ಬೆಂಗಳೂರು : ಮಾರ್ಚ್ 29 ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ಜಾರಿ ತಂಡಗಳು ರಾಜ್ಯದಲ್ಲಿ ಅಪಾರ ಪ್ರಮಾಣದ ನಗದು ಸೇರಿ ಒಟ್ಟು 375 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಚುನಾವಣಾ ಆಯೋಗ ಸೋಮವಾರ ತಿಳಿಸಿದೆ.
ಒಟ್ಟು ವಶಪಡಿಸಿಕೊಂಡ ಮೌಲ್ಯ ರೂ. 375.6 ಕೋಟಿ) 147 ಕೋಟಿ ರೂ.ನಗದು, 84 ಕೋಟಿ ರೂ. ಮೌಲ್ಯದ ಮದ್ಯ ,97 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ , 24 ಕೋಟಿ ರೂ. ಮೌಲ್ಯದ ಉಚಿತ ವಸ್ತುಗಳು ಮತ್ತು 24 ಕೋಟಿ ರೂ. ಮೌಲ್ಯದ ಡ್ರಗ್ಸ್/ನಾರ್ಕೋಟಿಕ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕದ ಚುನಾವಣಾಧಿಕಾರಿ ಹೇಳಿದ್ದಾರೆ. ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 2,896 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಘೋಷಣೆಗೆ ಮುನ್ನ ವಶಪಡಿಸಿಕೊಂಡ ಒಟ್ಟು ಮೊತ್ತ ಸುಮಾರು 58 ಕೋಟಿ (ಮಾರ್ಚ್ 9 ರಿಂದ ಮಾರ್ಚ್ 27 ರ ಅವಧಿ) ಎಂದು ವಿವರ ಲಭ್ಯವಾಗಿದೆ.
ಬಹಿರಂಗ ಪ್ರಚಾರ ಸೋಮವಾರ ಸಂಜೆ ಕೊನೆ ಗೊಂಡಿದ್ದು ಇನ್ನು ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದೆ. ರಾಜ್ಯದ ಎಲ್ಲೆಡೆ ಮತದಾರರ ಮನ ಗೆಲ್ಲಲು ಕೊನೆಯ ಹಂತದ ಕಸರತ್ತು ಆರಂಭವಾಗಿದ್ದು ಚುನಾವಣ ಅಧಿಕಾರಿಗಳು ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ. ಎಲ್ಲೆಡೆ ಭದ್ರತೆ ಬಿಗಿಗೊಳಿಸಲಾಗಿದ್ದು, ಹದ್ದಿನ ಕಣ್ಣು ಇಡಲಾಗಿದೆ.