೂಕು ಅಧ್ಯಕ್ಷ ಸ್ಥಾನ ಇವರಿಗೆ ನೀಡಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಪಕ್ಷದ ಹೈಕಮಾಂಡ್‌ ಈ ಕುರಿತು ಚರ್ಚೆ ನಡೆಸುತ್ತಿದೆ.

ಕುಮಾರಸ್ವಾಮಿ: ಹಾನುಬಾಳ್‌ ಜಿಪಂ ಕ್ಷೇತ್ರದಿಂದ ಒಮ್ಮೆ ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದ ಕುಮಾರ ಸ್ವಾಮಿ ವೀರಶೈವ ಜನಾಂಗಕ್ಕೆ ಸೇರಿದ್ದು ಪಕ್ಷಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಹೇಗೆ ಎಂಬ ಲೆಕ್ಕಚಾರದಲ್ಲಿ ಪಕ್ಷದ ಹೈಕಮಾಂಡ್‌ ಗಮನದಲ್ಲಿದೆ.

ದೇವರಾಜ್‌: ಬೆಳಗೋಡು ಹೋಬಳಿ ಹಿರಿಯ ಮುಖಂಡ ದೇವರಾಜ್‌ ವೀರಶೈವ ಜನಾಂಗಕ್ಕೆ ಸೇರಿದ್ದು ನಿರಂತರವಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಇವರ ಪರ ಬೆಳಗೋಡು ಹೋಬಳಿಯ ಕೆಲವು ಮುಖಂಡರು ಬ್ಯಾಟಿಂಗ್‌ ಆಡುತ್ತಿದ್ದಾರೆ.

ಸಚ್ಚಿನ್‌ ಪ್ರಸಾದ್‌: ಜೆಡಿಎಸ್‌ನ ಯುವ ಮುಖಂಡ ಸಚ್ಚಿನ್‌ ಪ್ರಸಾದ್‌ ಮಾಜಿ ಸಚಿವ ಎಚ್‌.ಡಿ ರೇವಣ್ಣ ಕುಟುಂಬಕ್ಕೆ ಆಪ್ತರು. ಪ್ರಬಲ ಒಕ್ಕಲಿಗ ಜನಾಂಗಕ್ಕೆ ಸೇರಿರುವ ಇವರು ಜೆಡಿಎಸ್‌ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಅಕಾಂಕ್ಷಿಯಾಗಿದ್ದಾರೆ.

ಸುಪ್ರದೀಪ್ತ್ ಯಜಮಾನ್‌: ಮಾಜಿ ಜಿ.ಪಂ ಉಪಾಧ್ಯಕ್ಷ ಸುಪ್ರದೀಪ್ತ್ ಯಜಮಾನ್‌ ತಮ್ಮದೇ ಆದ ಯುವ ಪಡೆಯನ್ನು ಕ್ಷೇತ್ರದಲ್ಲಿ ಹೊಂದಿದ್ದು, ಅಲ್ಲದೆ ಪ್ರಬಲ ಒಕ್ಕಲಿಗ ಜನಾಂಗಕ್ಕೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇವರು ಪ್ರಬಲ ಅಕಾಂಕ್ಷಿಯಾಗಿದ್ದಾರೆ.

ಬೆಕ್ಕನಹಳ್ಳಿ ನಾಗರಾಜ್‌: ಜೆಡಿಎಸ್‌ನ ಹಿರಿಯ ಮುಖಂಡ ಬೆಕ್ಕನಹಳ್ಳಿ ನಾಗರಾಜ್‌ ಪ್ರಬಲ ಒಕ್ಕಲಿಗ ಜನಾಂಗಕ್ಕೆ ಸೇರಿದ್ದು ಬೆಳೆಗಾರರ ಸಂಘಟನೆಯಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿದ್ದಾರೆ. ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಪ್ರಬಲ ಅಕಾಂಕ್ಷಿಯಾಗಿದ್ದಾರೆ.

ಸ.ಭಾ ಭಾಸ್ಕರ್‌: ಯುವ ಜೆಡಿಎಸ್‌ ಅಧ್ಯಕ್ಷರಾಗಿದ್ದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಸೋಲಿನ ನಂತರ ಯುವ ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಒಕ್ಕಲಿಗ ಜನಾಂಗಕ್ಕೆ ಸೇರಿರುವ ಇವರೂ ಅಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿಯಾಗಿದ್ದಾರೆ.

ಜಾತಹಳ್ಳಿ ಪುಟ್ಟಸ್ವಾಮಿ: ಒಕ್ಕಲಿಗ ಜನಾಂಗಕ್ಕೇ ಸೇರಿರುವ ಜಾತಹಳ್ಳಿ ಪುಟ್ಟಸ್ವಾಮಿ ಸಹ ಜೆಡಿಎಸ್‌ನ ಹಿರಿಯ ಮುಖಂಡರಾಗಿದ್ದು ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಅಕಾಂಕ್ಷಿಯಾಗಿದ್ದಾರೆ.

ಇನ್ನು ಯುವ ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಮಾಜಿ ತಾಲೂಕು ಅಧ್ಯಕ್ಷ ಕೆ.ಎಲ್‌ ಸೋಮಶೇಖರ್‌ರವರ ಪುತ್ರ ಮಾಜಿ ಎಪಿಎಂಸಿ ಅಧ್ಯಕ್ಷ ಕವನ್‌ ಗೌಡ ಹಾಗೂ ಪುರಸಭಾ ಸದಸ್ಯ ಪ್ರಜ್ವಲ್‌ ಗೌಡ ಇವರುಗಳ ನಡುವೆ ಪೈಪೋಟಿ ಇದೆ ಎನ್ನಲಾಗುತ್ತಿದೆ.

ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next