ರವಿಚಂದ್ರನ್ ಬರಬಹುದು, ಚಿರು ಮಾತನಾಡಬಹುದು ಅಂತೆಲ್ಲಾ ಅಂದುಕೊಂಡು ಹೋಗಿದ್ದ ಮಾಧ್ಯಮದವರಿಗೆ ಅವರ್ಯಾರೂ ಬರುವುದಿಲ್ಲ, ಇದು ತಂತ್ರಜ್ಞರ ಪತ್ರಿಕಾಗೋಷ್ಠಿ ಎಂದು ಬಹಳ ಬೇಗ ಗೊತ್ತಾಗಿ ಹೋಯಿತು. ಅದು ತಂತ್ರಜ್ಞರನ್ನು ಪರಿಚಯಿಸುವ ಸಲುವಾಗಿಯೇ ಕರೆದ ಪತ್ರಿಕಾಗೋಷ್ಠಿಯಂತೆ. ಆ ಕಾರಣಕ್ಕೆ ಅಂದು ತಂತ್ರಜ್ಞರು ಮಾತ್ರ ಇದ್ದರು.
ನಿರ್ಮಾಪಕ ತ್ರಿವಿಕ್ರಮ್, ನಿರ್ದೇಶಕ ವಿನಯ್ ಕೃಷ್ಣ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಸಂಕಲನಕಾರ ಶ್ರೀಕಾಂತ್ ಸೇರಿದಂತೆ ಹಲವರು ಆ ಗೋಷ್ಠಿಯಲ್ಲಿ ಹಾಜರಿದ್ದರು. ಕಾರ್ ಮಾಫಿಯಾ ಕುರಿತಾದ ಸಿನಿಮಾ “ಸೀಜರ್’. ಆ ವ್ಯವಹಾರದ ಆಳ-ಅಗಲವನ್ನು ನೋಡಿ ಅರ್ಥ ಮಾಡಿಕೊಂಡಿರುವ ವಿನಯ್ ಕೃಷ್ಣ, ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ.
ಈಗಾಗಲೇ ಚಿತ್ರ ಸಂಪೂರ್ಣವಾಗಿದ್ದು, ಇದೇ ತಿಂಗಳ 29ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಅವರು ಯೋಚಿಸುತ್ತಿದ್ದಾರೆ. ಅಂದಹಾಗೆ, ಈ ಚಿತ್ರವು ಬರೀ ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಚಂದನ್ ಶೆಟ್ಟಿ, ಸುಮಾರು ನಾಲ್ಕು ವರ್ಷಗಳ ಹಿಂದೆ ಒಪ್ಪಿಕೊಂಡಂತ ಚಿತ್ರವಂತೆ ಇದು.
“ಈ ಚಿತ್ರದ ನಾಲ್ಕು ಹಾಡುಗಳಿಗೆ ನಾನು ಹಾಡಿದ್ದೇನೆ, ಸಂಗೀತ ಸಂಯೋಜಿಸಿದ್ದೇನೆ ಮತ್ತು ಮೂರು ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದೇನೆ. ಒಬ್ಬ ಹೊಸಬನಿಗೆ ಇದೊಂದು ದಾಖಲೆ ಎಂದರೆ ತಪ್ಪಿಲ್ಲ. ಈಗಾಗಲೇ ಚಿತ್ರದ ಟ್ರೇಲರ್‌ಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಡುಗಳು ಸಹ ಹಿಟ್ ಆಗಿವೆ’ ಎಂದು ಹೇಳಿಕೊಂಡರು.
ನಿರ್ಮಾಪಕ ತ್ರಿವಿಕ್ರಮ್, ಇದಕ್ಕೂ ಮುನ್ನ “ಪರಿ’ ಚಿತ್ರವನ್ನು ನಿರ್ಮಿಸಿದ್ದರು. ಅವರ ಎರಡನೆಯ ಚಿತ್ರ ಪಕ್ಕಾ ಮನರಂಜನಾತ್ಮಕ ಚಿತ್ರವಾಗಬೇಕು ಎಂಬ ಆಸೆ ಅವರಿಗಿತ್ತಂತೆ. ಅದು ಈ ಚಿತ್ರದ ಮೂಲಕ ಈಡೇರಿದೆ ಎಂದು ತ್ರಿವಿಕ್ರಮ್ ಹೇಳಿಕೊಂಡರು. ಇನ್ನು ವಿನಯ್ ಕೃಷ್ಣ ಮಾತನಾಡಿ, ತಂತ್ರಜ್ಞರ ಕೆಲಸದಿಂದ ಬಹಳ ಖುಷಿಯಾಗಿದೆ ಎಂದು ಹೇಳಿಕೊಂಡರು.