ಬೆಂಗಳೂರು: ರಾಜ್ಯದ ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬುಧವಾರದೊಳಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ನಿರ್ಧರಿಸಿದೆ.
ಈ ನಡುವೆ ಕೆಲ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಲು ಲಾಬಿ ನಡೆಸಿದ್ದು, ಕೊನೆಯ ಕ್ಷಣದಲ್ಲಿ ಮುಖಂಡರ ವಿಶ್ವಾಸ ಗಿಟ್ಟಿಸುವ ಪ್ರಯತ್ನ ಮುಂದುವರಿಸಿದ್ದಾರೆ.
ಜಮಖಂಡಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಮವಾರ ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ಸಭೆ ಬಳಿಕ ಪ್ರತಿಕ್ರಿಯಿಸಿದ ಜಮಖಂಡಿ ಮಂಡಲ ಬಿಜೆಪಿ ಅಧ್ಯಕ್ಷ ಈಶ್ವರ್ ಆದ್ಯಪ್ಪನವರ್, ಕಳೆದ ಬಾರಿ ಸ್ಪರ್ಧಿಸಿದ್ದ ಶ್ರೀಕಾಂತ್ ಕುಲಕರ್ಣಿ ಅವರಿಗೆ ಮತ್ತೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇವೆ. ನಾವೆಲ್ಲಾ ಒಮ್ಮತದಿಂದ ಶ್ರೀಕಾಂತ್ ಕುಲಕರ್ಣಿ ಅವರ ಹೆಸರು ಪ್ರಸ್ತಾಪಿಸಿದ್ದೇವೆ. ಇದಕ್ಕೆ ರಾಜ್ಯಾಧ್ಯಕ್ಷರು ಸಮ್ಮತಿ ಸೂಚಿಸಿದ್ದು, ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನಂತರ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಉಪ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲವೇ ಬುಧವಾರ ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿ ಹೈಕಮಾಂಡ್‌ಗೆ ಮಾಹಿತಿ ರವಾನಿಸುತ್ತೇವೆ. ಬಹುತೇಕ ಎಲ್ಲ ಹಂತದಲ್ಲಿ ಚರ್ಚೆಗಳಾಗಿದ್ದು, ಕೋರ್ ಕಮಿಟಿ ಸಭೆಯಲ್ಲಿ ಅಂತಿಮ ಚರ್ಚೆ ನಡೆಯಬೇಕಿದೆ. ಜಮಖಂಡಿ ಕ್ಷೇತ್ರದಿಂದ ಶ್ರೀಕಾಂತ್ ಕುಲಕರ್ಣಿ ಅವರಿಗೆ ಅವಕಾಶ ನೀಡುವಂತೆ ಬೆಂಬಲಿಗರು ಮನವಿ ಮಾಡಿದ್ದು, ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಜತೆಗೆ ಕ್ಷೇತ್ರವಾರು ಚುನಾವಣಾ ಉಸ್ತುವಾರಿಗಳ ನೇಮಕದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಅ.16 ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿರುವುದರಿಂದ ಸೂಕ್ತ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮುಖಂಡರು ಲೆಕ್ಕಾಚಾರ ನಡೆಸಿದ್ದಾರೆ.