ಅಫಜಲಪುರ: 2018-19ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಫಲಾನುಭವಿ ರೈತರನ್ನು ಶಾಸಕ ಎಂ.ವೈ. ಪಾಟೀಲ ಅದ್ಯಕ್ಷತೆಯಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ತಾಪಂ ಸಭಾಂಗಣದಲ್ಲಿ ನಡೆದ ಲಾಟರಿ ಪ್ರಕ್ರಿಯೆಯಲ್ಲಿ ತಾಲೂಕಿನ ವಿವಿಧ ಹಳ್ಳಿಗಳ ರೈತರು ಭಾಗವಹಿಸಿದ್ದರು. ಈ ವೇಳೆ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳಿವೆ. ರೈತರು ಈ ಯೋಜನೆಗಳ ಸದುಪಯೋಗ ಪಡೆಯಬೇಕು. ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಲಾಟರಿ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದರು.
ತೋಟಗಾರಿಕಾ ಕ್ಷೇತ್ರ ಹೆಚ್ಚಳಕ್ಕಾಗಿ ಕ್ರಮ ಕೈಗೊಳ್ಳುತ್ತೇನೆ. ತೋಟಗಾರಿಕಾ ಸಚಿವರೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ
ತಂದು ರೈತರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಹಾಯಕ ತೋಟಗಾರಿಕಾ ಇಲಾಖೆ ನಿರ್ದೇಶಕ ಶಂಕರಗೌಡ ಪಾಟೀಲ ಮಾತನಾಡಿ, ಮಿನಿ ಟ್ರ್ಯಾಕ್ಟರ್, ಈರುಳ್ಳಿ ಶೇಖರಣಾ ಘಟಕ, ಕೃಷಿ ಹೊಂಡ, ಸಮುದಾಯ ಕೆರೆ, ನೆರಳು ಪರದೆ, ಪಾಲಿ ಹೌಸ್, ಬಾಳೆ ಸೇರಿದಂತೆ ಅನೇಕ ತೋಟಗಾರಿಕೆ ಸೌಲಭ್ಯಗಳಿಗಾಗಿ ರೈತರು ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದರು. 335 ರೈತರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ ಶಾಸಕರ ನೇತೃತ್ವದಲ್ಲಿ 42 ರೈತರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ, ಉಳಿದ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಹಾಯ ಮಾಡಲಾಗುತ್ತದೆ ಎಂದರು.
ಜಿ.ಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ ಮಾತನಾಡಿ, ತಾಲೂಕಿನಲ್ಲಿ ಕಡಿಮೆ ಕ್ಷೇತ್ರದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ತೋಟಗಾರಿಕೆ ಬೆಳೆಗಳ ಉತ್ತೇಜನಕ್ಕೆ ಇಲಾಖೆ ಮತ್ತು ಸಂಬಂಧ ಪಟ್ಟವರು ಹೆಚ್ಚಿನ ಒತ್ತು ಕೊಡಬೇಕೆಂದು ಹೇಳಿದರು. ತಾ.ಪಂ ಅದ್ಯಕ್ಷೆ ರುಕ್ಮಿಣಿ ಜಮದಾರ, ಡಿಆರ್‌ಡಿಎ ಶಾಖೆ ಕಲಬುರಗಿಯ ಯೋಜನಾ ನಿರ್ದೇಶಕ ಸೂರ್ಯಕಾಂತ ದಂಡಗುಂಡ, ಅಫಜಲಪುರ ತೋಟಗಾರಿಕಾ ಇಲಾಖೆ ಸಿಬ್ಬಂದಿ ಮತ್ತು ರೈತರು ಇದ್ದರು.